ಫೀ.ಮಾ.ಕಾರ್ಯಪ್ಪರಿಗೆ ಭಾರತ ರತ್ನ ಸೇರಿದಂತೆ 11 ನಿರ್ಣಯ ಮಂಡಿಸಿದ ಸಮ್ಮೇಳನ

January 30, 2021

ಮಡಿಕೇರಿ ಜ.30 : ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಬೆಲೆಗಾರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ಕೊಡಗಿನ ಕಾಫಿಗೆ ಬೆಂಬಲ ಬೆಲೆ ನಿಡುವಂತೆ, ಫೀ.ಮಾ.ಕೆ.ಎಂ. ಕಾರ್ಯಪ್ಪರಿಗೆ ಮರಣೋತ್ತರ ‘ಭಾರತ ರತ್ನ’ ನೀಡುವುದು ಸೇರಿದಂತೆ ಒಟ್ಟು 11 ಪ್ರಮುಖ ನಿರ್ಣಗಳನ್ನು ಕೊಡಗು ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾಗಿದೆ.
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅಧ್ಯಕ್ಷತೆಯಲ್ಲಿ ನಡೆದ ‘ಬಹಿರಂಗ ಅಧಿವೇಶನ’ಲ್ಲಿ ಕಸಾಪ ಗೌರವ ಕೋಶಾಧ್ಯಕ್ಷರಾದ ಎಸ್.ಎ.ಮುರಳೀಧರ್ ನಿರ್ಣಯಗಳನ್ನು ಮಂಡಿಸಿದರು.
ಕಳೆದ ಮೂರು ವರ್ಷಗಳ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ಬೆಳೆಗಾರ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದರಿಂದ ಸರಕಾರ ಶೀಘ್ರವಾಗಿ ಕಾಫಿಗೆ ಬೆಂಬಲ ಬೆಲೆ ಘೋಷಿಸುವಂತೆ, ರಾಜ್ಯದ ಗಡಿ ಜಿಲ್ಲೆಯಾದ ಕೊಡಗಿನಲ್ಲಿ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡಲು ಅಗತ್ಯ ಕ್ರಮ ಕೈಗೊಳ್ಳವಂತೆ ಒತ್ತಾಯಿಸುವ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರಾಕೃತಿಕ ವಿಕೋಪದಿಂದ ಜಿಲ್ಲೆ ಆರ್ಥಿಕವಾಗಿ ಹಿನ್ನಡೆಯನ್ನು ಕಂಡಿರುವ ಹಿನ್ನೆಲೆ, ಇಲ್ಲಿನ ಆರ್ಥಿಕತೆಯ ಪುನಶ್ಚೇತನಕ್ಕೆ ಪೂರಕವಾಗಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಒತ್ತು ನೀಡಬೇಕು, ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಶಿಕ್ಷಕರನ್ನು ಶೀಘ್ರ ನೇಮಿಸಬೇಕು, ದಿನದಿಂದ ದಿನಕ್ಕೆ ಕಲುಷಿತಗೊಳ್ಳುತ್ತಿರುವ ಕಾವೇರಿಯ ಉಳಿವಿಗೆ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ಣಯದ ಮೂಲಕ ಒತ್ತಾಯಿಸಲಾಗಿದೆ.
ಕೊಡಗು ಕ್ರೀಡಾ ಜಿಲ್ಲೆಯಾಗಿದ್ದು, ಇಲ್ಲಿನ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನವನ್ನು ಒದಗಿಸಬೇಕು, ದೇಶಸೇವೆಯಲ್ಲಿ ತೊಡಗಿರುವ ಜಿಲ್ಲೆಯ ಯೋಧರಿಗೆ ನಿವೇಶನ ಮತ್ತು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು, 10ನೇ ತರಗತಿಯವರೆಗೆ ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡಿದವರಿಗೆ ರಾಷ್ಟ್ರೀಯ ಮಟ್ಟದ ನೇಮಕಾತಿಗಳ ಸಂದರ್ಭ ಉದ್ಯೋಗಾವಕಾಶ ಕಲ್ಪಿಸಬೇಕು, ವನ್ಯ ಜೀವಿಗಳ ಹಾವಳಿಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸೂಕ್ತ ಪರಿಹಾರ ಒದಗಿಸಬೇಕು ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ವಾಹನ ದಟ್ಟಣೆಯೂ ಜಿಲ್ಲೆಯಲ್ಲಿ ಜಾಸ್ತಿಯಾಗಿದ್ದು, ವಾಹನ ನಿಲುಗಡೆಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವ ನಿರ್ಣಯಗಳನ್ನು ಕೈಗೊಳ್ಳಲಾಯಿತು.ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್ ಸ್ವಾಗತಿಸಿದರು.

error: Content is protected !!