ಚೆಟ್ಟಳ್ಳಿ ಸಹಕಾರ ಸಂಘಕ್ಕೆ ಮಹಿಳಾ ಸಂಘಗಳ ಭೇಟಿ

February 2, 2021

ಸಿದ್ದಾಪುರ ಫೆ. 2 : ಅಭಿವೃದ್ಧಿ ಕಾರ್ಯಗಳ ಮೂಲಕ ಗಮನ ಸೆಳೆದಿರುವ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೋಮವಾರಪೇಟೆ ಮಹಿಳಾ ಸಹಕಾರ ಸಂಘ ಮತ್ತು ಮಹಿಳಾ ಒಕ್ಕೂಟಗಳ ಪದಾಧಿಕಾರಿಗಳು ಭೇಟಿ ನೀಡಿದರು.
ಸಂಘದ ಆದಾಯವನ್ನು ಹೆಚ್ಚಿಸಲು ಸಹಕಾರಿಯಾಗಿರುವ ವಾಣಿಜ್ಯ ಮಳಿಗೆ, ಪುಣ್ಯಕೋಟಿ ಕಟ್ಟಡ, ನರೇಂದ್ರಮೋದಿ ಸಭಾಭವನ, ಸಾರ್ವಜನಿಕರ ಉಪಯೋಗಕ್ಕಾಗಿ ಆರಂಭಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಇತ್ತೀಚೆಗೆ ಪ್ರತಿಷ್ಠಾಪಿಸಲ್ಪಟ್ಟ ಪಶುಪತಿ ಶಿವಲಿಂಗವನ್ನು ಪರಿಶೀಲಿಸಿದ ಮಹಿಳಾ ಪದಾಧಿಕಾರಿಗಳು ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಅವರ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳಾ ಸಂಘದ ಪ್ರಮುಖರು ಹಾಗೂ ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರು ಮಾತನಾಡಿ ಚೆಟ್ಟಳ್ಳಿ ಸಂಘ ಇತರ ಸಹಕಾರ ಸಂಘಗಳಿಗೆ ಮಾದರಿಯಾಗಿದೆ ಎಂದರು. ಎಲ್ಲಾ ಸಂಘಗಳಲ್ಲೂ ಈ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಮತ್ತು ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಬೇಕೆಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಉಷಾತೇಜಸ್ವಿ, ಸುಮಾಸುದೀಪ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.

error: Content is protected !!