ದಿಲ್ಲಿ ಸಿಂಘು ಗಡಿ ಹಿಂಸಾಚಾರ: ಖಾಕಿ ಮೇಲೆ ತಲ್ವಾರ್‌ನಿಂದ ದಾಳಿ ಮಾಡಿದ ವ್ಯಕ್ತಿ ಸೇರಿ 44 ಮಂದಿ ಅರೆಸ್ಟ್‌

30/01/2021

ಹೊಸದಿಲ್ಲಿ: ದಿಲ್ಲಿಯ ಸಿಂಘು ಗಡಿಯಲ್ಲಿ ಶುಕ್ರವಾರ ಸ್ಥಳಿಯರ ಜೊತೆ ಘರ್ಷಣೆ ಸಂದರ್ಭ ಅಲಿಪುರ್ ಠಾಣಾಧಿಕಾರಿ ಪ್ರದೀಪ್ ಪಲಿವಾಲ್ ಮೇಲೆ ತಲ್ವಾರ್‌ನಿಂದ ದಾಳಿ ನಡೆಸಿದ್ದ ವ್ಯಕ್ತಿ ಸೇರಿ 44 ಜನರನ್ನು ಬಂಧಿಸಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಕೊಲೆ ಯತ್ನ ಮತ್ತು ಸಾರ್ವಜನಿಕ ಸೇವೆಗೆ ಅಡ್ಡಿ ಆರೋಪದಡಿ ಇವರ ವಿರುದ್ಧ ಕೇಸ್‌ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತನನ್ನು ಪಂಜಾಬ್ ಮೂಲದ 22 ವರ್ಷದ ರಂಜೀತ್ ಸಿಂಗ್ ಎಂದು ಗುರುತಿಸಲಾಗಿದೆ. ಈತನೇ ತಲ್ವಾರ್‌ ಹಿಡಿದು ಪೊಲೀಸರ ಮೇಲೆ ದಾಳಿ ನಡೆಸಿದಾಗಿ ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಪ್ರತಿಭಟನಾ ಸ್ಥಳ ಖಾಲಿ‌ ಮಾಡಿ, ಗಡಿ ತೆರೆಯುವಂತೆ ಮನವಿ ಮಾಡಲು 200ಕ್ಕೂ ಅಧಿಕ ಹಳ್ಳಿಗರು ಕಿಸಾನ್ ಮಜದೂರ್ ಸಂಘರ್ಷ ಸಮಿತಿ ಮುಖಂಡರ ಭೇಟಿಗೆ ಅಲಿಪುರ್ ಪ್ರದೇಶಕ್ಕೆ ಬಂದಿದ್ದರು. ಈ ವೇಳೆ ಘರ್ಷಣೆ ನಡೆದಿತ್ತು. ಈ ಮಾರಾಮಾರಿಯಲ್ಲಿ ಪೊಲೀಸರು ಸೇರಿ ಹಲವರಿಗೆ ಗಾಯಗಳಾಗಿತ್ತು.