ಗೌಡ ಸಮಾಜ ಸಭಾಂಗಣ ಉದ್ಘಾಟನೆ : ಜಗತ್ತನ್ನು ಆಳುವ ಶಕ್ತಿ ಇರುವುದು ಪ್ರೀತಿಗೆ ಮಾತ್ರ : ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮಿ ಅಭಿಮತ

04/02/2021

ಮಡಿಕೇರಿ ಫೆ.4 : ಇಡೀ ಜಗತ್ತನ್ನು ಆಳುವ ಶಕ್ತಿ ಇರುವುದು ಪ್ರೀತಿ ಮತ್ತು ಸೌಹಾರ್ದತೆಗೆ ಮಾತ್ರವೆಂದು ಅಭಿಪ್ರಾಯಪಟ್ಟಿರುವ ಶ್ರೀಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳು, ನೊಂದವರ ಸಂಕಷ್ಟಕ್ಕೆ ಸ್ಪಂದಿಸುವ ಗುಣವನ್ನು ಪ್ರತಿಯೊಬ್ಬರು ಹೊಂದಿರಬೇಕೆಂದು ಕರೆ ನೀಡಿದ್ದಾರೆ.
ಕೊಡಗು ಗೌಡ ಸಮಾಜ ಮಡಿಕೇರಿ ನಗರದಲ್ಲಿ ನಿರ್ಮಿಸಿರುವ ಸುಸಜ್ಜಿತ ನೂತನ ‘ಸಭಾ ಭವನ’ವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಪ್ರೀತಿ, ವಿಶ್ವಾಸದ ಮೂಲಕ ಗೌಡ ಸಮುದಾಯ ಬಾಂಧವರು ಸಮಾಜದ ಬೆಳವಣಿಗೆಗೆ ಕಾರಣೀಭೂತರಾಗಬೇಕೆಂದು ಕಿವಿಮಾತು ಹೇಳಿದರು.
ಭಾರತ ದಾರಿದ್ರ್ಯ, ದಾಸ್ಯದ ಮತ್ತು ಅಜ್ಞಾನದಿಂದ ಕೂಡಿದ ರಾಷ್ಟ್ರವೆನ್ನುವ ತಪ್ಪು ಅನಿಸಿಕೆ ಹೊಂದಿದ್ದ ಪಾಶ್ಚಿಮಾತ್ಯರ ಚಿಂತನೆಯನ್ನು ಬದಲಿಸುವ ರೀತಿಯಲ್ಲಿ 1893 ರಲ್ಲಿ ಅಮೇರಿಕಾದಲ್ಲಿ ಭಾಷಣ ಮಾಡಿ, ಭಾರತ ಅಜ್ಞಾನಿಗಳ ನಾಡಲ್ಲ, ಬದಲಾಗಿ ಜ್ಞಾನವನ್ನು ಕೊಟ್ಟ ನಾಡೆಂದು ತಿಳಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಹುಟ್ಟಿದ ಹಿಂದೂ ದಿನಾಂಕ ಇಂದೇ ಆಗಿದ್ದು, ಇಂತಹ ಶುಭ ದಿನದಂದೇ ನೂತನ ಸಭಾಭವನ ಉದ್ಘಾಟನೆಯಾಗುತ್ತಿರುವುದು ಸಂತಸದ ವಿಚಾರವೆಂದು ತಿಳಿಸಿದರು.
