ಆಹಾರ – ನೀರು ಅರಸಿ ನಾಡಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು : ಕಣ್ಣುಮುಚ್ಚಿ ಕುಳಿತ ಅರಣ್ಯ ಇಲಾಖೆ, ಜನಪ್ರತಿನಿಧಿಗಳ ಮೌನ….! ?

February 1, 2021

ಕಣಿವೆ : ಕಾಡಾನೆಗಳು ಕೊಡಗು ಜಿಲ್ಲೆಯ ಬಹುತೇಕ ಪ್ರದೇಶಗಳ ರೈತರ ನೆಮ್ಮದಿಯನ್ನು ಕೆಡಿಸಿರುವುದು ಪ್ರಸ್ತುತದ ಬಹು ದೊಡ್ಡ ಸಮಸ್ಯೆಯೇ ಸರಿ.
ಮರಗಳ ಕಳ್ಳ ಸಾಗಾಣಿಕೆ, ಭೂ ಒತ್ತುವರಿ, ಮಿತಿಮೀರಿದ ಗಣಿಗಾರಿಕೆ ಹಾಗು ಅಭಿವೃದ್ದಿ ಯೋಜನೆಗಳಿಗೆಲ್ಲಾ ಅರಣ್ಯವನ್ನು ಕಬಳಿಸುತ್ತಲೇ ಬರುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶ ಸಹಜವಾಗಿಯೇ ಕ್ಷೀಣಿಸುತ್ತಿದೆ. ಪರಿಣಾಮವಾಗಿ ವನ್ಯಮೃಗಗಳು ನೆಲೆ ಕಂಡುಕೊಳ್ಳಲು ಹಾಗು ಹಸಿವು ದಾಹ ನೀಗಿಸಿಕೊಳ್ಳಲು ನಾಡಿಗೆ ಲಗ್ಗೆ ಇಡಲಾರಂಭಿಸಿವೆ. ದಶಕಗಳ ಹಿಂದೆ ಕಾಡಾನೆಗಳ ಹಿಂಡು ಹಗಲು ಹಳ್ಳಿಗಳತ್ತ ಮುಖ ಮಾಡುತ್ತಿದ್ದುದು ಅಪರೂಪ ವಾಗಿತ್ತು. ಆದರೆ ಈಗ ಹಾಡು ಹಗಲೇ ಕಾಡಾನೆಗಳು ನಾಡಿನತ್ತ ಮುಖ ಮಾಡುತ್ತಿದ್ದು ರೈತರಷ್ಟೇ ಅಲ್ಲ ನಿವಾಸಿಗಳ ನೆಮ್ಮದಿಯನ್ನೂ ಕಸಿದಿದೆ. ಆದರೆ ಅರಣ್ಯ ಇಲಾಖೆಯಾಗಲೀ, ಜನಪ್ರತಿನಿಧಿಗಳಾಗಲೀ ಈ ಕಾಡಾನೆಗಳ ಆಕ್ರಂದನವನ್ನು ಅರಿಯುತ್ತಲೇ ಇಲ್ಲ.
ಕೊಡಗಿನ ಬಹುತೇಕ ಅರಣ್ಯ ಪ್ರದೇಶಗಳ ತೀರದ ಜನವಸತಿ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಎಂಬುದು ನಿತ್ಯವೂ ಬಿಡದೇ ಕಾಡುತ್ತಿದೆ.
ಇಲ್ಲಿ ಕಾಡಾನೆಗಳ ಸಂತತಿ ಹೆಚ್ಚಾಗಿದೆಯೋ..? ಇಲ್ಲವೇ ಕಾಡಾನೆಗಳ ಹಾವಳಿ ಹೆಚ್ಚಾಗಿದೆಯೋ ಎಂಬುದು ಕೊಡಗು ಜಿಲ್ಲೆಯ ಜನರ ಮುಂದಿರುವ ಪ್ರಶ್ನೆ..!
