ಮಡಿಕೇರಿಯಲ್ಲಿ ನೊಂದ ಸಂತ್ರಸ್ತರಿಗೆ ಪರಿಹಾರ ವಿತರಣೆ

29/01/2021

ಮಡಿಕೇರಿ ಜ.29 : ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ಸರ್ಕಾರಿ ಅಭಿಯೋಜನಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸಂತ್ರಸ್ತರ ಪರಿಹಾರ ಯೋಜನೆಯಡಿ ಪರಿಹಾರ ವಿತರಣಾ ಕಾರ್ಯಕ್ರಮ ಮಡಿಕೇರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಜಿನರಾಳಕರ ಭೀಮರಾವ ಲಗಮಪ್ಪ ಅವರು ಉದ್ಘಾಟಿಸಿ ಮಾತನಾಡಿ ದುರ್ಬಲ ವರ್ಗದವರನ್ನು ಎಲ್ಲಾ ರೀತಿಯಲ್ಲಿ ಸಮಾಜದ ಮುಖ್ಯವಾಹಿನಿಗೆ ತರುವಂತಹ ಕೆಲಸವನ್ನು ಕಾನೂನು ಪ್ರಾಧಿಕಾರ ಮಾಡುತ್ತಿದೆ. ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಶೋಷಿತ ವರ್ಗದವರು ಸಹ ತನ್ನ ಹಕ್ಕು, ಸೌಲಭ್ಯ ಪಡೆಯಲು ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದರು.
ಈ ದಿನ ವಿವಿಧ ಕೃತ್ಯಗಳಲ್ಲಿ ನೊಂದಂತಹ ಸಂತ್ರಸ್ತರಿಗೆ ನಿಯಮದಂತೆ ಸರ್ಕಾರದಿಂದ ಮಂಜೂರಾದ ಹಣದ ಪರಿಹಾರವನ್ನು ನೀಡುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಪ್ರಾಧಿಕಾರದ ವತಿಯಿಂದ ಈಗಾಗಲೇ ಸುಮಾರು 74 ಪ್ರಕರಣಗಳಲ್ಲಿ 1.33 ಕೋಟಿ ರೂ.ನ್ನು ಪರಿಹಾರವಾಗಿ ವಿತರಿಸಲಾಗಿದೆ. ನೊಂದವರಿಗೆ ನೀಡುವ ಈ ಹಣವು ನಿಮ್ಮ ಕಷ್ಟಕ್ಕೆ ನೆರವಾಗಲಿ ಎಂದರು.
ಮಾರ್ಚ್, 27 ರಂದು ನಡೆಯಲಿರುವ ಮೆಘಾ ಲೋಕ ಅದಾಲತ್‍ನಲ್ಲಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸಲು ವಕೀಲರ ಸಹಾಯ ಕೋರಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಕೆ.ಎಸ್.ಕವನ್ ಅವರು ನಿಮಗೆ ಅಥವಾ ನಿಮ್ಮ ಕುಟುಂಬದವರಿಗೆ ಆದಂತಹ ಅಘಾತ ದುಃಖವನ್ನು ಭರಿಸಲು ಸಾಧ್ಯವಿಲ್ಲ. ಆದರೆ ಈ ಪರಿಹಾರದ ಹಣದಿಂದ ನಿಮಗೆ ಆರ್ಥಿಕ ಸಂಕಷ್ಟದಿಂದ ಹೊರಬರಲು ಅಲ್ಪ ಸಹಾಯವಾಗಬಹುದು ಎಂದರು.
ವೇದಿಕೆಯಲ್ಲಿ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪಿ.ಎಸ್.ಚಂದ್ರಶೇಖರ್, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ. ವಿಜಯ ಕುಮಾರ್, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಬಿ.ಕೆ.ಮನು, ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಸ್ಮಿತಾ, ಸರ್ಕಾರಿ ಅಭಿಯೋಜಕರಾದ ಕೆ.ಜಿ.ಅಶ್ವಿನಿ ಇತರರು ಇದ್ದರು.
ಬಿ.ಕೆ.ರೋಹಿಣಿ ಪ್ರಾರ್ಥಿಸಿದರು. ವಕೀಲರ ಸಂಘದ ಉಪಾಧ್ಯಕ್ಷರಾದ ಪಿ.ಯು.ಪ್ರೀತಂ ಅವರು ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಬಿ.ಎಸ್.ಜಯಪ್ಪ ಅವರು ನಿರೂಪಿಸಿ, ವಂದಿಸಿದರು.