‘ಒಂದು-ಜಿಲ್ಲೆ-ಒಂದು-ಉತ್ಪನ್ನ’ ಕಾಫಿ ಬೆಳೆಗೆ ಅನುಮೋದನೆ

01/02/2021

ಮಡಿಕೇರಿ ಫೆ. 1 : ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಭಾರತ ಸರ್ಕಾರವು ಪ್ರಧಾನಮಂತಿ ಅವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧ್ದಗೊಳಿಸುವಿಕೆ ಯೋಜನೆ (ಪಿಎಂಎಫ್‍ಎಂಇ) ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ‘ಒಂದು-ಜಿಲ್ಲೆ-ಒಂದು-ಉತ್ಪನ್ನ’ ಆಧಾರದ ಮೇಲೆ ಕೊಡಗು ಜಿಲ್ಲೆಯಲ್ಲಿ ವ್ಯಾಪಕವಾಗಿ ಬೆಳೆಯುವ ಕಾಫಿ ಬೆಳೆಗೆ ಅನುಮೋದನೆ ದೊರೆತಿದೆ.
ಕಾಫಿ ಸಂಸ್ಕರಣೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಕರಣಾ ಘಟಕಗಳಿಗೆ ಕಾಫಿಯ ಶೇಖರಣೆ, ವರ್ಗೀಕರಣ, ಶ್ರೇಣೀಕರಣ, ಬ್ರ್ಯಾಂಡಿಂಗ್, ಲೇಬಲಿಂಗ್, ಮಾರುಕಟ್ಟೆ ಬೆಂಬಲ, ಹೊಸ ಪ್ರಯೋಗಾಲಯಗಳ ಸ್ಥಾಪನೆ ಮತ್ತು ರಫ್ತಿಗೆ ಪ್ರೋತ್ಸಾಹ ನೀಡುವ ಮೂಲಕ ಅಂತಹ ವ್ಯಕ್ತಿ ಅಥವಾ ಸಂಸ್ಥೆಗಳನ್ನು ನಿಯಮಬದ್ದಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಯು 2020-21 ರಿಂದ ಪ್ರಾರಂಭವಾಗಿ 2024-25ರವರೆಗೆ ಅನುಷ್ಠಾನಗೊಳ್ಳಲಿದೆ. ಈ ಯೋಜನೆಯಡಿ ಹೊಸದಾಗಿ ಸಂಸ್ಕರಣಾ ಘಟಕಗಳು ಮಾರಾಟ ಮತ್ತು ರಫ್ತು ಘಟಕಗಳನ್ನು ಸ್ಥಾಪಿಸುವವರಿಗೆ ಈ ಯೋಜನೆಯಡಿ ಸಹಾಯಧನ ನೀಡಲಾಗುವುದು. ಕಾಫಿ ಸಂಸ್ಕರಣೆಯಲ್ಲಿ ಕನಿಷ್ಠ ಮೂರು ವರ್ಷ ಅನುಭವವಿರುವ ಸ್ವಸಹಾಯ ಸಂಘಗಳು ಮತ್ತು 1 ಕೋಟಿಗಿಂತಲೂ ಹೆಚ್ಚಿನ ವಹಿವಾಟು ಹೊಂದಿರುವ ಎಫ್‍ಪಿಒ/ಸಹಕಾರ ಸಂಘಗಳಿಗೆ ಯೋಜನಾ ವೆಚ್ಚದ ಶೇ.35 ರಷ್ಟು ಸಾಲ ಸಂಪರ್ಕಿತ ಅನುದಾನ ನೀಡಲಾಗುವುದು.
