ರಸ್ತೆ ಕಾಮಗಾರಿ ಅಪೂರ್ಣ : ಕುಂಜಿಲ ಗ್ರಾಮಸ್ಥರಿಂದ ರಸ್ತೆ ತಡೆ ಪ್ರತಿಭಟನೆಯ ಎಚ್ಚರಿಕೆ

01/02/2021

ಮಡಿಕೇರಿ ಫೆ.1 : ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನಡೆದು 20 ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರ ವಿರುದ್ಧ ಅಸಮಾಧಾನಗೊಂಡಿರುವ ಕುಂಜಿಲ ಗ್ರಾಮಸ್ಥರು, ಫೆ.7ರ ಒಳಗಾಗಿ ಕಾಮಗಾರಿ ಆರಂಭಿಸದಿದ್ದಲ್ಲಿ ಫೆ.8ರಂದು ಕಕ್ಕಬ್ಬೆಯಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಕ್ಕಬ್ಬೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವೈ.ಕೆ.ಹಂಸ ಅವರು, ಕುಂಜಿಲ ಪರಂಬುಬಾಣೆಯಿಂದ ಕಕ್ಕಬ್ಬೆ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಸುಮಾರು 2.5ಕಿ.ಮೀ.ರಸ್ತೆ ಕಳೆದ 20 ವರ್ಷಗಳಿಂದ ಯಾವುದೇ ಕಾಮಗಾರಿ ನಡೆಯದೆ ಸಂಪೂರ್ಣವಾಗಿ ಹದಗೆಟ್ಟಿದೆ.ರಸ್ತೆ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರ ಹಲವು ವರ್ಷದ ಬೇಡಿಕೆಗೆ ಸ್ಪಂದಿಸಿದ ಶಾಸಕ ಕೆ.ಜಿ.ಬೋಪಯ್ಯ ಅವರು ರಸ್ತೆ ಅಭಿವೃದ್ಧಿಗಾಗಿ ಸುಮಾರು 2 ಕೋಟಿ ರೂ.ಗಳನ್ನು ಸರಕಾರದಿಂದ ಮಂಜೂರು ಮಾಡಿಸುವುದರೊಂದಿಗೆ ಕಳೆದ 20 ತಿಂಗಳ ಹಿಂದೆ ಭೂಮಿ ಪೂಜೆ ನೆರವೇರಿಸಿದ್ದರೂ, ಇದುವರೆಗೂ ಗುತ್ತಿಗೆದಾರ ವೇಣು ಎಂಬವರು ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿದರು.
ಸುಮಾರು 2.5 ಕಿ.ಮೀ. ಉದ್ದದ ಈ ರಸ್ತೆಯ ಇಕ್ಕಡೆಗಳಲ್ಲಿ ಸುಮಾರು 50-60 ಮನೆಗಳು, ಕಾಫಿ ತೋಟಗಳು, ಗದ್ದೆಗಳಿದ್ದು, ರಸ್ತೆ ವಿಸ್ತರಣೆಗಾಗಿ ಅಲ್ಲಿನ ನಿವಾಸಿಗಳು ತಮ್ಮ ಮನೆಯ ತಡೆಗೋಡೆಗಳನ್ನು ಕೆಡವಿ, ಗದ್ದೆ, ಕಾಫಿ ತೋಟ ಮತ್ತಿತರ ಖಾಸಗಿ ಜಾಗಗಳನ್ನು ಬಿಟ್ಟುಕೊಟ್ಟಿದ್ದಲ್ಲದೆ, ರಸ್ತೆ ಬದಿ ಹಆದು ಹೋಗಿದ್ದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಕುಂಜಿಲ ಪೈನರಿ ಮುಸ್ಲಿಂ ಜಮಾಅತ್‍ನವರು 60 ಸಾವಿರ ರೂಗಳನ್ನು ನೀಡಿದ್ದಲ್ಲದೆ, ಸೆಸ್ಕ್ ಸಿಬ್ಬಂದಿಗಳಿಗೆ ಕಂಬ ತೆರವುಗೊಳಿಸಲು ಸಹಕಾರವನ್ನೂ ನೀಡಿದ್ದಾರೆ. ಆದರೆ ಆರಂಭದಲ್ಲಿ ರಸ್ತೆ ವಿಸ್ತರಣೆಗೆ ಇದ್ದ ರಸ್ತೆಯನ್ನೂ ಅಗೆದು ಹಾಕಿದ ಗುತ್ತಿಗೆದಾರರು ಬಳಿಕ ಸುಮಾರು 800 ಮೀಟರ್‍ನಷ್ಟು ಕಾಂಕ್ರಿಟ್ ರಸ್ತೆ ನಿರ್ಮಿಸಿ ತೆರಳಿದ್ದು, ಉಳಿದ ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಹಾಗೆಯೇ ಬಿಟ್ಟಿದ್ದಾರೆ ಎಂದು ಹಂಸ ದೂರಿದರು.
