ಕೇಂದ್ರ ಬಜೆಟ್‌ ಮಂಡನೆ

01/02/2021

ಹೊಸದಿಲ್ಲಿ: ದೇಶದ ಬಜೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಗದ ರಹಿತ ಡಿಜಿಟಲ್‌ ಕೇಂದ್ರ ಬಜೆಟ್‌ ಮಂಡನೆಯಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಅವಧಿಯಲ್ಲಿ 3ನೇ ಬಾರಿಗೆ ಕೇಂದ್ರ ಬಜೆಟ್‌ ಮಂಡಿಸಿದ್ದು, ಹಲವು ಕ್ಷೇತ್ರಗಳಿಗೆ ಬೃಹತ್‌ ಅನುದಾನ ಘೋಷಿಸಿದ್ದಾರೆ.

ಬಜೆಟ್‌ನ ಮೊದಲ ಭಾಗದಲ್ಲೇ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಲಾಗಿದ್ದು, ಪಿಎಂ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆ ಘೋಷಿಸಿದ್ದಾರೆ. ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ ಹಲವು ಸರಕುಗಳ ಮೇಲೆ ದುಬಾರಿ ಕೃಷಿ ಸೆಸ್‌ ವಿಧಿಸಲಾಗಿದೆ. 75 ವರ್ಷ ಮೇಲ್ಪಟ್ಟವರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. 2021ರ ಬಜೆಟ್‌ನಲ್ಲಿ ಕೇಂದ್ರ ಸರಕಾರ ಹೊಸದಾಗಿ ಕೃಷಿ ಸೆಸ್‌ ಪರಿಚಯಿಸಿದೆ. ಹಲವು ಸರಕುಗಳ ಮೇಲೆ ದುಬಾರಿ ಸೆಸ್‌ ವಿಧಿದೆ.

ಕೃಷಿ ಸೆಸ್‌ ವಿವರ : ಪೆಟ್ರೋಲ್‌ ಮೇಲೆ 2.5 ರೂಪಾಯಿ ಕೃಷಿ ಸೆಸ್, ‌ಡೀಸೆಲ್‌, ಮೇಲೆ 4 ರೂಪಾಯಿ ಕೃಷಿ ಸೆಸ್, ‌ಚಿನ್ನದ ಮೇಲೂ ಶೇ.2.5 ಕೃಷಿ ಸೆಸ್, ‌ಮದ್ಯಗಳ ಮೇಲೆ ಶೇ. 100 ಕೃಷಿ ಸೆಸ್, ‌ರಸಗೊಬ್ಬರದ ಮೇಲೆ ಶೇ.5 ಸೆಸ್, ‌ವಿದೇಶಿ ಸೇಬಿನ ಮೇಲೆ ಶೇ.35
ಬಟಾಣಿ ಮೇಲೆ ಶೇ.40, ಕಲ್ಲಿದ್ದಲು ಶೇ.1.5, ಹತ್ತಿ ಮೇಲೆ ಶೇ.5

ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2021ರ ಬಜೆಟ್‌ನಲ್ಲಿ ಕೃಷಿರಂಗಕ್ಕೆ ಬಂಪರ್‌ ಕೊಡುಗೆ ನೀಡಿದ್ದಾರೆ. ರೈತರಿಂದ ಕೃಷಿ ಉತ್ಪನ್ನ ಖರೀದಿಗಾಗಿಯೇ 1.72 ಲಕ್ಷ ಕೋಟಿ ರೂಪಾಯಿ ಮೀಸಲಿಡುವುದಾಗಿ ಘೋಷಣೆ ಮಾಡಿದ್ದಾರೆ.

ಮಹತ್ವದ ಘೋಷಣೆಗಳು : ಆಹಾರ ಧಾನ್ಯ ಖರೀದಿಗೆ 1,41,930 ಕೋಟಿ ರೂಪಾಯಿ, ಬೇಳೆಕಾಳುಗಳ ಖರೀದಿಗೆಂದೇ 10,530 ಕೋಟಿ ರೂಪಾಯಿ ಮೀಸಲು, ಗೋದಿ ಖರೀದಿಗಾಗಿಯೇ 33,000 ಕೋಟಿ ರೂ. ಮೀಸಲು, ದೇಶದಲ್ಲಿ 5 ಮೀನುಗಾರಿಕಾ ಬಂದರುಗಳ ಅಭಿವೃದ್ಧಿ, ಈ ವರ್ಷ ಧಾನ್ಯಗಳ ಖರೀದಿ ಹಣ 1,72, 081 ಕೋಟಿ ರೂ.ಗೆ ಹೆಚ್ಚಳ, ಪಶುಸಂಗೋಪನೆ ಮೀನುಗಾರಿಗೆಕೆ 40 ಸಾವಿರ ಕೋಟಿ, ಕೃಷಿ ಕಾರ್ಮಿಕರ ಆರ್ಥಿಕ ಸಬಲೀಕರಣಕ್ಕೆ ಒತ್ತು, ಕೃಷಿ ನೀರಾವರಿಗೆ ಹೆಚ್ಚುವರಿಗಾಗಿ ಹೆಚ್ಚುವರಿ 5 ಸಾವಿರ ಕೋಟಿ ರೂ., ಕೃಷಿ ಬೆಳೆಗಳಿಗೆ ವಿಮೆ ವಿಸ್ತರಣೆ

