ಲಾಭಕ್ಕಿಂತ ಹೆಚ್ಚು ಖರ್ಚು: ಕೊಡಗಿನಲ್ಲಿ ಕ್ಷೀಣಿಸುತ್ತಿರುವ ಭತ್ತದ ಕೃಷಿ : ಅಕ್ಕಿ ಗಿರಣಿಗಳಿಗೂ ನಷ್ಟ

February 1, 2021

ಕಣಿವೆ : ಭತ್ತ ಬೆಳೆಯುವ ಕೃಷಿಕರ ಸಂಖ್ಯೆ ಕಳೆದ ಎರಡು ದಶಕಗಳ ಈಚೆಗೆ ಕಡಿಮೆಯಾಗುತ್ತಿದೆ. ಹಾಗಾಗಿ ಭತ್ತದ ಗದ್ದೆಗಳನ್ನು ಆದರಿಸಿ ಭತ್ತದ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಲೆ ಎತ್ತಿ ನಿಂತಿದ್ದ ಅಕ್ಕಿಗಿರಣಿಗಳು ಇತ್ತ ಮುಚ್ಚಲೂ ಆಗದೇ ಅತ್ತ ಕೆಲಸವೂ ಇಲ್ಲದೇ ಖಾಲಿ ಹೊಡೆಯುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಅಂದರೆ ಭತ್ತದ ಕಟಾವಿನ ಡಿಸೆಂಬರ್ ತಿಂಗಳಿನಲ್ಲಿ ಭತ್ತವನ್ನು ಅಕ್ಕಿಯಾಗಿಸಲು ಅಕ್ಕಿಗಿರಣಿಗಳ ಬಳಿ ಸಾಲು ಸಾಲು ನಿಂತಿರುತ್ತಿದ್ದ ಭತ್ತ ತುಂಬಿದ ಎತ್ತಿನ ಗಾಡಿಗಳು ಹಾಗು ಟ್ರಾಕ್ಟರ್ ಗಳು ಇತ್ತೀಚಿನ ದಿನಗಳಲ್ಲಿ ಮಂಗಮಾಯವಾಗುತ್ತಿವೆ. ಅಂದರೆ ರೈತ ತಾನು ತನ್ನ ಗದ್ದೆಯಲ್ಲಿ ಬೆವರು ಹರಿಸಿ ಬೆಳೆದ ಭತ್ತದ ಫಸಲು ಕಟಾವಿಗೆ ಬಂದೊಡನೆ ಮನೆಯೊಳಕ್ಕೆ ಧಾನ್ಯ ಲಕ್ಷ್ಮಿಯನ್ನು ಸಡಗರ ಸಂಭ್ರಮಗಳಿಂದ ಧಾನ್ಯಲಕ್ಷ್ಮಿಯನ್ನು ಮನೆಯೊಳಕ್ಕೆ ತುಂಬಿಸಿಕೊಳ್ಳುತ್ತಿದ್ದ ಆ ದಿನಗಳು ಕನಸಾಗಿಯೇ ಉಳಿಯುತ್ತಿವೆ.
ಭತ್ತವನ್ನು ಅಕ್ಕಿ ಮಾಡುವ ಆಧುನಿಕ ಅಕ್ಕಿಗಿರಣಿಗಳು
ಕುಶಾಲನಗರ ವ್ಯಾಪ್ತಿಯಲ್ಲಿ ಒಟ್ಟು ಎಂಟು ಇವೆ.
ಕಳೆದೆರಡು ದಶಕಗಳ ಮುನ್ನಾ ಕುಶಾಲನಗರದ ಕೊಪ್ಪಾದ ಮುಖ್ಯ ರಸ್ತೆಯಂಚಿನಲ್ಲಿ ಶಿವದೇವ ಎಂಬ ಏಕೈಕ ಅಕ್ಕಿಗಿರಣಿ ಒಂದಿದ್ದು ಕುಶಾಲನಗರ ಹಾಗು ಕಾವೇರಿ ನದಿ ದಂಡೆಯ ಮೈಸೂರು ಜಿಲ್ಲೆಯ ಹತ್ತಾರು ಗಡಿ ಗ್ರಾಮಗಳ ರೈತರ ಆಶಾಕಿರಣವಾಗಿತ್ತು.
