ರಸ್ತೆ ಕಾಮಗಾರಿ ವಿಳಂಬ : ಮಸಗೋಡು ಗ್ರಾಮಸ್ಥರಿಂದ ಪ್ರತಿಭಟನೆ

February 3, 2021

ಸೋಮವಾರಪೇಟೆ ಫೆ.3 : ಮಸಗೋಡು ಗ್ರಾಮದ ರಸ್ತೆ ಕಾಮಗಾರಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬುಧವಾರ ಲೋಕೋಪಯೋಗಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಗುತ್ತಿಗೆದಾರ ಉದಯ ಅವರು ಕಳೆದ ಒಂದು ವರ್ಷದಿಂದ ರಸ್ತೆ ಕಾಮಗಾರಿ ಪ್ರಾರಂಭಿಸಿಲ್ಲ. ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆ ಹಾಕಿದರು.
ಕೊಡಗು ಪ್ಯಾಕೇಜ್‍ನಲ್ಲಿ ಮಸಗೋಡು ರಸ್ತೆಗೆ 75ಲಕ್ಷ ರೂ.ಗಳು ಬಿಡುಗಡೆಯಾಗಿದ್ದು, 2019ರ ಅಕ್ಟೋಬರ್ ತಿಂಗಳಲ್ಲಿ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ನಂತರದ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಈಗಾಗಲೇ ಗುತ್ತಿಗೆದಾರರಿಗೆ ನೋಟಿಸು ಜಾರಿಗೊಳಿಸಲಾಗಿದೆ. ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ಎಸ್.ಮೋಹನ್ ಕುಮಾರ್ ಹೇಳಿದರು.
ಗುತ್ತಿಗೆದಾರ ಉದಯ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಗುರುವಾರದಿಂದ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ಕೊಟ್ಟ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಮಸಗೋಡು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎಸ್.ದೇವರಾಜ್, ಕಾರ್ಯದರ್ಶಿ ಬಿ.ಪಿ.ಸತೀಶ್, ಉಪಾಧ್ಯಕ್ಷ ಬಸವರಾಜ್, ಪದಾಧಿಕಾರಿಗಳಾದ ಶಶಿಕುಮಾರ್, ಎಂ.ಆರ್.ರಾಜು ಮತ್ತು ಗ್ರಾಮಸ್ಥರು ಇದ್ದರು.

error: Content is protected !!