ಮಡಿಕೇರಿಯಲ್ಲಿ ಅರ್ಥಪೂರ್ಣವಾಗಿ ನಡೆದ ಹುತಾತ್ಮರ ದಿನಾಚರಣೆ

30/01/2021

ಮಡಿಕೇರಿ ಜ. 30 : ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ವತಿಯಿಂದ ಹುತಾತ್ಮರ ದಿನಾಚರಣೆಯನ್ನು ನಗರದಲ್ಲಿ ಶನಿವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ನಗರದ ಜಿಲ್ಲಾಡಳಿತ ಭವನ ಜಿಲ್ಲಾ ಖಜಾನೆಯಲ್ಲಿರಿಸಲಾದ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು ಹೊರತೆಗೆದು ಪುಷ್ಪಮಾಲೆಗಳಿಂದ ಶೃಂಗರಿಸಿ ಗೌರವ ಸಮರ್ಪಣೆ ಮಾಡಲಾಯಿತು.
ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ಸದಸ್ಯರ ನೇತೃತ್ವದಲ್ಲಿ ಪೊಲೀಸ್ ಬ್ಯಾಂಡ್ ನೊಂದಿಗೆ ನಗರದ ಮಂಗೇರಿರ ಮುತ್ತಣ್ಣ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಮುಖ್ಯರಸ್ತೆ ಮೂಲಕ ಗಾಂಧೀಜಿಯವರ ಚಿತಾಭಸ್ಮವನ್ನು ಕೊಂಡೊಯ್ದು ಗಾಂಧಿ ಮಂಟಪದಲ್ಲಿರಿಸಿ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಮರ್ಪಿಸಲಾಯಿತು.
ಇದೇ ವೇಳೆ ಪೊಲೀಸ್ ಇಲಾಖೆಯಿಂದ ಮೂರು ಸುತ್ತುಗಳ ಕುಶಾಲತೋಪು ಹಾರಿಸುವ ಮೂಲಕ ರಾಷ್ಟ್ರಪಿತರಿಗೆ ಪೊಲೀಸ್ ಗೌರವಾರ್ಪಣೆ ಸಲ್ಲಿಸಲಾಯಿತು.
ಗಾಂಧಿ ಮಂಟಪದಲ್ಲಿ ಸರ್ವಧರ್ಮ ಪ್ರಾರ್ಥನೆ, ಗಾಂಧೀಜಿಯವರ ಮೆಚ್ಚಿನ ಭಜನಾ ಗಾಯನ ಕಾರ್ಯಕ್ರಮವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ವಿದ್ಯಾರ್ಥಿಗಳು ನಡೆಸಿಕೊಟ್ಟರು, ಸರ್ವಧರ್ಮ ಗುರುಗಳಿಂದ ಭಗವದ್ಗೀತೆ, ಬೈಬಲ್, ಕುರಾನ್ ಸಂದೇಶಗಳ ಪಠಣ ಮಾಡಲಾಯಿತು.
ಸರ್ಕಾರಿ ಗೌರವಾರ್ಪಣೆ ಹಾಗೂ ಮೌನಾಚರಣೆಯ ನಂತರ ಮೆರವಣಿಗೆಯಲ್ಲಿ ಗಾಂಧೀಜಿ ಚಿತಾಭಸ್ಮವನ್ನು ಮತ್ತೆ ಜಿಲ್ಲಾ ಖಜಾನೆಯಲ್ಲಿಟ್ಟು ಭದ್ರಗೊಳಿಸಲಾಯಿತು.
ಮಾಜಿ ಸಚಿವರಾದ ಎಂ.ಸಿ.ನಾಣಯ್ಯ, ಜಿಲ್ಲಾಧಿಕಾರಿ ಚಾರುಲತ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್, ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಸರ್ವೋದಯ ಸಮಿತಿ ಸದಸ್ಯರಾದ ಕೋಡಿ ಚಂದ್ರಶೇಖರ್, ಚುಮ್ಮಿ ದೇವಯ್ಯ, ಕಾನಹಿತ್ಲು ಮೊಣ್ಣಪ್ಪ, ಸೂರಯ್ಯ ಅಬ್ರಾರ್, ಮುನೀರ್ ಅಹ್ಮದ್, ಕೇಶವ ಕಾಮತ್, ಲಿಯಾಕತ್ ಅಲಿ, ಮಿನಜ್, ಆರ್.ಪಿ.ಚಂದ್ರಶೇಖರ್, ಜಾನ್ಸನ್ ಪಿಂಟೋ, ಸುಬ್ರಮಣಿ ಎಂ.ಎನ್, ರೇವತಿ ರಮೇಶ್, ವಿಲ್‍ಫ್ರೆಡ್ ಕ್ರಾಸ್ತ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ, ತಹಶೀಲ್ದಾರ್ ಮಹೇಶ್, ನಗರಸಭೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಯತ್ನಟ್ಟಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಲಿ, ಕಾರ್ಮಿಕ ಅಧಿಕಾರಿ ಅನಿಲ್ ಭಗಟಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದರ್ಶನ್, ವಾರ್ತಾಧಿಕಾರಿ ಚಿನ್ನಸ್ವಾಮಿ, ಮಣಜೂರು ಮಂಜುನಾಥ್ ಮತ್ತಿತರರು ಇದ್ದರು.