ಆದರೆ ಕ್ರಮೇಣ ಹೆಬ್ಬಾಲೆಯಲ್ಲಿ ಮೂರು , ಗುಡ್ಡೆಹೊಸೂರಿನಲ್ಲಿ ಎರಡು, ಕೂಡಿಗೆಯಲ್ಲಿ ಎರಡು, ಶಿರಂಗಾಲದಲ್ಲಿ ಒಂದು ಅಕ್ಕಿಗಿರಣಿಗಳು ತಲೆ ಎತ್ತಿದವು.
ಆದರೆ ಕಳೆದ ಎರಡು ದಶಕಗಳ ಈಚೆಗೆ ಜನಸಂಖ್ಯೆಯ ಹೆಚ್ಚಳದೊಡನೆ, ಜನವಸತಿ ಪ್ರದೇಶ ವಿಸ್ತಾರವಾಗುತ್ತಿದ್ದಂತೆಯೇ ಭತ್ತ ಬೆಳೆವ ಗದ್ದೆಗಳು ನಿವೇಶನಗಳಾಗಿ ಬದಲಾಗುತ್ತಿದ್ದಂತೆಯೇ ಭತ್ತದ ಬೇಸಾಯ ಕ್ಷೀಣಗೊಂಡಿತು.
ಇನ್ನೊಂದೆಡೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಬಿಪಿಎಲ್ ಹಾಗು ಎಪಿಎಲ್ ಪಡಿತರದಾರರಿಗೆ ಉಚಿತ ಅಕ್ಕಿ ವಿತರಣೆ ಮಾಡುವ ಯೋಜನೆ ಆರಂಭಿಸಿದೊಡನೆ ಭತ್ತದ ಕೃಷಿ ಅಕ್ಷರಷಃ ಕೃಷವಾಗ ಹತ್ತಿತು.
ಕಷ್ಟ ಪಟ್ಟು ಏಕೆ ಭತ್ತ ಬೆಳೆಯಬೇಕು ? ಕುಳಿತಲ್ಲಿಗೆ ಸರ್ಕಾರದ ಉಚಿತ ಅಕ್ಕಿ ಬರುತ್ತಲ್ಲಾ ಎಂಬ ಧೋರಣೆಗೆ ಜನರು ಒಳಗಾದರು.
ಇನ್ನೊಂದೆಡೆ ಹೆಚ್ವಿದ ಬಿತ್ತನೆ ಬೀಜ ಹಾಗು ರಸಗೊಬ್ಬರಗಳ ದರ, ಕೂಲಿ ಕಾರ್ಮಿಕರ ವೇತನದಿಂದಾಗಿ ಸ್ವಂತ ಭೂಮಿಯಲ್ಲಿ ಭತ್ತ ಬೆಳೆಯುವುದು ಕೂಡ ದುಸ್ತರವಾಯಿತು.
ಅಂದರೆ ಒಂದು ಎಕರೆ ಗದ್ದೆಯಲ್ಲಿ ಕನಿಷ್ಠ 35 ರಿಂದ 40 ಸಾವಿರ ಖರ್ಚು ಮಾಡಿ ಬೆಳೆದ ಭತ್ತದ ಫಸಲಿಗೆ ಮಾರುಕಟ್ಟೆಯಲ್ಲಿ ದರ ಕುಸಿತವಾದ ಪರಿಣಾಮ ಖರ್ಚು ಮಾಡಿದ ಹಣದಷ್ಟು ಭತ್ತದ ಫಸಲು ಕೂಡ ಕೈಗೂಡದಾಯಿತು.
ಹೀಗಾಗಿ ಭತ್ತ ಬೆಳೆಯುವುದಕ್ಕಿಂತ ಸರಕಾರ ಕೊಡುವ ಉಚಿತ ಅಕ್ಕಿಯ ಜೊತೆಗೆ ಒಂದಿಷ್ಡು ಅಕ್ಕಿಯನ್ನು ಹಣ ಕೊಟ್ಟು ಖರೀದಿ ಮಾಡಿದರಾಯಿತು ಎಂಬ ಲೆಕ್ಕಾಚಾರ ಅನೇಕ ಕೃಷಿಕರದ್ದಾಯಿತು.
