ಫೆ.7 ರಂದು ಮಡಿಕೇರಿಯಲ್ಲಿ ದಲಿತ ರತ್ನ ಪ್ರಶಸ್ತಿ ಪ್ರದಾನ

03/02/2021

ಮಡಿಕೇರಿ ಫೆ.3 : ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಪ್ರತಿಭಾವಂತ ದಲಿತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಫೆ.7 ರಂದು ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ದಲಿತ ರತ್ನ ಪ್ರಶಸ್ತಿಯನ್ನು ಕೂಡ ಪ್ರದಾನ ಮಾಡಲಾಗುತ್ತಿದ್ದು, ಈ ಬಾರಿ ಕರ್ಣಂಗೇರಿ ಗ್ರಾಮದ ಹೆಚ್.ಸಿ.ಬಸಪ್ಪ ಹಾಗೂ ಹೆಚ್.ಬಿ.ಮಂಜುಳಾ ದಂಪತಿಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಲಿತ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗದ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಶೈಕ್ಷಣಿಕ ಪ್ರೋತ್ಸಾಹ ನೀಡುವುದಕ್ಕಾಗಿ ಪ್ರತಿ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಾ ಬರಲಾಗುತ್ತಿದೆ ಇದು 32 ನೇ ವರ್ಷದ ಕಾರ್ಯಕ್ರಮವೆಂದು ತಿಳಿಸಿದರು.
ಭಾನುವಾರ ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಹೆಚ್.ವಿ.ದೇವದಾಸ್ ಉದ್ಘಾಟಿಸಲಿದ್ದು, ಮಡಿಕೇರಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀ ಚಂದ್ರಶೇಖರ್ ಮುಖ್ಯ ಭಾಷಣ ಮಾಡಲಿದ್ದಾರೆ. ನಗರಸಭಾ ಪೌರಾಯುಕ್ತ ಎಸ್.ವಿ. ರಾಮದಾಸ್. ಸ್ತ್ರೀ ರೋಗ ತಜ್ಞೆ ಸೌಮ್ಯ ಪ್ರಕಾಶ್, ಶ್ರೀ ರಾಜರಾಜೇಶ್ವರಿ ದೇವಾಲಯದ ಧರ್ಮಾಧಿಕಾರಿ ಹೆಚ್.ಎಸ್.ಗೋವಿಂದ ಸ್ವಾಮಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಡಿಕೇರಿ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಕನ್ನಿಕಾ ಡಿ., ನಿರ್ಮಲಾ ಹೆಚ್.ಪಿ., ಅತಿಥಿಗಳಾಗಿ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ, ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ಡಿ.ಜೆ. ಈರಪ್ಪ, ಹೆಚ್.ಎಸ್. ಗಣೇಶ್, ಮಡಿಕೆÉೀರಿ ತಾಲ್ಲೂಕು ಸಂಚಾಲಕ ಎ.ಪಿ. ದೀಪಕ್, ಸೋಮವಾರಪೇಟೆ ತಾಲ್ಲೂಕು ಸಂಚಾಲಕ ಎಂ.ಎಸ್. ಕುಮಾರ್, ವಿರಾಜಪೇಟೆ ತಾಲ್ಲೂಕು ಸಂಚಾಲಕ ಸತೀಶ್ ಕುಮಾರ್ ಹಾಗೂ ಮಡಿಕೇರಿ ನಗರ ಸಂಚಾಲಕ ಸಿ.ಪಿ. ಸಿದ್ದೇಶ್ವರ ಉಪಸ್ಥಿತರಿರುವರು ಎಂದು ದಿವಾಕರ್ ಮಾಹಿತಿ ನೀಡಿದರು.
::: ದಲಿತ ರತ್ನ ಪ್ರಶಸ್ತಿ :::
ಕೂಲಿ ಕಾರ್ಮಿಕರಾಗಿರುವ ಕರ್ಣಂಗೇರಿ ಗ್ರಾಮದ ಹೆಚ್.ಸಿ.ಬಸಪ್ಪ ಹಾಗೂ ಹೆಚ್.ಬಿ.ಮಂಜುಳಾ ದಂಪತಿಗಳ ನಾಲ್ವರು ಪುತ್ರಿಯರಾದ ಎಂ.ಬಿ. ರೂಪ, ಎಂ.ಬಿ. ದೀಪ, ಎಂ.ಬಿ. ದಿವ್ಯ ಹಾಗೂ ಎಂ.ಬಿ. ಕಾವ್ಯ ಅವರುಗಳು ಪಿಹೆಚ್‍ಡಿ ಪದವಿ ಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಈ ಕಾರಣದಿಂದ ಮಕ್ಕಳÀ ಯಶಸ್ಸಿಗಾಗಿ ಶ್ರಮಿಸಿದ ತಂದೆ, ತಾಯಿಗೆ ದಲಿತ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದಾಗಿ ದಿವಾಕರ್ ಹೇಳಿದರು.
::: ಅಂಬೇಡ್ಕರ್ ಪ್ರತಿಮೆ ಬೇಕು :::
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಪ್ರತಿಮೆ ಸ್ಥಾಪನೆಗಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರು ಇಲ್ಲಿಯವರೆಗೆ ಬೇಡಿಕೆ ಈಡೇರಿಲ್ಲ ಎಂದು ಅವರು ಇದೇ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿದರು. ಡಾ.ಅಂಬೇಡ್ಕರ್ ಜಯಂತಿಯ ಒಳಗಾಗಿ ಪ್ರತಿಮೆ ನಿರ್ಮಾಣಕ್ಕೆ ಚಾಲನೆ ನೀಡಬೇಕೆಂದು ಒತ್ತಾಯಿಸಿದ ಅವರು, ತಪ್ಪಿದಲ್ಲಿ ಸಮಿತಿಯ ಮೂಲಕವೇ ಅಂಬೇಡ್ಕರ್ ಭವನದ ಎದುರು ಪ್ರತಿಮೆ ಪ್ರತಿಷ್ಟಾಪಿಸಲಾಗುವುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ, ತಾಲ್ಲೂಕು ಸಂಚಾಲಕ ಎ.ಪಿ.ದೀಪಕ್ ಹಾಗೂ ನಗರ ಸಂಚಾಲಕ ಸಿ.ಪಿ.ಸಿದ್ದೇಶ್ವರ ಉಪಸ್ಥಿತರಿದ್ದರು.