ಹೆತ್ತವರಿಗೆ ಶಾಪವಾದ ಲಾಕ್ ಡೌನ್ ಮದುವೆ : ಹೆಣ್ಣೊಬ್ಬಳ ಕಣ್ಣೀರಿಗೆ ಕಾರಣವಾದ ಪತಿರಾಯ

01/02/2021

ಕಣಿವೆ : ನಿಜಕ್ಕೂ ಇದು ಕಥೆಯಲ್ಲ. ಒಂದು ಹೆಣ್ಣಿನ ಬಾಳಲ್ಲಿ ನಡೆದಂತಹ ಕಹಿ ಘಟನೆ. ಲಾಕ್ ಡೌನ್ ಅವಧಿಯಲ್ಲಿ ನಡೆದ ವಿವಾಹ ಎಂಬ ಬಂಧನದಲ್ಲಿ ಸಿಲುಕಿ ಸುಂದರವಾದ ಜೀವನ‌ ನರಕ ಸದೃಶವಾದ ನೈಜ ಕಥೆ ಇದು.
ಕೊರೋನಾ ಎಂಬ ಮಹಾಮಾರಿ ಕಳೆದ ವರ್ಷ ಜಗವನ್ನೆಲ್ಲಾ ಬಿಡದೇ ಕಾಡಿದಾಗ ಕುಶಾಲನಗರದಲ್ಲಿ ನಡೆದ ಲಾಕ್ ಡೌನ್ ಮದುವೆಯ ದುರಂತ ಕಥೆ ಇದು.
ಅಷ್ಟಕ್ಕೂ ಆ ಯುವತಿ ಇಂಜಿನಿಯರಿಂಗ್ ಪದವೀಧರೆ. ಈ ಯುವತಿಯ ತಾಯಿ ಮುಳ್ಳುಸೋಗೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ. ತಂದೆ ಬಿಸಿನೆಸ್ ಮೆನ್. ಲಾಕ್ ಡೌನ್ ಸಂದರ್ಭದಲ್ಲಿ ನಡೆಯುತ್ತಿದ್ದ ಸರಳ ಮದುವೆ ಸಮಾರಂಭವೊಂದಕ್ಕೆ ತೆರಳಿದಾಗ ಈ ಯುವತಿಯ ಹೆತ್ತವರಿಗೆ ಪರಿಚಯವಾದ ವ್ಯಕ್ತಿಯೊಬ್ಬರ ಬಳಿ ನಮ್ಮ ಮಗಳು ಇಂಜಿನಿಯರಿಂಗ್ ಮುಗಿಸಿದ್ದಾಳೆ. ಎಲ್ಲಿಯಾದರು ಒಳ್ಳೆಯ ವರ ಇದ್ದರೆ ನೋಡಿ ಎಂದುಬಿಟ್ಟಿದ್ದರು.
ಕೆಲ ದಿನಗಳ ಬಳಿಕ ಅದೇ ವ್ಯಕ್ತಿ ಈ ಯುವತಿಯ ಪಾಲಕರಿಗೆ ಕರೆ ಮಾಡಿ, ಹಾಸನದ ತಹಸೀಲ್ದಾರ್ ಕಛೇರಿಯಲ್ಲೊಬ್ಬ ವರ ಇದ್ದಾನೆ. ಸರ್ಕಾರಿ ಉದ್ಯೋಗ. ಹಾಸನದ ವಿದ್ಯಾನಗರದಲ್ಲಿ ಸ್ವಂತ ಮನೆ ಇದೆ. ಕೈ ತುಂಬಾ ಸಂಬಳ ಮತ್ತು ಗಿಂಬಳ. ನೋಡಿ ಮಾಡಬಹುದಾ ಮದುವೆ. ಒಮ್ಮೆ ಬಂದು ನೋಡಿ ಎಂದು ಬಿಟ್ಟ ಆ ಬ್ರೋಕರ್.
ಬಳಿಕ ಕೆಲ ಕಾಲ ಯೋಚಿಸಿದ ಪಾಲಕರು ಆ ವರ ನ ಸ್ವಗೃಹ ಹಾಸನದ ವಿದ್ಯಾನಗರಕ್ಕೆ ಹೋಗಿ ಬಂದರಾಯಿತು ಎಂದು ನಿಶ್ಚಯಿಸಿದರು. ಹಾಗೆಯೇ ಹೋಗಿ ಬಂದದ್ದು ಆಯಿತು.