ಆದರೆ ಇಲ್ಲಿ ಕೂಲಂಕುಷವಾಗಿ ಪರಿಶೀಲಿಸಿದಾಗ ಕಾಡಾನೆಗಳ ಸಂತತಿ ಹೆಚ್ಚಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುವ ವಾಸ್ತವ.
ಕಾಡಾನೆಗಳ ಹಾವಳಿ ಎಂಬುದು ಇಂದು ಮತ್ತು ನೆನ್ನೆಯ ಸಮಸ್ಯೆ ಅಲ್ಲವೇ ಅಲ್ಲ. ಅದೂ ಬಹಳ ಹಿಂದಿನಿಂದಲೂ ಇದೆ. ಕಳೆದ ಮೂರು ದಶಕಗಳ ಈಚೆಗೆ ಒಂದಷ್ಟು ಹೆಚ್ಚಾಗಿಯೇ ಇದೆ.
ಕಾಡಾನೆಗಳ ಹಾವಳಿ ಭತ್ತದ ಫಸಲಿನ ಸಂದರ್ಭದಲ್ಲಿ ಹೆಚ್ಚಾಗಲೂ ಕಾರಣವೇನು ? ಎಂಬ ಪ್ರಶ್ನೆಗೆ ಉತ್ತರವನ್ನು ಅರಸಿ ಕಾಡಿನೊಳಗೆ ತೆರಳಿದಾಗ ಕಾಣುವ ನಗ್ನ ಸತ್ಯವಿದೆಯಲ್ಲಾ ? ಅದು ವ್ಯವಸ್ಥೆಯ ಮೇಲೆ ಆಕ್ರೋಷವನ್ನು ಮೂಡಿಸುತ್ತದೆ. ಕಾಡಾನೆಗಳ ಹಾವಳಿ ಹೆಚ್ಚಾಗಲು ಅರಣ್ಯ ಇಲಾಖೆಯೇ ಕಾರಣ ಹೊರತು ಬೇರೆ ಯಾರೂ ಕೂಡ ಅಲ್ಲ…!
ನಾಡಿನಲ್ಲಿರಬೇಕಾದ ಸಾಕು ಪ್ರಾಣಿಗಳು ಕಾಡಿನೊಳಗಿವೆ. ಕಾಡಿನೊಳಗೆ ಇರಬೇಕಾದ ವನ್ಯ ಪ್ರಾಣಿಗಳು ನಾಡಿಗೆ ಬರುತ್ತಿವೆ.
ಕಾರಣ, ಕಾಡಿನೊಳಗೆ ಈ ಕಾಡಾನೆಗಳು ತಿನ್ನುವ ಸೊಪ್ಪು, ಸೆದೆಗಳಿಲ್ಲ. ಬಿದಿರಂತೂ ಮೊದಲೇ ಇಲ್ಲ.
ದೊಡ್ಡ ಹೊಟ್ಟೆಯ ಕಾಡಾನೆಗಳಿಗೆ ಅರಣ್ಯದೊಳಗೆ ಯಾವುದೇ ಆಹಾರ ಸಿಗದ ಕಾರಣ ಹಗಲಿಡೀ ಅರಣ್ಯದ ಗಿಡ ಮರಗಳ ಪೊದೆಗಳ ಬಳಿ ಕಾಲಹರಣ ಮಾಡುತ್ತಾ, ಬೆಳಕು ಸರಿಸಿ ಕತ್ತಲೆ ಆವರಿಸಲೆಂದು ಸೂರ್ಯ ದೇವನಿಗೆ ಒಂದಷ್ಟು ಶಪಿಸುತ್ತಾ ಜಪಿಸುತ್ತಾ ಕಾಲಹರಣ ಮಾಡುವ
ಈ ಕಾಡಾನೆಗಳು ಮಬ್ಬುಗತ್ತಲು ಆವರಿಸಿದೊಡನೆ ಒಂದೇ ಸಮನೆ ನಾಡಿಗೆ ಲಗ್ಗೆಯಿಟ್ಟು ರೈತಾಪಿಗಳು ಬೆಳೆವ ಬೆಳೆಗಳನ್ನು ತಿಂದು ಮತ್ತು ತುಳಿದು ನಾಶ ಮಾಡಿ ಹಸಿವಾದ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿವೆ.