ಈ ರಸ್ತೆಯಲ್ಲಿ ದಿನಂಪ್ರತಿ ಸುಮಾರು 300-500 ಮಂದಿ ಓಡಾಡುತ್ತಾರೆ. ಅಲ್ಲದೆ ಸಾಕಷ್ಟು ವಾಹನಗಳ ಸಂಚಾರವೂ ಇದೆ. ಆದರೆ ರಸ್ತೆಯು ಕಲ್ಲು, ಮಣ್ಣು ಮತ್ತು ಗುಂಡಿಗಳಿಂದ ಕೂಡಿದ್ದು, ಕಳೆದ 20 ತಿಂಗಳುಗಳಿಂದ ಸಾರ್ವಜನಿಕರು, ಶಾಲಾ ಮಕ್ಕಳು, ರೋಗಿಗಳು, ವಾಹನಗಳು ಸಂಚರಿಸಲು ಕಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಹಲವಾರು ಬಾರಿ ಗುತ್ತಿಗೆದಾರರಿಗೂ, ಇಲಾಖಾ ಮುಖ್ಯಸ್ಥರಿಗೂ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜ£ವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೀಗ ರಸ್ತೆ ಅವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಫೆ.7ರ ಒಳಗಾಗಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ನಿರ್ದೇಶನ ನೀಡುವಂತೆ ಕೋರಲಾಗಿದೆ. ತಪ್ಪಿದಲ್ಲಿ ಫೆ.8ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕುಂಜಿಲ ಕಕ್ಕಬ್ಬೆ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಸಂಘಸಂಸ್ಥೆಗಳು ಸೇರಿ ಕಕ್ಕಬ್ಬೆಯಲ್ಲಿ ರಸ್ತೆತಡೆ ಹಾಗೂ ಧರಣಿ ಸತ್ಯಾಗ್ರಹ ನಡೆಸಲಿರುವುದಾಗಿ ಎಚ್ಚರಿಸಿದರು.
ಗೋಷ್ಠಿಯಲ್ಲಿ ಹಾಜರಿದ್ದ ಗ್ರಾ.ಪಂ. ಮಾಜಿ ಸದಸ್ಯ ಎಂ.ಎ.ನಾಸರ್ ಮಾತನಾಡಿ, ರಸ್ತೆ ಕಾಮಗಾರಿಗೆ ಫೂಮಿ ಪೂಜೆ ನೆರವೇರಿಸುವ ಸಂದರ್ಭದಲ್ಲೇ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಹಾಗೂ ಗುಣಮಟ್ಟದಲ್ಲಿ ನಿರ್ಮಿಸುವಂತೆ ಶಾಸಕರು ಗುತ್ತಿಗೆದಾರ ವೇಣು ಅವರಿಗೆ ಸೂಚನೆ ನೀಡಿದ್ದಾರೆ. ಆದರೆ ಇದುವರೆಗೂ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸದೆ ಗ್ರಾಮಸ್ಥರು ಸಂಕಷ್ಟ ಅನುಭವಿಸುಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ. ಮಾಜಿ ಸದಸ್ಯ ಕೆ.ಎ.ಅಬ್ದುಲ್ ರಜಾಕ್, ವಿ.ಹೆಚ್. ಅಶ್ರಫ್, ಕೆ.ಎ.ಅಬ್ದುಲ್ ಮಜೀದ್ ಹಾಗೂ ಕೆ.ಎಂ.ಇಲಿಯಾಸ್ ಹಾಜರಿದ್ದರು.