ಬೆಲೆ ಏರಿಕೆ ನಿಯಂತ್ರಣಕ್ಕೆ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಒತ್ತಾಯ

01/02/2021

ಮಡಿಕೇರಿ ಫೆ.1 : ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಜಿಲ್ಲಾ ಘಟಕ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದೆ.
ತೈಲೋತ್ಪನ್ನಗಳು ಮತ್ತು ನಿತ್ಯ ಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಏರಿಕೆಯಿಂದ ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗಿದ್ದು, ಡೀಸೆಲ್ ಚಾಲಿತ ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ಮೋಟಾರ್‍ಗಳನ್ನು ಬಳಸಲು ರೈತರಿಗೆ ಅಸಾಧ್ಯವಾಗಿದೆ. ಆರ್ಥಿಕ ಸಂಕಷ್ಟದಿಂದ ಕೃಷಿಕ ವರ್ಗ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಗಳಿಗೆ ಮುಂದಾಗುತ್ತಿದ್ದಾರೆ ಎಂದು ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಜತ್ ಪತ್ತಾಡು ಈ ಸಂದರ್ಭ ಆತಂಕ ವ್ಯಕ್ತಪಡಿಸಿದರು.
ದ್ವಿಚಕ್ರ ವಾಹನಗಳ ಮೂಲಕ ವ್ಯಾಪಾರ ಮತ್ತು ಉದ್ಯೋಗಕ್ಕೆ ತೆರಳುವ ಕಡಿಮೆ ಆದಾಯದ ಮಂದಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಿಸಿ ಮುಟ್ಟಿದೆ. ಸಾರಿಗೆ ವೆಚ್ಚವೂ ಹೆಚ್ಚಾಗುತ್ತಿರುವುದರಿಂದ ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಳ್ಳಿಗಳನ್ನು ಹೊಗೆ ಮುಕ್ತ ಮಾಡುವುದಾಗಿ ಹೇಳಿಕೊಂಡ ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ನೀಡಿ ಇದೀಗ ಅನಿಲ ಬೆಲೆ ಏರಿಕೆ ಮಾಡಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಜನಸಾಮಾನ್ಯರ ಆದಾಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ, ಆದರೆ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಪ್ರಜಾಪ್ರಭುತ್ವ ರಾಷ್ಟ್ರದ ಸಂವಿಧಾನದಡಿ ಪ್ರತಿಯೊಬ್ಬ ಪ್ರಜೆಗೂ ನೆಮ್ಮದಿಯಿಂದ ಬದುಕುವ ಮೂಲಭೂತ ಹಕ್ಕಿದೆ. ಆದರೆ ಬೆಲೆ ಏರಿಕೆಯನ್ನು ನಿಯಂತ್ರಿಸಲಾಗದ ಸರ್ಕಾರ ಬಡವರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ ಪ್ರಮುಖರು, ಎಲ್ಲಾ ವಸ್ತುಗಳ ಮತ್ತು ತೈಲೋತ್ಪನ್ನಗಳ ಬೆಲೆಯನ್ನು ತಕ್ಷಣ ಇಳಿಕೆ ಮಾಡಬೇಕೆಂದು ಒತ್ತಾಯಿಸಿದರು.
ವೇದಿಕೆಯ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಅಜಿತ್ ಕೊಟ್ಟಕೇರಿಯನ, ಪ್ರಧಾನ ಕಾರ್ಯದರ್ಶಿ ಯೋಗೇಶ್ ನೆಕ್ಕಿಲ, ಮದೆನಾಡು ಅಧ್ಯಕ್ಷ ಮುದ್ದಿಯನ ಕಿಶನ್, ಕಾರ್ಯದರ್ಶಿ ಅಪ್ಪಯ್ಯ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.