ಆ ವರ ಚಿರಂತ್ ಎಂಬಾತನನ್ನು ಅಳೆದು ತೂಗಿ ನೋಡಿದಾಗ, ನೋಡೋಕೆ ಒಂದಿಷ್ಟು ಪರವಾಗಿಲ್ಲ. ಆದರೂನು ಕೈ ತುಂಬಾ ಸಂಬಳದ ಉದ್ಯೋಗವಲ್ಲವೇ.
ಮಗಳನ್ನು ಸಾಕುವಷ್ಟು ಯೋಗ್ಯತೆ ಇದೆಯಲ್ಲಾ ಸಾಕು ಎಂದು ಲಾಕ್ ಡೌನ್ ಸಂದರ್ಭದಿ ವಿವಾಹದ ದಿನಾಂಕವನ್ನು ನಿಗಧಿಗೊಳಿಸಿಯೂ ಆಯಿತು.
ಅಂತೆಯೇ ಕುಶಾಲನಗರದ ಯುವತಿ ಮನೆಯ ಬಳಿ ಸರಳ ವಿವಾಹವೂ ಆಯಿತು.
ಆಮೇಲೆ ನೋಡಿ ಶುರುವಾಯ್ತು…
ಇಂಜಿನಿಯರಿಂಗ್ ಪದವಿ ವ್ಯಾಸಾಂಗ ಮಾಡಿದ ಈ ಕಾಲ ಮಾನದ ಯಾವುದೇ ಹೆಣ್ಣು ಮಗಳು, ಯಾರದ್ದೇ ಹೆಣ್ಣು ಮಗಳು ಬಯಸುವುದು ಅದು ಒಂದೇ -ಒಂದು.
ನಾನು ನನ್ನ ಪತಿ ಹಾಯಾಗಿರಬೇಕು. ಎಲ್ಲಾ ಕಡೆ ಜೋಡಿಯಾಗಿ ಜೋಡಿ ಹಕ್ಕಿಗಳಂತೆ ಸುತ್ತಾಟ ನಡೆಸಬೇಕು ಎಂಬುದಾಗಿರುತ್ತದೆ.
ಆದರೆ ಇಲ್ಲಿ ಈ ಯುವತಿಯ ಬಾಳಲ್ಲಿ ನಡೆದದ್ದೇ ಬೇರೆ.
ವಿವಾಹವಾದ ಕಳೆದ ಆರು ತಿಂಗಳಲ್ಲಿ ಒಂದೇ ಒಂದು ರಾತ್ರಿ ಆ ಅಯೋಗ್ಯ ಈ ಹೆಣ್ಣಿನ ಸಂಗಡ ಸೇರದೇ, ನವ ವಿವಾಹಿತೆಯ ಸಾಂಗತ್ಯ ಬಯಸದೇ ದೂರವೇ ಉಳಿಯ ತೊಡಗಿದ.
ವಿವಾಹವಾದ ನವ ವಧುವನ್ನು ಪ್ರತ್ಯೇಕ ಕೊಠಡಿಯಲ್ಲಿ ಏಕಾಂಗಿಯಾಗಿ ಬಿಟ್ಟು ತಾನು ತನ್ನ ತಾಯಿಯ ಜೊತೆ ಖಾಸಗಿಯಾಗಿ ಮತ್ತೊಂದು ಕೊಠಡಿಯೊಳಗೆ ಮಲಗುತ್ತಿದ್ದ.
