ಕಾಫಿ ಕೃಷಿಗೂ ಪ್ರೋತ್ಸಾಹ ದೊರೆಯಲಿದೆ : ಸಚಿವ ಡಿ.ವಿ.ಸದಾನಂದಗೌಡ ವಿಶ್ವಾಸ

February 4, 2021

ಮಡಿಕೇರಿ ಫೆ.4 : ಕೇಂದ್ರದ ಬಜೆಟ್‍ನಲ್ಲಿ ವಿವಿಧ ಉತ್ಪನ್ನಗಳ ಮೇಲೆ ಕೃಷಿ ಸೆಸ್‍ನ್ನು ವಿಧಿಸಲಾಗಿದ್ದು, ಈ ಸೆಸ್‍ನ್ನು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಮಾತ್ರ ಬಳಸಲು ಅವಕಾಶವಿರುತ್ತದೆ. ಮುಂದಿನ ದಿನಗಳಲ್ಲಿ ಕಾಫಿ ಕೃಷಿಗೂ ಪ್ರೋತ್ಸಾಹ ದೊರೆಯಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಜೆಟ್‍ನಲ್ಲಿ ಕಾಫಿಗೆ ಯಾವುದೇ ಪ್ರೋತ್ಸಾಹದ ಪ್ರಸ್ತಾಪವಾಗದಿರುವ ಬಗ್ಗೆ ಮಡಿಕೇರಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಂದಿನ ದಿನಗಳಲ್ಲಿ ಪ್ರೋತ್ಸಾಹ ಸಿಗಬಹುದು ಎಂದರು.
ರೈತರ ವಿವಿಧ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವುದಕ್ಕೆ ಕೇಂದ್ರ ಸರಕಾರ ಈಗಲೂ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆಯಿಂದಾಗಿ ಬಿಜೆಪಿಯ ಕೆಲವು ಶಾಸಕರು ಅಸಮಾಧಾನಗೊಂಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸಂಪುಟ ವಿಸ್ತರಣೆ ಸಂದರ್ಭ ಹಲವು ಹಿರಿಯ ಶಾಸಕರಿಗೆ ಸಚಿವ ಸ್ಥಾನ ಸಿಗದಿರುವುದರಿಂದ ಅಸಮಾಧಾನಗೊಳ್ಳುವುದು ಸಹಜ. ಆದರೆ ಸಂಪುಟ ರಚನೆ ಅಥವಾ ವಿಸ್ತರಣೆ ಸಂದರ್ಭ ಎಲ್ಲವನ್ನೂ ಸಮನ್ವಯತೆಯಿಂದ ಮಾಡಬೇಕಾಗಿರುವುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಇದು ಅತೃಪ್ತ ಶಾಸಕರಿಗೂ ತಿಳಿದಿದ್ದು, ಈ ಗೊಂದಲ ಶೀಘ್ರವೇ ಶಮನಗೊಳ್ಳಲಿದೆ ಎಂದರು.
ಶಾಸಕ ಯತ್ನಾಳ್ ಅವರು ಕ್ಷಣಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಇದೇ ಸಂದರ್ಭ ಸದಾನಂದಗೌಡ ತಿಳಿಸಿದರು.

error: Content is protected !!