ದಿನವೊಂದಕ್ಕೆ ಕಾಡಾನೆಗಳಿಗೆ 400 ರಿಂದ 500 ಕೆಜಿ ಆಹಾರ ಬೇಕು. 250 ರಿಂದ 300 ಲೀಟರ್ ನಷ್ಟು ಕುಡಿವ ನೀರು ಬೇಕು. ಆದರೆ ಈ ಕಾಡಾನೆಗಳ ಹೆಸರಿನಲ್ಲಿ ಕರ್ತವ್ಯ ಪಾಲನೆ ಮಾಡುತ್ತಿರುವ ಅರಣ್ಯ ಹಾಗು ವನ್ಯ ಜೀವಿ ವಿಭಾಗದ ಅಧಿಕಾರಿಗಳು ಕಾಡಿನೊಳಗೆ ಕಾಡಾನೆಗಳಿಗೆ ಬೇಕಾದಂತಹ ಸೊಪ್ಪು – ಸೆದೆಗಳ ಗಿಡಗಳನ್ನು ನೆಟ್ಟು ಬೆಳೆಸುತ್ತಿಲ್ಲ. ಕಾಡಾನೆಗಳ ಹಸಿವು ನೀಗಿಸಲು ಉಪಯುಕ್ತವಾಗಬಲ್ಲಂತಹ ತೊಗಟೆ ಇರುವಂತಹ ಮರಗಳು ಕಾಡಿನೊಳಗೆ ಮೊದಲೇ ಇಲ್ಲ. ಇದ್ದಂತಹ ಅಳಿದುಳಿದ ಮರಗಳು
ಕಳ್ಳಸಾಗಾಣಿಕೆ ದಾರರ ಪಾಲಾದವು. ಈ ನಡುವೆ ‘ ಶುಂಠಿ ‘ ಎಂಬ ಸುಂದರ ಹೆಸರು ಕೊಡಗಿನಾದ್ಯಂತ ರಾರಾಜಿಸುತ್ತಿದ್ದಂತೆಯೇ ಕೊಡಗಿನ ಸಾಕಷ್ಟು ಮಂದಿ ತಮ್ಮ ಬಳಿ ಅಳಿದುಳಿದಿದ್ದ ಕಾಡು ಜಾಗವನ್ನು ಕೇರಳದವರಿಗೆ ಕರೆ ಕರೆದು ಕೊಟ್ಟರು.
ಮಣ್ಣನ್ನು ಹೊನ್ನು ಮಾಡುವ ಭರದಲ್ಲಿ ಕಾಡು ಮಟ್ಟಸ ಮಯವಾಯಿತು.
” ಕಾಡು ಉಳಿಸಿ – ನಾಡು ಬೆಳೆಸಿ” ಎಂಬ ವಾಕ್ಯ ಕೇವಲ ಅರಣ್ಯ ಇಲಾಖೆಯ ಫಲಕಗಳಲ್ಲಿ ರಾರಾಜಿಸಿತೇ ಹೊರತು ಅದನ್ನು ” ಕಾಡು ಕಡಿದು ನಾಡು ಉಳಿಸಿ ” ಎಂದು ತಿದ್ದಿಕೊಳ್ಳಲಾಯಿತು.
