ಅಕಾಲಿಕ ಮಳೆ : ಕೊಡಗಿನ ಕಾಫಿ ಕ್ಷೇತ್ರಕ್ಕೆ 391.70 ಕೋಟಿ ರೂ. ನಷ್ಟ

02/02/2021

ಮಡಿಕೇರಿ ಫೆ.2 : ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಬಿದ್ದ ಅಕಾಲಿಕ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ 33,631 ಹೆಕ್ಟೇರ್ ವಿಸ್ತೀರ್ಣದಲ್ಲಿ ಕಾಫಿ ಬೆಳೆಗೆ ಹಾನಿಯಾಗಿದ್ದು, ಇದರಿಂದಾಗಿ ಸುಮಾರು 391.70 ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್.ಶಂಕರ್ ತಿಳಿಸಿದ್ದಾರೆ.
ಅಧಿವೇಶನದಲ್ಲಿ ವಿಧಾನಪರಿಷತ್ ಸದಸ್ಯೆ ಎಸ್.ವೀಣಾಅಚ್ಚಯ್ಯ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಕಾಫಿ ಬೆಳೆ ಹಾನಿ ಸಂಬಂಧಿಸಿದಂತೆ ಪರಿಹಾರ ಕೋರಿ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕೋಶದ ಮೂಲಕ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಂತೆ ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ ಶೇ.33ಕ್ಕಿಂತ ಹೆಚ್ಚಿನ ಪ್ರಮಾಣ ಹಾನಿಗೆ ಕಾಫಿ ಸೇರಿದಂತೆ ಪ್ರತೀ ಹೆಕ್ಟೇರ್‍ಗೆ 18ಸಾವಿರ ರೂ. ಪರಿಹಾರ ಧನ ನಿಗದಿಪಡಿಸಲಾಗಿದ್ದು, ಅದರ ಅನ್ವಯ ಕೊಡಗು ಜಿಲ್ಲೆಯಲ್ಲಿ ಕಾಫಿ ಹಾಗೂ ಇತರ ತೋಟಗಾರಿಕೆ ಮತ್ತು ಕೃಷಿ ಬೆಳೆ ಸೇರಿದಂತೆ ಇದುವರೆಗೆ 21,496 ಮಂದಿ ಫಲಾನುಭವಿಗಳಿಗೆ 27.26 ಕೋಟಿ ರೂ.ಗಳ ಪರಿಹಾರ ವಿತರಿಸಲಾಗಿದೆ ಎಂದು ವಿವರಿಸಿದ್ದಾರೆ.
ಕಾಫಿ ಬೆಳೆಗಾರರಿಗೆ ನೆರವಾಗಲು ಕಾಫಿ ಮಂಡಳಿ ವತಿಯಿಂದ ಅಭಿವೃದ್ಧಿ ಉತ್ತೇಜಿತ ಕಾರ್ಯಕ್ರಮಗಳನ್ನು 10 ಹೆಕ್ಟೇರ್‍ವರೆಗೆ ಹಿಡುವಳಿ ಹೊಂದಿರುವ ಸಣ್ಣ ರೈತರಿಗೆ ಘಟಕ ವೆಚ್ಚದ ಶೇ.ಶೇ.40ರಷ್ಟು ಆರ್ಥಿಕ ನೆರವನ್ನು ನೀಡಲಾಗುತ್ತಿದ್ದು, ಅದರನ್ವಯ ತೋಟ ಮರುಸ್ಥಾಪನೆ, ನೀರು ನಿರ್ವಹಣಾ ಘಟಕ, ಪರಿಸರ ಸ್ನೇಹಿ ಕಾಫಿ, ಬೆಳೆಗಾರರ ಸ್ವಯಂಸೇವಕ ಗುಂಪುಗಳು, ಸಹಕಾರ ಸಂಘಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.