ರೈತರ ಹೆಸರಿನ ಹೋರಾಟದಲ್ಲಿ ಅಂತರರಾಷ್ಟ್ರೀಯ ಪಿತೂರಿ : ಸಚಿವ ಸದಾನಂದಗೌಡ ಆರೋಪ

February 4, 2021

ಮಡಿಕೇರಿ ಫೆ.4 : ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಒಂದು ದೇಶ, ಒಂದು ಕಾನೂನು ವ್ಯವಸ್ಥೆಯನ್ನು ವಿಭಜಿಸುವ ಅಂತರರಾಷ್ಟ್ರೀಯ ಮಟ್ಟದ ಪಿತೂರಿ ನಡೆಯುತ್ತಿದ್ದು, ಇದರ ಒಂದು ಭಾಗವಾಗಿ ರೈತರ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆರೋಪಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತನ್ನ ಸ್ವಂತ ಭೂಮಿ, ಹಣ, ಶ್ರಮದಿಂದ ಬೆಳೆ ಬೆಳೆದ ರೈತನಿಗೆ ಬೆಳೆ ಮಾರಾಟ ಮಾಡುವ ಸಂದರ್ಭ ಮಧ್ಯವರ್ತಿಗಳು ಹಾಗೂ ಸರ್ಕಾರದಿಂದ ತೊಂದರೆಯಾಗಬಾರದು ಮತ್ತು ಸ್ವಾತಂತ್ರ್ಯವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕೆನ್ನುವ ಉದ್ದೇಶದಿಂದ ಕಾಯ್ದೆಯನ್ನು ರೂಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಎಪಿಎಂಸಿ ಯಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ, ಆದರೆ ದರ ಮತ್ತು ಕರ ನಿಗಧಿ ಮಾಡುವಾಗ ಮಾತ್ರ ನಿಗಾವಹಿಸುತ್ತದೆ ಎಂದರು. ರೈತರನ್ನು ಮಾತುಕತೆಗೆ ಕರೆದಿದ್ದೇವೆ, ಆದರೆ ಯಾರೂ ಬರುತ್ತಿಲ್ಲ, ಯಾಕೆ ಬರುತ್ತಿಲ್ಲವೆಂದು ತಿಳಿದಿಲ್ಲ. ಹೋರಾಟದಲ್ಲಿ ತೊಡಗಿರುವವರೆಲ್ಲರೂ ರೈತರಲ್ಲ, ಇದೊಂದು ರಾಜಕೀಯ ಪ್ರೇರಿತ ಪ್ರತಿಭಟನೆಯಾಗಿದೆ.
ಅಲ್ಲದೆ ಈ ವಿಚಾರದಲ್ಲಿ ಅಂತರರಾಷ್ಟ್ರೀಯ ಸಿನಿಮಾ ಮಂದಿ ಮಧ್ಯ ಪ್ರವೇಶ ಮಾಡುತ್ತಿರುವುದು ಯಾಕೆ, ಅವರಿಗೆ ರೈತ ಕಾನೂನು ಗೊತ್ತಿದೆಯೇ ಎಂದು ಪ್ರಶ್ನಿಸಿದ ಸದಾನಂದಗೌಡ ಅವರು, ಕಾಶ್ಮೀರ ಸಮಸ್ಯೆ ಬಗೆಹರಿದು ಒಂದು ದೇಶ, ಒಂದು ಕಾನೂನು ಜಾರಿಯಾದ ನಂತರದ ಅಂತರರಾಷ್ಟ್ರೀಯ ಕುತಂತ್ರ ಇದಾಗಿದೆ ಎಂದು ಆರೋಪಿಸಿದರು.
ರೈತರ ಸಮಸ್ಯೆಗಳಿಗೆ ಮಾತುಕತೆಯ ಮೂಲಕ ಪರಿಹಾರ ಒದಗಿಸಲು ಸರ್ಕಾರ ಇಂದಿಗೂ ಸಿದ್ಧವಿದೆ ಎಂದರು.
::: ಸೆಸ್ ಮತ್ತು ಟ್ಯಾಕ್ಸ್ ವಿಭಿನ್ನ :::
ಸೆಸ್ ಮತ್ತು ಟ್ಯಾಕ್ಸ್ ವಿಭಿನ್ನವಾಗಿದ್ದು, ಇದರ ವ್ಯತ್ಯಾಸವನ್ನು ಜನರು ಮೊದಲು ಅರ್ಥ ಮಾಡಿಕೊಳ್ಳಬೇಕು. ಸೆಸ್‍ನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಲಾಗುವುದೋ ಆ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆ. ಆದರೆ ಟ್ಯಾಕ್ಸ್‍ನ್ನು ಯಾವುದಕ್ಕೆ ಬೇಕಾದರೂ ಬಳಸಬಹುದಾಗಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಕೃಷಿ ಸೆಸ್‍ನ್ನು ಕೃಷಿಗೇ ಬಳಸಲಾಗುತ್ತದೆ ಎಂದು ಸದಾನಂದಗೌಡ ಇದೇ ಸಂದರ್ಭ ಸ್ಪಷ್ಟಪಡಿಸಿದರು.
ಈ ರೀತಿಯ ವ್ಯವಸ್ಥೆಗಳಿಂದಲೇ ಇಂದು ಸುಮಾರು 8 ಕೋಟಿ ಮಹಿಳೆಯರಿಗೆ ಉಚಿತವಾಗಿ ಅಡುಗೆ ಅನಿಲದ ಸಿಲಿಂಡರ್‍ಗಳನ್ನು ನೀಡಲು ಸಾಧ್ಯವಾಗಿದೆ ಎಂದರು.
::: ಶಬ್ಧ ಪ್ರಯೋಗ ಗೊತ್ತಿಲ್ಲ :::
ಸುಮಾರು 10 ಬಾರಿ ಬಜೆಟ್ ಮಂಡಿಸಿ, 5 ವರ್ಷ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರಿಗೆ ಶಬ್ಧ ಪ್ರಯೋಗವೇ ಗೊತ್ತಿಲ್ಲ. ಅವರು ಮಾಡಿದ ಟೀಕೆಗೆ ನಾನು ಉತ್ತರ ನೀಡುವುದಿಲ್ಲ, ಜನರೇ ನೀಡುತ್ತಾರೆ ಎಂದು ಬಜೆಟ್ ಬಗೆಗಿನ ಟೀಕೆಗೆ ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದರು.

error: Content is protected !!