ವೈಯಕ್ತಿಕ ಕಾಫಿ ಸಂಸ್ಕರಣಾ ಘಟಕಗಳು ಗರಿಷ್ಠ 10 ಲಕ್ಷದ ಮಿತಿಗೆ ಒಳಪಟ್ಟಂತಹ ಅರ್ಹ ಯೋಜನಾ ವೆಚ್ಚದ ಶೇ.35 ಪ್ರಮಾಣದಷ್ಟು ಸಾಲ ಸಂಪರ್ಕಿತ ಬಂಡವಾಳ ಸಹಾಯಧನವನ್ನು ಪಡೆದುಕೊಳ್ಳಬಹುದು. ಯೋಜನಾ ವೆಚ್ಚದ ಶೇ.10 ರಷ್ಟು ಬಂಡವಾಳವನ್ನು ಫಲಾನುಭವಿಗಳೇ ಭರಿಸಬೇಕು. ಅರ್ಜಿದಾರರು ಕನಿಷ್ಠ 18 ವರ್ಷ ಪೂರೈಸಿರಬೇಕು. ಮತ್ತು ಎಂಟನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು, ಹತ್ತು ಜನರಿಗಿಂದ ಕಡಿಮೆ ಕೆಲಸಗಾರರನ್ನು ಹೊಂದಿರುವ ಕಿರು ಉದ್ದಿಮೆಗಳ ಮಾಲೀಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಈ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ತಾಂತ್ರಿಕ ಹಾಗೂ ಸಂಶೋಧನಾ ಬೆಂಬಲವನ್ನು ಕೇಂದ್ರೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ಮೈಸೂರು ಮತ್ತು ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆ (ಐಐಎಫ್‍ಪಿಟಿ) ತಂಜಾವೂರು, ಸಂಸ್ಥೆಯ ನೆರವನ್ನು ಫಲಾನುಭವಿಗಳಿಗೆ ನೀಡಲಾಗುವುದು. ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಅವಶ್ಯವಾದ ತರಬೇತಿ ಡಿಪಿಆರ್ ತಯಾರಿಕೆ, ಬ್ಯಾಂಕ್ ಸಾಲ, ಮಾರುಕಟ್ಟೆ ಬೆಂಬಲ, ಕೈ ಆಸರೆ ಬೆಂಬಲ, ಜಿಎಸ್‍ಟಿ, ಉದ್ಯೋಗ ಆಧಾರ್, ಎಫ್‍ಎಸ್‍ಎಸ್‍ಎ.ಐ ಪ್ರಮಾಣ ಪತ್ರಗಳನ್ನು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ನೆರವಿನಿಂದ ಪಡೆಯಬಹುದಾಗಿದೆ.
ಆಸಕ್ತ ವೈಯಕ್ತಿಕ ಫಲಾನುಭವಿಗಳು hಣಣಠಿ://ಠಿmಜಿme.moಜಿಠಿi.gov.iಟಿ/ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಸಂಘ ಸಂಸ್ಥೆಗಳು, ಎಫ್.ಪಿ.ಒ, ಸ್ವಸಹಾಯ ಗುಂಪುಗಳ ಸದಸ್ಯರು, ಒಕ್ಕೂಟಗಳು, ಸಹಕಾರ ಸಂಸ್ಥೆಗಳು ತಮ್ಮ ಅರ್ಜಿಗಳನ್ನು ನೇರವಾಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದಾಗಿದೆ. ಅರ್ಜಿದಾರರು ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಜಂಟಿ ಕೃಷಿ ನಿರ್ದೇಶಕರ ಕಚೇರಿ/ಸಹಾಯವಾಣಿ 911302281089 ಗೆ ಕರೆ ಮಾಡಿ ಅಥವಾ suಠಿಠಿoಡಿಣ-ಠಿmಜಿme@moಜಿಠಿi.gov.iಟಿ ಕ್ಕೆ ಇ-ಮೇಲ್ ಮಾಡುವ ಮುಖಾಂತರ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದು. ಫೆಬ್ರವರಿ, 15 ರೊಳಗೆ ಅರ್ಜಿ ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕರಾದ ಶಬನಾ ಎಂ.ಶೇಕ್ ತಿಳಿಸಿದ್ದಾರೆ.