ಬೆಳೆ ಸಾಲಮನ್ನಾಕ್ಕೆ ಕೊಡಗು ಪ್ರಾಂತ ರೈತ ಸಂಘ ಒತ್ತಾಯ

02/02/2021

ಮಡಿಕೇರಿ ಫೆ.2 : ಅಕಾಲಿಕ ಮಳೆಯಿಂದ ತತ್ತರಿಸಿರುವ ಕೊಡಗಿನ ಸಣ್ಣ, ಮಧ್ಯಮ ಬೆಳೆಗಾರರ ಬೆಳೆ ಸಂಬಂಧಿತ ಸಾಲ ಪೂರ್ಣ ಮನ್ನಾ ಮಾಡಬೇಕು ಮತ್ತು ಶೂನ್ಯ ಬಡ್ಡಿಯಲ್ಲಿ ಸಾಲ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಸಂಚಾಲಕ ಡಾ.ಈ.ರಾ. ದುರ್ಗಾಪ್ರಸಾದ್ ಒತ್ತಾಯಿಸಿದ್ದಾರೆ. ಪ್ರಮುಖ ಮೂರು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಫೆ.9 ರಂದು ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಅವರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕಾಲಿಕ ಮಳೆಯಿಂದಾಗಿ ಭತ್ತ, ಕಾಫಿ, ಕರಿಮೆಣಸು ಎಲ್ಲಾ ಬೆಳೆಗಳಿಗೂ ಅಪಾರ ನಷ್ಟ ಸಂಭವಿಸಿದೆ. ಅಕಾಲಿಕ ಮಳೆಯಿಂದಾಗಿ ಭತ್ತ ನಾಶವಾಗಿದೆ. ಹುಲ್ಲು ಕೊಳೆತುಹೋಗಿದ್ದು, ಬಾಕಿಯಾಗಿರುವ ಭತ್ತಕ್ಕೆ ದರವಿಲ್ಲದಂತಾಗಿದೆ. ಅಲ್ಲದೇ, ಸರಕಾರವೇ ಸಲಹೆ ನೀಡಿದ್ದ ಪ್ರಕಾರ ರೈತರು ಬೆಳೆಸಿದ ಅತೀರಾ ಭತ್ತಕ್ಕೆ ಸರಕಾರ ಬೆಂಬಲ ಬೆಲೆ ಘೋಷಿಸದೇ ಇರುವುದರಿಂದ ವ್ಯಾಪಾರಿಗಳು ಅತ್ಯಂತ ಕಡಿಮೆ ದರಕ್ಕೆ ಭತ್ತವನ್ನು ಖರೀದಿಸಿ ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳುತ್ತಿರುವುದಾಗಿ ಆರೋಪಿಸಿದರು.
ತಮ್ಮ ಬೆಳೆಗೆ ಬೆಲೆ ಕಡಿಮೆಯಾಗುತ್ತಿರುವಾಗಲೇ ನಿತ್ಯೋಪಯೋಗಿ ಸರಕುಗಳ ಬೆಲೆ ಹೆಚ್ಚುತ್ತಿರುವುದರಿಂದ ರೈತರು ದಿಗ್ಭ್ರಾಂತರಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಣ್ಣ, ಮಧ್ಯಮ ಬೆಳೆಗಾರರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಮತ್ತು ಶೂನ್ಯ ದರದಲ್ಲಿ ಸಾಲ ಕೊಡಬೇಕೆಂದು ಒತ್ತಾಯಿಸಿದರು.