ಈಗಲೂ ಅರಣ್ಯಗಳಲ್ಲಿ ಗಿಡಗಳನ್ನು ಬೆಳೆಸುವ ಕಾರ್ಯ ಗಂಭೀರವಾಗಿ ತೆಗೆದುಕೊಳ್ಳದ ಅರಣ್ಯ ಇಲಾಖೆ ತಮಗೆ ಲಾಭವಾಗಬಲ್ಲಂತಹ ವಾಣಿಜ್ಯ ಉದ್ದೇಶದ ಮರಗಳನ್ನು ಬೆಳೆಸುತ್ತಿದೆಯೇ ಹೊರತು ಕಾಡಾನೆ, ಜಿಂಕೆಗಳಂತಹ ವನ್ಯ ಪ್ರಾಣಿಗಳಿಗೆ ಬೇಕಾದಂತಹ ಗಿಡ ಮರಗಳನ್ನು ಬೆಳೆಸುತ್ತಿಲ್ಲ.
ಕಾಡಾನೆಗಳನ್ನು ಓಡಿಸಲು ಕಾಡೇ ಇಲ್ಲ :
ಹಿಂದೆ ಕಾಡಾನೆಗಳು ನಾಡಿಗೆ ಲಗ್ಗೆ ಇಟ್ಟಾಗ ಕಾಡಂಚಿನ ಜನ ಅವುಗಳನ್ನು ಕಾಡಿನತ್ತ ಮರಳಿಸುತ್ತಿದ್ದರು. ಆದರೆ ಇಂದು ಕಾಡಾನೆಗಳನ್ನು ಕಾಡಿಗೋಡಿಸಲು ಕಾಡೇ ಇಲ್ಲ.
ಇರುವ ಒಂದಷ್ಟು ಕಾಡಿನೊಳಗೆ ನೀಲಗಿರಿ ಹಾಗು ತೇಗದಂತಹ ಬಂಜರು ಕಾಡು ಇದೇ ಹೊರತು ಕಾಡಾನೆಗಳಿಗೆ ಅತ್ಯಂತ ಹೆಚ್ಚು ಪ್ರಿಯವಾದ ಹಲಸು, ಬಿದಿರು, ಮಾವು, ಆಲ, ಹತ್ತಿ ಮೊದಲಾದ ಮರಗಳಂತೂ ಇಲ್ಲವೇ ಇಲ್ಲ.
ಕಾಡಂಚಿನ ರೈತಾಪಿಗಳು ಬೆಳೆದ ರಾಗಿ, ಭತ್ತ, ಕ್ಯಾನೆ, ಗೆಣಸು ಹಾಗು ತೋಟಗಳ ಬೆಳೆಗಾರರು ಬೆಳೆಸಿರುವ ತೆಂಗು, ಅಡಿಕೆ, ಬಾಳೆ, ಹಲಸು ಮೊದಲಾದ ಬೆಳೆಗಳನ್ನು ತಿಂದು ನೆಲಕ್ಕುರುಳಿಸಿ ಅರೆ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ.
ಕುಡಿವ ನೀರು ಅರಸಿ ನದಿಗಳತ್ತ ಲಗ್ಗೆ :
ಇನ್ನು ಕಾಡಾನೆಗಳು ತಮ್ಮ ದಾಹ ನಿವಾರಿಸಲು ಅರಣ್ಯಗಳ ಒಳಗೆ ಕೆರೆ ಕಟ್ಟೆಗಳಲ್ಲಿ ನೀರು ಇಲ್ಲದ ಕಾರಣ ಕಾವೇರಿ ನದಿ ಹಾಗು ಹಾರಂಗಿ ನದಿಯತ್ತ ಮುಖ ಮಾಡುತ್ತಿವೆ.
ಏಕೆಂದರೆ ಹುದುಗೂರು, ಬೆಂಡೇ ಬೆಟ್ಟ, ಹಾರಂಗಿ, ಯಡವನಾಡು ಅರಣ್ಯ ಪ್ರದೇಶದಲ್ಲಿನ ಕಾಡಾನೆಗಳು ಅಲ್ಲಿಗೆ ಸಮೀಪದ ಹಾರಂಗಿ ಜಲಾಶಯಕ್ಕೆ ಲಗ್ಗೆ ಇಟ್ಟರೆ, ಸೀಗೆ ಹೊಸೂರು, ಭುವನಗಿರಿ, ಜೇನು ಕಲ್ಲು ಬೆಟ್ಟ ಅರಣ್ಯ ವ್ಯಾಪ್ತಿಯ ಕಾಡಾನೆಗಳು ಕಣಿವೆ ಬಳಿಯ ಕಾವೇರಿ ನದಿಗೆ ಲಗ್ಗೆ ಇಡುತ್ತಿವೆ.