ಹೀಗಾಗಿ ಗ್ರಾಮೀಣ ಪ್ರದೇಶಗಳ ಬಹಳಷ್ಟು ಕಡೆಗಳಲ್ಲಿ ಹೆಚ್ಚಿನ ಭೂಮಿಯುಳ್ಳ ಭೂ ಮಾಲೀಕರು ಭತ್ತ ಬೆಳೆಯುತ್ತಿದ್ದ ಭೂಮಿಯನ್ನು ಶುಂಠಿ, ಕೆಸ, ಮರಗೆಣಸಿನಂತಹ ತೋಟಗಾರಿಕಾ ಬೆಳೆಗಳನ್ನು ಬೆಳೆಯುವವರಿಗೆ ಲೀಸ್ ಗೆ ಕೊಡಲು ಆರಂಭಿಸಿದರು.
ಅತ್ತ ಗದ್ದೆಯನ್ನು ಲೀಸ್ ಗೆ ಕೊಟ್ಟು ಇತ್ತ ತಮ್ಮ ಮನೆಯಂಗಳದಲ್ಲಿ ಸಾಕುವ ಜಾನುವಾರುಗಳಿಂದ ಸಂಗ್ರಹವಾಗುವ ಸಗಣಿ ಗೊಬ್ಬರವನ್ನು ಮಾರಾಟ ಮಾಡ ಹೊರಟರು.
ಅಂದರೆ ಎರಡೂವರೆ ದಶಕಗಳ ಹಿಂದೆ ತನ್ನದೇ ಗದ್ದೆಯಲ್ಲಿ ತನ್ನದೇ ಸಾವಯವ ಗೊಬ್ಬರ ಹಾಕಿ ಭತ್ತ ಬೆಳೆದು ಇತರರಿಗೂ ನೀಡುತ್ತಿದ್ದ ಕೈಗಳು ಇಂದು ತಿನ್ನುವ ಅನ್ನದ ಅಕ್ಕಿಗಾಗಿ ಪಡಿತರ ಅಂಗಡಿ ಹಾಗು ಕಿರಾಣಿ ಅಂಗಡಿಗಳ ಬಳಿ ಬೇಡುವಂತಹ ಸ್ಥಿತಿಗೆ ಭೂ ಮಾಲೀಕ ತಲುಪಿದ್ದಾನೆ.
ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ ಕುಳಿತು ತಿನ್ನುವವರ ಸಂಖ್ಯೆ ಶೇ. 90 ರಷ್ಟಿದ್ದು, ಬೆಳೆಯುವವರ ಸಂಖ್ಯೆ ಕೇವಲ ಶೇ. 10 ರಷ್ಟಿದೆ.
ಕುಳಿತಲ್ಲೇ ತಿನ್ನುವ ದೇಶ ವಾಸಿಗಳಿಗೆ ಅನ್ನ ಆಹಾರದ ಬೆಳೆ ಮಾಡುವ ಶೇ. 10 ರಷ್ಟಿರುವ ನೇಗಿಲ ಯೋಗಿಯ ಬದುಕು ಮೂರಾ ಬಟ್ಟೆಯಾಗುತ್ತಿದೆ. ಅಂದರೆ ಈ ಕಾಯಕ ಯೋಗಿ ಬೆಳೆವ ಯಾವುದೇ ಬೆಳೆಗೂ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿಲ್ಲ. ಎಲ್ಲವೂ ದಲ್ಲಾಳಿಗಳ ಹಾವಳಿಯಿಂದಾಗಿ ಈ ಅಮಾಯಕ ಕೃಷಿಕ ಸೋತು ಹೋಗಿದ್ದಾನೆ. ಈ ರೈತನಿಗೆ ಬೇಕಾದ ಕನಿಷ್ಠ ಬೆಲೆಯ ರಸಗೊಬ್ಬರ ಹಾಗು ಬಿತ್ತನೆ ಬೀಜಗಳು ಮಾರುಕಟ್ಟೆಯಲ್ಲಿ ದುಬಾರಿಯಾಗಿವೆ. ಆದರೆ ಇದೇ ರೈತ ಬಿಸಿಲು, ಮಳೆ – ಛಳಿ ಎನ್ನದೇ ನೆತ್ತರು ಹರಿಸಿ ಬೆಳೆವ ಫಸಲಿಗೆ ಗರಿಷ್ಠ ದರ ಹೋಗಲೀ ಬೆಂಬಲ ಬೆಲೆಯೂ ಸಿಗುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಭವಿಷ್ಯದಲ್ಲಿ ತಿನ್ನುವ ಅನ್ನಕ್ಕೆ ಗತಿ ಏನಾಗಬಹುದು ! ಎಂಬ ಪ್ರಶ್ನೆ ಬಾರೀ ಭಯ ಹಾಗು ಆತಂಕವನ್ನು ಮೂಡಿಸುತ್ತದೆ.
