ವಾಲ್ನೂರಿನಲ್ಲಿ ಮತ್ತೆ ಕಾಡಾನೆ ದಾಂಧಲೆ : ಬೆಳೆ ನಾಶ

29/01/2021

ಸಿದ್ದಾಪುರ ಜ.29 : ವಾಲ್ನೂರು ಗ್ರಾಮದಲ್ಲಿ ಮತ್ತೆ ಕಾಡಾನೆ ಹಾವಳಿ ಮಿತಿ ಮೀರಿದ್ದು, ಕಾಫಿ ಮತ್ತು ಅಡಿಕೆ ತೋಟಕ್ಕೆ ಹಾನಿಯಾಗಿದೆ.
ಸ್ಥಳೀಯ ಬೆಳೆಗಾರರಾದ ಜಿ.ಎನ್.ರಾಮಪ್ಪ ಹಾಗೂ ಭುವನೇಂದ್ರ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಅಡಿಕೆ ಬೆಳೆಯನ್ನು ನಾಶ ಮಾಡಿವೆ. ಅಲ್ಲದೆ ತೇಗದ ಮರಗಳನ್ನೂ ಜಖಂಗೊಳಿಸಿವೆ. ಹೆಚ್.ಎನ್.ಕೃಷ್ಣಪ್ಪ ಎಂಬುವವರ ತೋಟದಲ್ಲಿ ದಾಂಧಲೆ ನಡೆಸಿರುವ ಗಜಪಡೆ ಕಾಫಿ ಹಾಗೂ ಅಡಿಕೆಗೆ ಹಾನಿ ಮಾಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಕೋವಿಡ್ ಸಂಕಷ್ಟ ಮತ್ತು ಅಕಾಲಿಕ ಮಳೆಯಿಂದ ಈಗಾಗಲೇ ಕಷ್ಟ, ನಷ್ಟ ಅನುಭವಿಸುತ್ತಿರುವ ಬೆಳೆಗಾರರು ಮತ್ತೆ ಕಾಡಾನೆ ಹಾವಳಿಗೆ ಸಿಲುಕಿ ಅತಂತ್ರರಾಗಿದ್ದಾರೆ. ಆದ್ದರಿಂದ ತಕ್ಷಣ ಸರ್ಕಾರ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ನೀಡಬೇಕೆಂದು ಭುವನೇಂದ್ರ ಅವರು ಒತ್ತಾಯಿಸಿದ್ದಾರೆ.