ಕೇರಳ ಸರಕಾರ ಕಾಫಿ ಬೆಳೆಗೆ ಘೋಷಿಸಿದ ಮಾದರಿಯಲ್ಲೇ ಬೆಂಬಲ ಬೆಲೆ ಘೋಷಿಸಬೇಕು ಮತ್ತು ಆ ದರದಲ್ಲೇ ಬೆಳೆಗಾರರಿಂದ ಕೊಳ್ಳುವ ವ್ಯವಸ್ಥೆ ಸರಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಕಾಫಿ ಮಂಡಳಿಯು ತನ್ನ ಉಪಕಛೇರಿಗಳನ್ನು ಮುಚ್ಚಲು ನಿರ್ಧರಿಸಿದ್ದು, ಇದು ಬೆಳೆಗಾರರಿಗೆ ಹಾನಿಕಾರಕವಾದ ಹೆಜ್ಜೆಯಾಗಿದೆ ಎಂದ ಅವರು, ಕಾಫಿ ಬೆಳೆಸುವ ಬೆಳೆಗಾರರ ಸಂಖ್ಯೆಯಲ್ಲಿ ಶೇ. 98ಕ್ಕಿಂತಲೂ ಹೆಚ್ಚು ಬೆಳೆಗಾರರು ಸಣ್ಣ ಬೆಳೆಗಾರರಾಗಿದ್ದು, ಲಕ್ಷಾಂತರ ಮಂದಿ ಕೆಲಸಗಾರರು ಈ ರಂಗದಲ್ಲಿ ದುಡಿಯುತ್ತಿದ್ದಾರೆ. ಅಲ್ಲದೇ ಕಾಫಿ ಬೆಳೆಯ ಬಹುಭಾಗ ರಫ್ತಾಗುತ್ತಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆ ಏರುಪೇರುಗಳಿಂದ ಬೆಳೆಗಾರರನ್ನು ರಕ್ಷಿಸಿ ಅವರಿಗೆ ನ್ಯಾಯಯುತ ದರ ಸಿಗುವಂತೆ ಮಾಡಲು ಕಾಫಿ ಬೋರ್ಡ್‍ನ್ನು ಸ್ಥಾಪಿಸುವ ಮೂಲಕ ಬೆಳೆಗಾರರಿಂದ ಕಾಫಿಯನ್ನು ಕೊಂಡು ಮಾರಾಟ ಮಾಡಿ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುವಂತೆ ಮಾಡುವ ಜವಾಬ್ದಾರಿಯನ್ನು ಹೊಂದಿತ್ತು.
ಆದರೆ, ಕಾಫಿ ಬೋರ್ಡಿನ ರಚನೆಯ ಕ್ರಮದಿಂದ ಕೇಂದ್ರ ಸರ್ಕಾರ ಕಾಫಿ ಬೋರ್ಡನ್ನೇ ದೊಡ್ಡ ವ್ಯಾಪಾರಿಗಳ ಹಿಡಿತಕ್ಕೆ ನೀಡಿ, ದುರ್ಬಲಗೊಳಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದ ದುರ್ಗಾಪ್ರಸಾದ್, ಇದರಿಂದ ಸಣ್ಣ ಬೆಳೆಗಾರರಿಗೆ ಆ ಬೋರ್ಡಿನಲ್ಲಿ ನಿರ್ಣಯಕ ಸ್ಥಾನ ನೀಡದೆ ಕಡೆಗಣಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಣ್ಣ ಬೆಳೆಗಾರರು ನಾಶವಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಕಾಫಿ ಬೋರ್ಡನ್ನು ಸಶಕ್ತಗೊಳಿಸಬೇಕು ಮತ್ತು ಸಣ್ಣ ಬೆಳೆಗಾರರಿಗೆ ನಿರ್ಣಾಯಕ ಪಾತ್ರ ಸೃಷ್ಟಿಸಿ ಅವರ ರಕ್ಷಣೆಗೆ ಇರುವಂತೆ ಬೋರ್ಡನ್ನು ಪುನರ್ ರೂಪಿಸಬೇಕೆಂದು ಆಗ್ರಹಿಸಿದರು.
ಸಣ್ಣ-ಮಧ್ಯಮ ಬೆಳೆಗಾರರ ಸಂಘಟಿತರಾಗಿ ಹೋರಾಟಕ್ಕೆ ಇಳಿಯದಿದ್ದರೆ ಅವರ ಸಮಸ್ಯೆಗಳು ಪರಿಹಾರವಾಗಲು ಸಾಧ್ಯವಿಲ್ಲ. ಆದ್ದರಿಂದ, ಕರ್ನಾಟಕ ಪ್ರಾಂತರೈತ ಸಂಘ ಕೊಡಗು ಜಿಲ್ಲಾ ಘಟಕ ಹೋರಾಟವನ್ನು ರೂಪಿಸಿದ್ದು, ಎಲ್ಲಾ ಸಣ್ಣ, ಮಧ್ಯಮ ಬೆಳೆಗಾರರೂ ಪಕ್ಷ ಭೇದ ಮರೆತು ಸಂಘಟಿತ ಹೋರಾಟಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಸಂಚಾಲನಾ ಸಮಿತಿ ಸದಸ್ಯ ಕೆ.ನೌಶೀರ್ ಹಾಗೂ ಕೆ.ಎ.ಹಂಸ ಚಾಮಿಯಾಲ ಉಪಸ್ಥಿತರಿದ್ದರು.