9 ಕೋಟಿ ಕುಟುಂಬಗಳಿಗೆ ಉಜ್ವಲಾ ಯೋಜನೆ ವಿಸ್ತರಣೆ : ಗ್ರಾಮೀಣ ಬಡ ಕುಟುಂಬಗಳಿಗಳಿಗೂ ಅಡುಗೆ ಅನಿಲ ಪೂರೈಸುವ ಉದ್ದೇಶದೊಂದಿಗೆ ಕೇಂದ್ರ ಸರಕಾರ 2016ರಲ್ಲಿ ಆರಂಭಿಸಲಾದ ಉಜ್ವಲಾ ಯೋಜನೆಯನ್ನು 9 ಕೋಟಿ ಕುಟುಂಬಕ್ಕೆ ವಿಸ್ತರಿಸಲು ಕೇಂದ್ರ ಬಜೆಟ್‌ನಲ್ಲಿ ತಿಳಿಸಲಾಗಿದೆ. ವಾಹನಗಳಿಗೆ ಸಿಎನ್‌ಜಿ ಮತ್ತು ಕೊಳವೆ (ಪೈಪ್‌ಲೈನ್‌) ಮೂಲಕ ಮನೆಗಳಿಗೆ ಅಡುಗೆ ಅನಿಲ ಪೂರೈಸುವ ನಗರ ಅನಿಲ ವಿತರಣಾ ಜಾಲವನ್ನು ಇನ್ನೂ 100 ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಲಾಗಿದೆ. ಬಿಪಿಎಲ್ ಕುಟುಂಬಗಳು ಉಜ್ವಲ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದು, ಪ್ರಸ್ತುತ ಸುಮಾರು 8 ಕೋಟಿ ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಂಡಿವೆ.

ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಏರಿಳಿತ ಆಗಿಲ್ಲ : 2020-21ರ ಅವಧಿಯಲ್ಲಿ ಹೇಗಿತ್ತೋ ಹಾಗೆಯೇ ಆದಾಯ ತೆರಿಗೆ ನಿಯಮಗಳು ಮುಂದುವರೆಯಲಿವೆ.

ಸದ್ಯ ಚಾಲ್ತಿಯಲ್ಲಿ ಇರುವ ಆದಾಯ ತೆರಿಗೆ ನಿಯಮಗಳ ಪ್ರಕಾರ, 60 ವರ್ಷದೊಳಗಿನ ಎಲ್ಲಾ ವ್ಯಕ್ತಿಗಳಿಗೂ ವಾರ್ಷಿಕ 2.5 ಲಕ್ಷದವರೆಗೆ ಯಾವುದೇ ಆದಾಯ ತೆರಿಗೆ ಇಲ್ಲ. ವಾರ್ಷಿಕ 2.5 ಲಕ್ಷದಿಂದ 5 ಲಕ್ಷದ ವರೆಗೆ ಆದಾಯ ಇರುವವರು ಶೇ. 5ರಷ್ಟು ತೆರಿಗೆ ಭರಿಸಬೇಕು. ವಾರ್ಷಿಕ 5 ಲಕ್ಷದಿಂದ 7.5 ಲಕ್ಷದವರೆಗೆ ಆದಾಯ ಇರುವವರು ಶೇ. 10ರಷ್ಟು ತೆರಿಗೆ ಭರಿಸಬೇಕು. ವಾರ್ಷಿಕ 7.5 ಲಕ್ಷದಿಂದ 10 ಲಕ್ಷದವರೆಗೆ ಆದಾಯ ಇರುವವರು ಶೇ. 15ರಷ್ಟು ಆದಾಯ ತೆರಿಗೆ ಪಾವತಿಸಬೇಕು. ವಾರ್ಷಿಕ 10 ಲಕ್ಷದಿಂದ 12.5 ಲಕ್ಷ ಆದಾಯ ಇರುವವರು ಶೇ. 20ರಷ್ಟು ತೆರಿಗೆ ಪಾವತಿಸಬೇಕು. 12.5 ಲಕ್ಷದಿಂದ 15 ಲಕ್ಷ ಆದಾಯ ಇರುವವರು ಶೇ. 25ರಷ್ಟು ಆದಾಯ ತೆರಿಗೆ ಪಾವತಿಸಬೇಕು. 15 ಲಕ್ಷಕ್ಕಿಂತಾ ಹೆಚ್ಚು ಆದಾಯ ಇರುವವರು ಶೇ. 30ರಷ್ಟು ಆದಾಯ ತೆರಿಗೆ ಪಾವತಿಸಬೇಕಿದೆ.