ಭತ್ತ ಬೆಳೆವ ಗದ್ದೆಗಳು ಉಳಿಯಬೇಕು. ಆ ಗದ್ದೆಗಳಲ್ಲಿ ರೈತ ನಿಟ್ಟುಸಿರಿನಿಂದ ಬೆಳೆ ತೆಗೆವಂತಹ ಪೂರಕ ವ್ಯವಸ್ಥೆ ಜೀವ ಪಡೆಯಬೇಕು. ಅಕ್ಕಿಗಿರಣಿಗಳು ಮುಚ್ಚಲ್ಪಡದೇ ಸದಾ ಕಾಲ ಸಕ್ರಿಯವಾಗಿರಬೇಕು. ಪಾಳು ಬೀಳುತ್ತಿರುವ ಭತ್ತದ ಗದ್ದೆಗಳಲ್ಲಿ ಕೃಷಿಕರು ಮಂದಹಾಸದಿಂದ ಭತ್ತವನ್ನು ಬೆಳೆವಂತಾಗಬೇಕು.
ಕೊಪ್ಪಾದ ಶಿವದೇವ ಅಕ್ಕಿಗಿರಣಿ ಮಾಲೀಕ ಸಿ.ಸಿ.ರೇಣುಕಾ ಸ್ವಾಮಿ ಮಾತನಾಡಿ, ಈಗ ಅಕ್ಕಿಗಿರಣಿಯನ್ನು ಹೊಸದಾಗಿ ನಿರ್ಮಿಸಲು ಕನಷ್ಠ ಒಂದು ಕೋಟಿ ವೆಚ್ಚ ತಗಲುತ್ತದೆ. ನಮ್ಮ ಅಕ್ಕಿಗಿರಣಿಗೆ ಈಗ 40 ವರ್ಷಗಳು ಕಳೆದಿವೆ. ಕಳೆದ 20 ವರ್ಷಗಳಿಂದ ಅಕ್ಕಿಗಿರಣಿಗಳು ಕಳೆ ಗುಂದುತ್ತಿವೆ. 20 ವರ್ಷಗಳ ಹಿಂದೆ ಪ್ರತಿ ದಿನ 30 ರಿಂದ 40 ಕ್ವಿಂಟಾಲ್ ಭತ್ತವನ್ನು ಅಕ್ಕಿ ಮಾಡುತ್ತಿದ್ದೆವು. ಈಗ ಕೇವಲ 5 ರಿಂದ 6 ಕ್ವಿಂಟಾಲ್ ಅಷ್ಟೇ ಭತ್ತ ಬರುತ್ತಿದೆ. ತಿಂಗಳಿಗೆ ವಿದ್ಯುತ್ ಬಳಕೆಯ ಬಿಲ್ಲು 18 ರಿಂದ 20 ಸಾವಿರ ಬರುತ್ತಿದೆ. ಇನ್ನು ಕಾರ್ಮಿಕರು ಹಾಗು ಮಿಲ್ ನಿರ್ವಹಣೆ ಅಂತಾ ಬೇರೆ ವೆಚ್ಚ ತಗಲುತ್ತಿದೆ. ಹೀಗಾಗಿ ಗಿರಣಿಗಳನ್ನು ನಡೆಸೋದೇ ದುಸ್ತರವಾಗುತ್ತಿದೆ ಎನ್ನುತ್ತಾರೆ.

error: Content is protected !!