ಕೃಷಿ ಅಭಿವೃದ್ಧಿ ಹೆಸರಿನಲ್ಲಿ ಮತ್ತೆ ದರ ಏರಿಕೆ : ಕೊಡಗು ಜೆಡಿಎಸ್ ಟೀಕೆ

01/02/2021

ಮಡಿಕೇರಿ ಫೆ.1 : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್‍ನಲ್ಲಿ ಕೃಷಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನೆಪವನ್ನು ಮುಂದಿಟ್ಟುಕೊಂಡು ಪೆಟ್ರೋಲ್ ಮತ್ತು ಡೀಸೆಲ್‍ಗೆ ಸೆಸ್ ವಿಧಿಸುವ ಮೂಲಕ ಜನಸಾಮಾನ್ಯರ ಮೇಲೆ ಮತ್ತೆ ಬೆಲೆ ಏರಿಕೆಯ ಬರೆಯನ್ನು ಹಾಕಲಾಗಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಡೀಸೆಲ್ ಮೇಲೆ 4 ರೂ. ಮತ್ತು ಪೆಟ್ರೋಲ್ ಮೇಲೆ 2.5 ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ವಿಧಿಸಲಾಗಿದೆ. ಇದರಿಂದ ಸಾರಿಗೆ ವೆಚ್ಚ ದುಬಾರಿಯಾಗಲಿದ್ದು, ನಿತ್ಯ ಬಳಕೆಯ ವಸ್ತುಗಳ ಬೆಲೆ ಮತ್ತೆ ಏರಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನೇರವಾಗಿ ಬೆಲೆ ಏರಿಕೆ ಮಾಡುವ ಬದಲು ಕೃಷಿಕರ ಹೆಸರು ಹೇಳಿಕೊಂಡು ಸೆಸ್ ವಿಧಿಸಲಾಗಿದೆ. ಕೃಷಿ ಯಂತ್ರೋಪಕರಣಗಳ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಕೃಷಿಕರು, ಕಾರ್ಮಿಕರು ಹಾಗೂ ಜನಸಾಮಾನ್ಯರ ಮೇಲೆ ಕರುಣೆ ಇಲ್ಲದ ಸರ್ಕಾರ ಇದಾಗಿದ್ದು, ಹಿಂದುತ್ವದ ಆಧಾರದಲ್ಲಿ ಸುಳ್ಳಿನ ಸರಮಾಲೆಯ ಮೂಲಕ ಜನರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ದುಬಾರಿ ಬೆಲೆಯಿಂದ ಜನರು ಎಣ್ಣೆ, ಕಾಳು, ಬೇಳೆಯನ್ನು ಕೊಂಡುಕೊಳ್ಳಲಾಗದೆ ಪರದಾಡುತ್ತಿದ್ದಾರೆ. ಆದರೆ ಸರ್ಕಾರ ಚಿನ್ನದ ಮೇಲಿನ ಕಸ್ಟಮ್ಸ್ ಸುಂಕವನ್ನು ಇಳಿಕೆ ಮಾಡಿದೆ. ಜನರಿಗೆ ಇಂದು ನಿತ್ಯ ಬಳಕೆಯ ವಸ್ತುಗಳು ಸುಲಭವಾಗಿ ಸಿಗಬೇಕೆ ಹೊರತು ಹಸಿದವನಿಗೆ ಚಿನ್ನ ಬೇಕಾಗಿಲ್ಲವೆಂದು ಗಣೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿಯ ಬಜೆಟ್‍ನಲ್ಲಿ ಕೋವಿಡ್ ಪರಿಸ್ಥಿತಿಯ ಪರಿಹಾರದ ಹೆಸರಿನಲ್ಲಿ 2 ಲಕ್ಷ ಕೋಟಿ ರೂ.ಗಳನ್ನು ಘೋಷಿಸಲಾಗಿತ್ತು. ಈ ಹಣ ಎಲ್ಲಿ ಹೋಯಿತು ಎಂದು ಅವರು ಪ್ರಶ್ನಿಸಿದ್ದಾರೆ.