ಈ ಬಗ್ಗೆ ನವ ವಿವಾಹಿತೆ ಆ ಯುವತಿ ಸಾಕಷ್ಟು ನೊಂದು ಬೆಂದು ಪಡಬಾರದ ಸಂಕಟವನ್ನು ತಾನೊಬ್ಬಳೇ ಅನುಭವಿಸಿದಳು. ವಿವಾಹವಾದ ಎರಡು ತಿಂಗಳು ತಾನು ಪಡುತ್ತಿರುವ ಸಂಕಟವನ್ನು ಹೇಳದೇ ತನ್ನೊಳಗೇ ಬಚ್ಚಿಟ್ಟುಕೊಂಡು ವ್ಯಥೆ ಪಡುತ್ತಿದ್ದ ವಿಚಾರ ಆಕೆಯ ಅಮ್ಮನಿಗೆ ಹಾಗೋ ಹೇಗೋ ತಿಳಿದಾಕ್ಷಣ ಆ ಹೆತ್ತ ಕರುಳು ಅರೆ ಕ್ಷಣ ದಿಗ್ಬ್ರಾಂತವಾಯಿತು. ದಿಕ್ಕೇ ತೋಚದ ಹಾಗಾಯಿತು. ಮಮ್ಮಲ ಮರುಗಿತು. ತನ್ನೊಳಗೇ ರೋದಿಸಿತು.
ಕೊನೆಗೆ ಆ ಮೋಸದಾತನನ್ನು ಅರೆ ಕ್ಷಣ ಕ್ಷಮಿಸಿ ಮಗಳ ಮುಂದಿನ ಭವಿಷ್ಯಕ್ಕೋಸ್ಕರ ಆಸ್ಪತ್ರೆಗೆ ಕರೆದೊಯ್ದು ಪುರುಷತ್ವ ಪರೀಕ್ಷಿಸಿ ಚಿಕಿತ್ಸೆ ಕೊಡಿಸಲು ಹಾತೊರೆಯಿತು. ಆದರೆ ಸತ್ಯದರ್ಶನ ವಾಗುವ ಭಯದಿಂದ ಆ ಪಾಪಿ ಅಳಿಯನಿಗೆ ಅತ್ತೆಯ ವೇದನೆ ಹಾಗು ನಿವೇದನೆ ಕೇಳಿಸದಾಯಿತು.
ಮಗಳ ಭವಿಷ್ಯದ ದೃಷ್ಟಿಯಿಂದ ಆ ಯುವತಿಯ ಪಾಲಕರು ಕಳೆದ ನಾಲ್ಕು ತಿಂಗಳಿಂದಲೂ ಕಾಡಿ ಬೇಡಿ ಸಾಕಾದರು.
ಕೊನೆಗೆ ಕಾನೂನು ಮೊರೆಯೊಂದೇ ತಮ್ಮ ಮುಂದಿರುವ ಏಕೈಕ ಮಾರ್ಗ ಎಂದು ತಿಳಿದ ಯುವತಿಯ ಆ ಪೋಷಕರು ತಮ್ಮ ಮಗಳಿಗೆ ಆ ಅಯೋಗ್ಯ ಅಳಿಯ ನಾದವ ಮಾಡಿರುವ ಘನ ಘೋರವಾದ ಅನ್ಯಾಯದ ವಿರುದ್ಧ ಮಡಿಕೇರಿಯ ಮಹಿಳಾ ಪೋಲೀಸ್ ಠಾಣೆಯಲ್ಲಿ ಪೋಲೀಸರಿಗೆ ದೂರು ನೀಡಿದ್ದಾರೆ.
ಇದೇ ಸಂದರ್ಭ ಪತ್ರಿಕೆಯೊಂದಿಗೆ ಪ್ರತಿಕ್ರಿಯೆ ನೀಡಿರುವ ಆ ನತದೃಷ್ಟೆ ಹೆಣ್ಣುಮಗಳ ಪೋಷಕರು, ಹಾಸನದ ತಹಸೀಲ್ದಾರ್ ಕಛೇರಿಯಲ್ಲಿರುವ ಚಿರಂತ್ ಎಂಬ ಪಾಪಿ ನಮ್ಮ ಮಗಳಿಗೆ ಅಘೋರವಾದ ದ್ರೋಹವೆಸಗಿದ್ದಾನೆ.
ಪುರುಷತ್ವವೇ ಇಲ್ಲದ ಈ ಪಾಪಿ ವಾಸ್ತವ ಸತ್ಯ ಮರೆ ಮಾಚಿ ನಮ್ಮ ಮಗಳ ಭವಿಷ್ಯವನ್ನು ಹಾಳು ಮಾಡಿದ್ದಾನೆ.