ಕಳೆದ ತಿಂಗಳು ಗೊಂದಿ ಬಸವನಹಳ್ಳಿ ಹಾಗು ಅತ್ತೂರು ಅರಣ್ಯ ಭಾಗದಲ್ಲಿನ ಕಾಡಾನೆಯೊಂದು ಕುಶಾಲನಗರ ಪಟ್ಟಣದ ಸೆರಗಿನ ಮಾದಾಪಟ್ಟಣದ ಕೆಎಂಟಿ ವಿದ್ಯಾಸಂಸ್ಥೆಯ ಒಳಗೆ ನುಗ್ಗಿ ಸುದ್ದಿಯಾಗಿತ್ತು.
ಕಳೆದ ವಾರ ಕಣಿವೆಯ ಭಾರದ್ವಾಜ ಆನಂದತೀರ್ಥ ಅವರ ತೋಟಕ್ಕೆ ನುಗ್ಗಿದ ನಾಲ್ಕು ಕಾಡಾನೆಗಳ ಹಿಂಡು ಕಣಿವೆಯ ಕಾವೇರಿ ನದಿಯೊಳಗೆ ಬಂದು ರಾಮಲಿಂಗೇಶ್ವರ ದೈವ ಸನ್ನಿಧಿಗೂ ಧಾವಿಸಿತ್ತು.
ಅಷ್ಟೇ ಅಲ್ಲ ಕಳೆದ ಕೆಲ ದಿನಗಳ ಹಿಂದೆ ಕೂಡಿಗೆಯ ಸೈನಿಕ ಶಾಲೆಯ ಬಳಿಯ ಹಾರಂಗಿ ನದಿಯೊಳಗೆ ಹಿಂಡು ಹಿಂಡು ಕಾಡಾನೆಗಳು ಧಾವಿಸಿದ್ದವು.
ಈ ಸಂಗತಿಗಳನ್ನು ನೋಡುತ್ತಿದ್ದರೆ ನಾವಿರುವ ಜಾಗವನ್ನು ಅತಿಕ್ರಮಿಸಿ ಆಕ್ರಮಿಸಿ ಮನೆಗಳನ್ನು ಕಟ್ಟಿಕೊಂಡಿರುವ ನಿಮ್ಮನ್ನು ನಾವು ಸುಮ್ಮನಿರಲು ಬಿಡಲಾರೆವು ಎಂಬ ಸಂದೇಶವನ್ನು ಮಾನವರಿಗೆ ಕಾಡಾನೆಗಳು ಕೊಡುತ್ತಿಲ್ಲವೇ ….? ಎಂದು ಅನಿಸದೇ ಇರದು.
ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.
ಹಸಿವು ನೀಗಿಸಲು ಪ್ರತ್ಯೇಕವಾಗಿ ಗಿಡ ಮರ ಬೆಳೆಸಲಿ :
ಕಾಡಾನೆಗಳ ರೋದನವನ್ನು ಕೇಳಿಸಿಕೊಂಡು ಕಾಡಾನೆಗಳಿಗೆಂದೇ ಒಂದಷ್ಟು ಅರಣ್ಯ ಪ್ರದೇಶವನ್ನು ಕೆಲವು ವರ್ಷಗಳ ಕಾಲ ಮೀಸಲಿಟ್ಟು ಅದರೊಳಗೆ ನಾಡಿನ ಜಾನುವಾರುಗಳು ಕೂಡ ನುಸುಳದಂತೆ ಎಚ್ಚರ ವಹಿಸಿ ಕಾಡಾನೆಗಳಿಗೆ ಬೇಕಾದಂತಹ ಗಿಡ ಬಳ್ಳಿಗಳನ್ನು ಬೆಳೆಸುವ ಜೊತೆಗೆ ಕೆರೆ ಗಳನ್ನು ನಿರ್ಮಿಸಿ ನಂತರ ಕಾಡಾನೆಗಳಿಗೆ ಮೀಸಲಿಟ್ಟರೆ ಅನುಕೂಲವಾದೀತೇ….? ಇಲಾಖೆ ಚಿಂತಿಸಬೇಕಾಗುತ್ತದೆ.