ಇಂತಹ ಸ್ವಾಮಿ ವಿವೇಕಾನಂದರ ಗಾಢ ಪ್ರಭಾವಕ್ಕೆ ಒಳಗಾಗಿದ್ದ ಕೆ. ಹೆಚ್. ರಾಮಯ್ಯ ಅವರೇ ರಾಜ್ಯ ಮಟ್ಟದ ಒಕ್ಕಲಿಗರ ಸಂಘಕ್ಕೆ ಬುನಾದಿಯನ್ನು ಹಾಕಿದವರು ಹಾಗೂ ಮಠಕ್ಕೆ ಸಾಮಾಜಿಕವಾದ ಅಡಿಗಲ್ಲನ್ನು ಹಾಕಿಕೊಟ್ಟವರೆಂದು ಚುಂಚ ಶ್ರೀಗಳು ಸ್ಮರಿಸಿಕೊಂಡು, ರಾಮಯ್ಯ ಅವರು ಕೇವಲ ಸಮಾಜವನ್ನು ಆರಂಭಿಸಿದವರಲ್ಲ. ಬದಲಾಗಿ ಇಡೀ ಸಮುದಾಯವನ್ನು ಒಂದಾಗಿ ಬೆಸೆದವರೆಂದು ಮುಕ್ತವಾಗಿ ನುಡಿದರು.
ಸಮಾಜದಿಂದ ಪಡೆದುದನ್ನು ಸ್ವಯಂ ತಾನೇ ಬಳಸಿಕೊಳ್ಳುವಾತ ಬದುಕಿದ್ದು ಸತ್ತಂತೆ. ಇದಕ್ಕೆ ಬದಲಾಗಿ ಮದರ್ ಥೆರೇಸಾರ ರೀತಿಯಲ್ಲಿ ನೊಂದವರ ಸಂಕಷ್ಟಕ್ಕೆ ಸ್ಪಂದಿಸಲು ಎಲ್ಲಾ ನೋವು, ಅವಮಾನಗಳನ್ನು ಸಹಿಸಿ ಮುನ್ನಡೆಸುವ ‘ಸಹನೆ’ ಅತ್ಯವಶ್ಯ. ಈ ಹಿನ್ನೆಲೆಯಲ್ಲಿ ಇಂತಹ ಭವ್ಯ ಭವನ ನಿರ್ಮಾಣಕ್ಕೆ ಎಲ್ಲಾ ಸಂಕಷ್ಟಗಳನ್ನು ಸಹಿಸಿ ಅಗತ್ಯ ನೆರವನ್ನು ಸಮುದಾಯ ಬಾಂಧವರಿಂದ ಸಂಗ್ರಹಿಸಿ ಉದ್ದೇಶಿತ ಕಾರ್ಯವನ್ನು ಸಾಧಿಸುವ ಮೂಲಕ ಮಡಿಕೇರಿ ಗೌಡ ಸಮಾಜ ಆಡಳಿತ ಮಂಡಳಿ ನಿಜಕ್ಕೂ ಶ್ಲಾಘನೀಯ ಕಾರ್ಯವೆಸಗಿದೆಯೆಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಹಿರಿಯರ ದೂರದೃಷ್ಟಿಯಿಂದ ಸ್ಥಾಪಿತವಾದ ಕೊಡಗು ಗೌಡ ಸಮಾಜವನ್ನು ಈಗಿನ ಮತ್ತು ಹಿಂದಿನ ಅಧ್ಯಕ್ಷರುಗಳು ಬೆಳೆಸುತ್ತಾ ಬಂದಿದ್ದಾರೆ. ಇಂದಿನ ಅಗತ್ಯತೆಗೆ ತಕ್ಕಂತೆ ಇದೀಗ ನೂತನ ಸುಸಜ್ಜಿತ ಸಭಾ ಭವನ ಜಿಲ್ಲೆಯ ಜನತೆಯ ಅನುಕೂಲತೆಗಾಗಿ ನಿರ್ಮಾಣವಾಗಿದೆ. ಇಂತಹ ಭವನ ಭಾಗಮಂಡಲ, ಚೆಟ್ಟಳ್ಳಿ ಮೊದಲಾದೆಡೆಗಳಲ್ಲಿ ನಿರ್ಮಿಸಲು ಅಗತ್ಯವಾದ ನೆರವನ್ನು ಸರ್ಕಾರಕ್ಕೆ ಕೊರೊನಾ ಸಂಕ್ರಮಣದ ಹಿನ್ನೆಲೆಯ ಆರ್ಥಿಕ ಸಂಕಷ್ಟದಿಂದ ಸಾಧ್ಯವಾಗಿಲ್ಲ. ಮುಂಬರುವ ದಿನಗಳಲ್ಲಿ ಅಗತ್ಯ ನೆರವನ್ನು ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಸಹಾಯ ಹಸ್ತ ಸದುಪಯೋಗವಾಗಲಿ- ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳನ್ನು ನಡೆಸುವುದು ಅತ್ಯಂತ ಕ್ಲಿಷ್ಟಕರವಾಗಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಶ್ರೀ ಆದಿ ಚುಂಚನಗಿರಿ ಮಠ ಜಿಲ್ಲೆಯ ಗ್ರಾಮೀಣ ಭಾಗದ ಶಾಲೆÀಗಳನ್ನು ದತ್ತು ತೆಗೆದುಕೊಂಡು ಮುನ್ನಡೆಸುವ ಕಾರ್ಯಕ್ಕೆ ಮುಂದಾಗಿದೆ. ಇಂದು ಮದೆ ಮಹೇಶ್ವರ ಶಾಲೆ ಆದಿ ಚುಂಚನಗಿರಿ ಮಠಕ್ಕೆ ಹಸ್ತಾಂತರವಾಗಿದ್ದು, ಕೆಲವೇ ದಿನಗಳಲ್ಲಿ ಭಾಗಮಂಡಲದ ಕಾವೇರಿ ವಿದ್ಯಾ ಸಂಸ್ಥೆಯು ಹಸ್ತಾಂತರವಾಗಲಿದೆ. ಶಿಕ್ಷಣದೊಂದಿಗೆ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಶ್ರೀ ಆದಿ ಚುಂಚನಗಿರಿ ಮಠದ ಸಹಾಯ ಹಸ್ತವನ್ನು ಜಿಲ್ಲೆಯ ಜನತೆ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಡಿವಿಎಸ್-ಕೆಜಿಬಿ ದಂಪತಿಗಳಿಗೆ ಸನ್ಮಾನ- ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮತ್ತು ಡಾಟಿ ಸದಾನಂದ ಗೌಡ ದಂಪತಿಗಳನ್ನು ಇದೇ ಸಂದರ್ಭ ಸಮಾಜದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತಲ್ಲದೆ, ಭವನ ನಿರ್ಮಾಣಕ್ಕೆ ನೆರವನ್ನು ನೀಡಿದ ಕೆ.ಜಿ. ಬೋಪಯ್ಯ ಮತ್ತು ಕುಂತಿ ಬೋಪಯ್ಯ ದಂಪತಿಗಳನ್ನು ಸನ್ಮಾನಿಸಲಾಯಿತು.
ನೂತನ ಭವನ ನಿರ್ಮಾಣಕ್ಕೆ ಉದಾರವಾದ ನೆರವನ್ನು ನೀಡಿದ ನೂರಕ್ಕೂ ಹೆಚ್ಚಿನ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನ ನಾಥ ಸ್ವಾಮೀಜಿಗಳು, ಮಠದ ಮೈಸೂರು ಶಾಖಾ ಮಠದ ಸೋಮೇಶ್ವರ ನಾಥ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿ, ಕರ್ನಾಟಕ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾದ ಎಸ್.ಬಿ. ಕುಶಾಲಪ್ಪ, ಕೊಡಗು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಬಿ.ಎ. ಹರೀಶ್, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ, ವಿದ್ಯಾ ವಿಕಾಸ ವಿದ್ಯಾಸಂಸ್ಥೆಗಳ ಅಧ್ಯಕ್ಷ ವಾಸು, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಆರ್. ಸೋಮಣ್ಣ, ಕೊಡಗು ಜಿಲ್ಲಾ ಒಕ್ಕಲಿಗ ಸಮಾಜದ ಅಧ್ಯಕ್ಷರಾದ ಎಸ್.ಎಂ. ಚಂಗಪ್ಪ, ಭವನದ ಆರ್ಕಿಟೆಕ್ಟ್ ಮುಕ್ಕಾಟಿ ಮನೋಜ್ ಕುಮಾರ್ ಪಾಲ್ಗೊಂಡಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.