ಲಾಕ್ ಡೌನ್ ಸಂದರ್ಭ ಮಾಡಿದ ಮದುವೆಯಲ್ಲಿ ಮಗಳು ಹಾಗು ಅಳಿಯನ ಹಿತದೃಷ್ಟಿಯಿಂದ ಲಕ್ಷಾಂತರ ರೂಗಳ ಚಿನ್ನಾಭರಣ ಮಾಡಿಸಿ ಅಪಾರ ಹಣ ವ್ಯಯಿಸಿದ್ದೆ. ಹಾಗೆಯೇ ನನ್ನ ಮಗಳು ಅಳಿಯ ಚೆನ್ನಾಗಿರಬೇಕು ಎಂದು 15 ಲಕ್ಷ ರೂಗಳ ಹೊಸ ಕಾರನ್ನು ಖರೀದಿಸಿದ್ದೆ. ಆದರೆ ಪಾಪಿ ನಮಗೆ ಅನ್ಯಾಯ ಮಾಡಿದ್ದಾನೆ. ಈತನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದರು.
ಯುವತಿ ಪತ್ರಿಕೆ ಯೊಂದಿಗೆ ಪ್ರತಿಕ್ರಿಯಿಸಿ, ನನ್ನನ್ನು ವಿವಾಹವಾದ ಆರು ತಿಂಗಳಲ್ಲಿ ಒಮ್ಮೆಯೂ ನನ್ನ ಸಾಂಗತ್ಯ ಬಯಸದ ಪಾಪಿ, ತನ್ನಮ್ಮನ ಸಂಗಡ ಮಲಗುತ್ತಿದ್ದ. ನಾನು ಅಲ್ಲಿ ತೆರಳಿ ಆತನನ್ನು ಪ್ರಶ್ನಿಸಿದರೆ ಅಮ್ಮ ಮಗ ಸೇರಿ ನನ್ನ ಬಗ್ಗೆಯೇ ಅವಾಚ್ಯವಾಗಿ ನಿಂದಿಸುತ್ತಿದ್ದರು.
ಅಮ್ಮನ ಜೊತೆ ಈಗಲೂ ಮಲಗುವ ಈ ಪಾಪಿ ನನ್ನನ್ನೇಕೆ ವಿವಾಹವಾಗಿ ನನ್ನ ಜೀವನದ ಜೊತೆ ಚೆಲ್ಲಾಟವಾಡಿದ ಎಂದು ಯುವತಿ ಪ್ರಶ್ನಿಸುತ್ತಿದ್ದಾಳೆ.
ಮಗನಿಗೆ ಬುದ್ದಿ ಹೇಳಿ ಹೆಂಡತಿ ಜೊತೆ ಮಲಗಲು ಬಿಡದೇ ತನ್ನ ಸಂಗಡವೇ ಮಲಗಿಸಿಕೊಳ್ಳುತ್ತಿರುವ ಕುರಿತು ಇಬ್ಬರ ಬಗ್ಗೆ ಪೋಲೀಸರಿಗೆ ದೂರು ನೀಡಿದ್ದೇನೆ ಎನ್ನುತ್ತಾರೆ.
ಒಟ್ಟಾರೆ ಈ ಪ್ರಕರಣದ ಹಿಂದಿರುವ ಕರಾಳ ಸತ್ಯದ ತನಿಖೆಯಾಗಬೇಕು. ನನ್ನ ಸುಂದರ ಜೀವನವನ್ನು ಹಾಳು ಮಾಡಿದ ಪಾಪಿಗೆ ಶಿಕ್ಷೆಯಾಗಬೇಕು ಎಂದು ಯುವತಿ ಕಣ್ಣೀರಿಟ್ಟಳು.
ಒಟ್ಟಾರೆ ಲಾಕ್ ಡೌನ್ ಎಂಬ ಅವಸರದ ಹಾಗು ಆತುರದ ಮದುವೆ ಒಂದು ಹೆಣ್ಣಿನ ಜೀವನವನ್ನೇ ಹಾಳು ಮಾಡಿದೆ.
ಪೋಷಕರು ದುಡುಕದೇ ವಿಚಾರಗಳನ್ನು ಸಮಗ್ರವಾಗಿ ಅರಿಯದೇ ಹೆಣ್ಣು ಮಕ್ಕಳ ಜೀವನವನ್ನು ಕೈಯಾರೆ ಬಲಿಗೊಡಬಾರದು ಅಷ್ಟೆ.