ಆನೆ ಕಂದಕದ ಹೆಸರಲ್ಲಿ ಕೋಟ್ಯಾಂತರ ರೂ ಅಪವ್ಯಯ :
ಪ್ರತೀ ವರ್ಷವೂ ಕಾಡಾನೆಗಳ ಹಾವಳಿ ತಡೆಯ ನೆಪದಲ್ಲಿ ಆನೆ ಕಂದಕಗಳನ್ನು ತೆರೆಯಲು ಖರ್ಚು ಮಾಡುವ ಕೋಟ್ಯಾಂತರ ರೂಗಳನ್ನು ಅರಣ್ಯದಂಚಿನ ಕೃಷಿಕರಿಗೆ ನೇರವಾಗಿ ಹಂಚಿದರೆ ಆ ರೈತಾಪಿಗಳ ಬದುಕೂ ಕೂಡ ಒಂದಷ್ಟು ಹಸನಾಗುತ್ತದೆ.
ಏಕೆಂದರೆ ಕಾಡಾನೆಗಳ ಹಾವಳಿಯಿಂದ ಬೆಳೆಗಳನ್ನು ನಾಶ ಮಾಡಿಕೊಂಡಿರುವ ರೈತರಿಗೆ ಸಿಗುತ್ತಿರುವ ಪರಿಹಾರ ಏನೇನಕ್ಕೂ ಸಾಲದಾಗಿದೆ.
ಆನೆಗಳ ಹತೋಟಿಗೆಂದು ಆನೆ ಕಂದಕ ತೆರೆದಿರುವ ಕಡೆಗಳಲ್ಲಿಯೇ ರೈತರು ಬೆಳೆದಿರುವ ಬೆಳೆಗಳನ್ನು ಕಾಡಾನೆಗಳು ತಿಂದು ನಾಶ ಮಾಡಿರುವುದು ಹೆಚ್ಚು.
ಹಾಗಾಗಿ ಇದೂವರೆಗೂ ಇಲಾಖೆ ರೂಪಿಸಿರುವ ಯೋಜನೆಗಳು ಹಾಗು ಯೋಚನೆಗಳು ಹೀಗೂ ಮಾರ್ಪಾಡು ಮಾಡಬಹುದೇ ಎಂಬುದನ್ನು ಇಲಾಖೆಯ ದಕ್ಷ ಹಾಗು ಪ್ರಾಮಾಣಿಕ ಅಧಿಕಾರಿಗಳು ಅರಿಯಬೇಕಿದೆ.
ಈ ಮೂಲಕ ಇದೂವರೆಗೂ ಇದ್ದ ” ವನ್ಯ ಪ್ರಾಣಿಗಳನ್ನು ರಕ್ಷಿಸಿ” ಎಂಬ ಕರೆಯ ಬದಲು ” ವನ್ಯ ಪ್ರಾಣಿಗಳ ತಡೆವ ಹೆಸರಲ್ಲಿ ಅರಣ್ಯ ಇಲಾಖೆ ರೂಪಿಸುತ್ತಿರುವ ಯೋಜನೆಗಳನ್ನು ನಿಲ್ಲಿಸಿ…ಹಾಗು ಕೃಷಿಕರ ಬೆಳೆ ರಕ್ಷಿಸಿ” ಎಂದು ಮಾಡಿಕೊಂಡರೇ ಹೇಗೇ..?

ವರದಿ 🙁 ಕೆ.ಎಸ್.ಮೂರ್ತಿ)

error: Content is protected !!