ಭಾಗಮಂಡಲದ ಶ್ರೀಕಾವೇರಿ ವಿದ್ಯಾ ಸಂಘ ಆದಿಚುಂಚನಗಿರಿ ಮಹಾ ಸಂಸ್ಥಾನದ ಸುಪರ್ದಿಗೆ

03/02/2021

ಮಡಿಕೇರಿ ಫೆ.3 : ಭಾಗಮಂಡಲದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಭವಿಷ್ಯದ ದೃಷ್ಟಿಯಿಂದ ಮತ್ತು ಇಂದಿನ ಅಗತ್ಯತೆಗೆ ಅನುಗುಣವಾಗಿ ಆಧುನಿಕ ಹಾಗೂ ಉನ್ನತ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಭಾಗಮಂಡಲದ ಶ್ರೀಕಾವೇರಿ ವಿದ್ಯಾ ಸಂಘವನ್ನು ಆದಿ ಚುಂಚನಗಿರಿ ಮಹಾ ಸಂಸ್ಥಾನದ ಸುಪರ್ದಿಗೆ ಒಪ್ಪಿಸಲಾಗುತ್ತಿದ್ದು, ಗುರುವಂದನೆ ಮತ್ತು ಸಮರ್ಪಣಾ ಸಮಾರಂಭ ಫೆ.8 ರಂದು ನಡೆಯಲಿದೆ ಎಂದು ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1959 ರಲ್ಲಿ ಆರಂಭಗೊಂಡ ಶ್ರೀಕಾವೇರಿ ವಿದ್ಯಾ ಸಂಘ ಸುವರ್ಣ ಮಹೋತ್ಸವವನ್ನು ಕಂಡಿದ್ದು, ಇಂದಿನ ಬದಲಾದ ಪರಿಸ್ಥಿತಿಯಲ್ಲಿ ನಿರ್ವಹಣೆ ಕಷ್ಟ ಸಾಧ್ಯವಾಗಿರುವುದರಿಂದ ಶ್ರೀಡಾ.ನಿರ್ಮಲಾನಂದ ಮಹಾಸ್ವಾಮಿಗಳ ಸಮ್ಮುಖದಲ್ಲಿ ಶ್ರೀಆದಿ ಚುಂಚನಗಿರಿ ಮಠಕ್ಕೆ ಹಸ್ತಾಂತರಿಸುತ್ತಿರುವುದಾಗಿ ತಿಳಿಸಿದರು.
ಫೆ.8 ರಂದು ಬೆಳಗ್ಗೆ 11 ಗಂಟೆಗೆ ಶ್ರೀಕಾವೇರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರೀ ಡಾ.ನಿರ್ಮಲಾನಂದ ಮಹಾ ಸ್ವಾಮೀಜಿಗಳು ಸಮರ್ಪಣಾ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಆದಿ ಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ಶಂಭುನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಶಾಸಕ ಕೊಂಬಾರನ ಜಿ.ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ಸತೀಶ್ ಕುಮಾರ್ ಹೇಳಿದರು.
ವಿದ್ಯಾ ಸಂಘದ ಸ್ಥಳ ದಾನಿಗಳಾದ ಚೆದುಕಾರು ಮತ್ತು ಹೊಸಗದ್ದೆ ಕುಟುಂಬದ ಪಟ್ಟೆದಾರರಿಗೆ ಸಮಾರಂಭದಲ್ಲಿ ಗೌರವ ಸಮರ್ಪಣೆ ಮಾಡಲಾಗುವುದು. ಅಲ್ಲದೆ, ಗುರುವಂದನಾ ಕಾರ್ಯಕ್ರಮ ಕೂಡ ನಡೆಯಲಿದೆ ಎಂದರು.
ಪ್ರೌಢಶಾಲೆಯ ನಂತರ 1968ರಲ್ಲಿ ಪಿಯುಸಿ ತರಗತಿಗಳು ಆರಂಭವಾಗಿ 1972 ರಲ್ಲಿ ದ್ವಿತೀಯ ಪಿಯುಸಿಯೊಂದಿಗೆ ಶ್ರೀ ಕಾವೇರಿ ವಿದ್ಯಾಸಂಘ ಜೂನಿಯರ್ COLLEGE ಆಗಿ ಪರಿವರ್ತನೆಗೊಂಡಿತು. ಈ ಸಂಸ್ಥೆಯಲ್ಲಿ ಲಕ್ಷಾಂತರ ಮಂದಿ ವಿದ್ಯಾರ್ಜನೆ ಮಾಡಿದ್ದು, ಹಲವು ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಂಸ್ಥೆಯ ಆರ್ಥಿಕ ಸ್ಥಿತಿ ಹದಗೆಟ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ದುಸ್ತರವಾಗಿದೆ. ವಿದ್ಯಾಲಯದ ಸುತ್ತಮುತ್ತ ಆಂಗ್ಲ ಮಾಧ್ಯಮದ ಶಾಲೆ ಆರಂಭಗೊಂಡು ಕನ್ನಡ ಮಾಧ್ಯಮಕ್ಕೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಯಿತು.
ಅಲ್ಲದೆ, ಗ್ರಾಮೀಣ ವಿದ್ಯಾರ್ಥಿಗಳಿಂದ ಶುಲ್ಕವನ್ನು ಸಂಗ್ರಹಿಸಲಾಗದೆ ಆರ್ಥಿಕ ಹಿನ್ನಡೆ ಉಂಟಾಯಿತು. ಸುಮಾರು 60 ವರ್ಷಗಳ ಹಿಂದೆ ನಿರ್ಮಿಸಲಾದ ಶಾಲೆಯ ಕಟ್ಟಡಗಳು ಶಿಥಿಲಗೊಂಡಿದೆ. ಕೊಠಡಿಗಳ ಮರು ನಿರ್ಮಾಣಕ್ಕೆ ದೊಡ್ಡ ಮಟ್ಟದ ಹಣವನ್ನು ಸಂಗ್ರಹಿಸುವುದು ಕಷ್ಟಸಾಧ್ಯವಾಗಿದೆ. ಇದೆಲ್ಲವನ್ನು ಮನಗಂಡು ವಿದ್ಯಾಸಂಘದ ಆಡಳಿತ ಮಂಡಳಿ ಸರ್ವ ಸದಸ್ಯರ ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಒಮ್ಮತದ ನಿರ್ಧಾರದಂತೆ ಆದಿ ಚುಂಚನಗಿರಿ ಮಹಾ ಸಂಸ್ಥಾನಕ್ಕೆ ವಿದ್ಯಾಸಂಸ್ಥೆಯನ್ನು ಹಸ್ತಾಂತರಿಸುತ್ತಿರುವುದಾಗಿ ಸತೀಶ್ ಕುಮಾರ್ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಹಾರಿಸ್ ಪಡಕ್ಕಲ್, ನಿರ್ದೇಶಕರುಗಳಾದ ರವೀಂದ್ರ ಹೆಬ್ಬಾರ್, ನಂಜುಂಡಪ್ಪ ಹಾಗೂ ಪ್ರಾಂಶುಪಾಲರಾದ ಎಂ.ಕೆ.ಜಾನಕಿ ಉಪಸ್ಥಿತರಿದ್ದರು.