ಬಳಿಕ ಮಾತನಾಡಿದ ಮಾಜಿ ಸಚಿವರಾದ ಎಂ.ಸಿ.ನಾಣಯ್ಯ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇರುವುದು ಇಡೀ ರಾಷ್ಟ್ರದಲ್ಲೇ ವಿಶೇಷವಾಗಿದ್ದು, ಆ ದಿಸೆಯಲ್ಲಿ ನಗರದ ಗಾಂಧೀ ಮಂಟಪದಲ್ಲಿಯೇ ಚಿತಾಭಸ್ಮವಿಟ್ಟು ರಾಜ್‍ಘಾಟ್ ಮಾದರಿಯಲ್ಲಿ ‘ಸ್ಮಾರಕ ನಿರ್ಮಾಣ’ ಮಾಡುವಂತಾಗಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ 15 ವರ್ಷಗಳಿಂದ ರಾಜ್‍ಘಾಟ್ ಮಾದರಿಯಲ್ಲಿ ಗಾಂಧಿ ಮಂಟಪದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡುತ್ತಾ ಬರಲಾಗಿದೆ. ಆದರೆ ಇದುವರೆಗೆ ಕಾರ್ಯಗತವಾಗಿಲ್ಲ, ಆದ್ದರಿಂದ ಈಗಾಲಾದರೂ ಈ ಕಾರ್ಯಕ್ಕೆ ಚಾಲನೆ ನೀಡುವಂತಾಗಬೇಕು ಎಂದು ಎಂ.ಸಿ.ನಾಣಯ್ಯ ಅವರು ಕೋರಿದರು.
ಈಗಾಗಲೇ ಗಾಂಧಿ ಭವನವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಗಾಂಧಿ ಭವನದಲ್ಲಿ ಸಭಾ ಕಾರ್ಯಕ್ರಮಗಳು, ಗ್ರಂಥಾಲಯ ಮತ್ತಿತರ ಚಟುವಟಿಕೆಗಳು ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದರು.
ಸರ್ವೋದಯ ಸಮಿತಿ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ವತಿಯಿಂದ ಹಲವು ವರ್ಷಗಳಿಂದ ಹುತಾತ್ಮರ ದಿನಾಚರಣೆಯನ್ನು ಹಮ್ಮಿಕೊಂಡು ಬರಲಾಗಿದೆ. ಆ ನಿಟ್ಟಿನಲ್ಲಿ ಗಾಂಧಿ ಮಂಟಪದಲ್ಲಿ ಮಹಾತ್ಮ ಗಾಂಧೀಜಿಯವರ ಸ್ಮಾರಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಈಗಾಗಲೇ ನೀಲನಕ್ಷೆ ತಯಾರಿಸಲಾಗಿದ್ದು, ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು ಅವರು ತಿಳಿಸಿದರು.
ಗಾಂಧಿ ಮಂಟಪದಲ್ಲಿ ಚಿತಾಭಸ್ಮವಿಟ್ಟು ಸ್ಮಾರಕ ನಿರ್ಮಿಸುವಂತಾಗಲು ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗಿದೆ. ಆ ನಿಟ್ಟಿನಲ್ಲಿ ಶಾಸಕರಲ್ಲಿ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಗಾಂಧಿ ಮಂಟಪದಲ್ಲಿ ಮಹಾತ್ಮ ಗಾಂಧೀಜಿಯವರ ‘ಸ್ಮಾರಕ ಭವನ’ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು, ಕಾರ್ಯರೂಪಕ್ಕೆ ಬರಬೇಕಿದೆ ಎಂದು ಅವರು ತಿಳಿಸಿದರು.