ಮಡಿಕೇರಿ ರಸ್ತೆಗಳ ಅಭಿವೃದ್ಧಿಗೆ ಕ್ರಮ : ಶಾಸಕ ಅಪ್ಪಚ್ಚು ರಂಜನ್ ಭರವಸೆ

30/01/2021

ಮಡಿಕೇರಿ ಜ.30 : ನಗರದ ಕಾನ್ವೆಂಟ್ ಜಂಕ್ಷನ್, ಕನ್ನಿಕಾ ಬಡಾವಣೆ ಮತ್ತು ಉಪ ನೋಂದಣಾಧಿಕಾರಿ ಬಳಿಯ ರಸ್ತೆಯನ್ನು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕರು ನಗರದ ವಿವಿಧ ಬಡಾವಣೆಗಳ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಶ್ರಮಿಸಲಾಗಿದೆ ಎಂದು ಅವರು ತಿಳಿಸಿದರು.
ಮಡಿಕೇರಿ ನಗರಸಭೆ ವ್ಯಾಪ್ತಿಯ ಕಾನ್ವೆಂಟ್ ಜಂಕ್ಷನ್ ಸಂತ ಜೋಸೆಫರ ಶಾಲೆಗೆ ಹೋಗುವ ರಸ್ತೆ ಮತ್ತು ಹರಿಹರ ಸರ್ವೀಸ್ ಸ್ಟೇಷನ್ ನಿಂದ ದೇಚೂರು ಗಣಪತಿ ದೇವಸ್ಥಾನದವರೆಗೆ, ಕನ್ನಿಕಾ ಬಡಾವಣೆ ಒಳಭಾಗದ ಕಾಂಕ್ರಿಟ್ ರಸ್ತೆ, ಸಬ್ ರಿಜಿಸ್ಟ್ರಾರ್ ಕಚೇರಿಯ ಮುಂಭಾಗದಿಂದ ಲೀ ಕೂರ್ಗ್ ಹೋಟೆಲ್ ಹಿಂಭಾಗದಿಂದ ಕಂಚಿಕಾಮಾಕ್ಷಿ ದೇವಾಲಯದಿಂದ ನಗರಸಭೆ ಕಚೇರಿ ಹತ್ತಿರದ ಪಾರ್ಕ್ ಸೇರುವ ರಸ್ತೆ ಅಭಿವೃದ್ದಿ ಕಾಮಗಾರಿ, ವಿಜಯ ವಿನಾಯಕ ದೇವಾಸ್ಥಾನದಿಂದ ಆರ್ಮಿ ಕ್ಯಾಂಟೀನ್ ಸೇರುವವರೆಗೆ ಮತ್ತು ಕುಂದುರುಮೊಟ್ಟೆ ದೇವಸ್ಥಾನ, ಲೀವಾ ಕ್ಲಿನಿಕ್ ಸೇರುವವರೆಗೆ ರಸ್ತೆ ಮರು ಡಾಂಬರೀಕರಣ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.
ಚಾಮುಂಡೇಶ್ವರಿ ನಗರದ ಸಮುದಾಯ ಭವನ ಹತ್ತಿರ, ಆಕಾಶವಾಣಿ ಕ್ವಾಟ್ರಸ್ ಹಿಂಭಾಗ ರಸ್ತೆ ಮತ್ತು ಆಯ್ದ ಭಾಗಗಳಲ್ಲಿ ಹೊಸ ರಸ್ತೆ ಹಾಗೂ ನ್ಯಾಯಾಧೀಶರ ನಿವಾಸ ಮುಂಭಾಗದಿಂದ ಜ್ಯೋತಿನಗರ ಫೀಲ್ಟರ್ ಹೌಸ್ ಸೇರುವ ರಸ್ತೆ ಮತ್ತು ಸಂಪಿಗೆಕಟ್ಟೆಯಿಂದ ಕರಗ ಮಂಟಪಕ್ಕೆ ಹೋಗುವ ರಸ್ತೆಯನ್ನು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಶನಿವಾರ ಉದ್ಘಾಟಿಸಿದರು.
ನಗರಸಭೆ ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಪ್ರಮುಖರಾದ ಅನಿತಾ ಪೂವಯ್ಯ, ಮನು ಮಂಜುನಾಥ್, ನಗರಸಭೆ ಎಇಇ ಎಂ.ಎಸ್.ರಾಜೇಂದ್ರ ಕುಮಾರ್, ಕಿರಿಯ ಅಭಿಯಂತರರಾದ ಸಮಂತ್ ಕುಮಾರ್ ಇತರರು ಇದ್ದರು.