ಟ್ಯಾಕ್ಸಿ ಪ್ರಯಾಣ ದರ ಏರಿಕೆ : ಸರ್ಕಾರ ಆದೇಶ

02/02/2021

ಬೆಂಗಳೂರು: ಕೇಂದ್ರ ಬಜೆಟ್‌ ಬೆನ್ನಲ್ಲೇ ರಾಜ್ಯ ಸರಕಾರ ಟ್ಯಾಕ್ಸಿ, ಸಿಟಿ ಟ್ಯಾಕ್ಸಿ ಹಾಗೂ ಇತರೆ ಟ್ಯಾಕ್ಸಿಗಳ ನಿಗದಿತ ದರಗಳನ್ನು ಪರಿಷ್ಕರಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.

ಹವಾನಿಯಂತ್ರಿತ ರಹಿತ ಟ್ಯಾಕ್ಸಿ, ಎಸಿ ಟ್ಯಾಕ್ಸಿ, ಕಾಯುವಿಕೆ ದರ, ಲಗೇಜ್‌ ದರ, ರಾತ್ರಿ ದರಗಳು ಪರಿಷ್ಕರಣೆಯಲ್ಲಿ ಸೇರಿವೆ. ಈ ದರ ಪರಿಷ್ಕರಣೆ ಪ್ರಯಾಣಿಕರಿಗೆ ಆಘಾತ ನೀಡಿದರೆ, ಟ್ಯಾಕ್ಸಿ ಚಾಲಕರಿಗೆ ಸಿಹಿ ಸುದ್ದಿಯಾಗಿದೆ.

ತೈಲ ದರ ಹೆಚ್ಚಳ ಸೇರಿದಂತೆ ಇತರೆ ಕಾರಣಗಳಿಂದ ಟ್ಯಾಕ್ಸಿ ದರಗಳನ್ನು ಪರಿಷ್ಕರಣೆ ಮಾಡುವಂತೆ ಟ್ಯಾಕ್ಸಿ ಚಾಲಕರು ನಗರದ ಫ್ರೀಡಂಪಾರ್ಕ್ ನಲ್ಲಿ ಅರೆಬೆತ್ತಲೆ ಹೋರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ದರ ಪರಿಷ್ಕರಣೆ ನಡೆಸಿದ್ದು, ಸೋಮವಾರ ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಗೆ ಬಂದಿವೆ.

ಟ್ಯಾಕ್ಸಿಗಳ ಪರಿಷ್ಕೃತ ದರಗಳು :
ವಾಹನಗಳ ಮಾದರಿ ನಿಗದಿತ ದರ ಪ್ರತಿ ಕಿ.ಮೀ.ಗೆ
ಹವಾನಿಯಂತ್ರಿತ ರಹಿತ ಟ್ಯಾಕ್ಸಿ 75 ರೂ. (ಕನಿಷ್ಠ 4 ಕಿ.ಮೀ.ವರೆಗೆ) 18 ರೂ.
ಹವಾನಿಯಂತ್ರಿತ ಟ್ಯಾಕ್ಸಿ 100 ರೂ. (ಕನಿಷ್ಠ 4 ಕಿ.ಮೀ.ವರೆಗೆ) 24 ರೂ.
ಕಾಯುವಿಕೆ ದರಗಳು ಮೊದಲ 5 ನಿಮಿಷಗಳವರೆಗೆ ಉಚಿತ. ನಂತರದ ಪ್ರತಿ ನಿಮಿಷಕ್ಕೆ 1 ರೂ.,
ಲಗೇಜ್‌ ದರಗಳು ಮೊದಲಿನ 120 ಕೆ.ಜಿ.ವರೆಗೆ ಉಚಿತ (ಸೂಟ್‌ಕೇಸ್‌, ಬೆಡ್ಡಿಂಗ್‌, ಇತ್ಯಾದಿ ವೈಯಕ್ತಿಕ ಲಗೇಜ್‌ಗಳು). ನಂತರದ ಪ್ರತಿ 20 ಕಿ.ಗ್ರಾಂ.ಗೆ 7 ರೂ.
ರಾತ್ರಿ ದರಗಳು ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ ಪ್ರಯಾಣದ ದರದ ಮೇಲೆ ಶೇ.10ರಷ್ಟು ಹೆಚ್ಚುವರಿ ದರ.