ಒಂದು ಸಮುದಾಯ ಮತ್ತೊಂದು ಸಮುದಾಯವನ್ನು ಗೌರವಿಸಬೇಕು : ಸಚಿವ ಸದಾನಂದಗೌಡ ಕಿವಿಮಾತು

February 4, 2021

ಮಡಿಕೇರಿ ಫೆ.4 : ಒಂದು ಸಮುದಾಯ ಮತ್ತೊಂದು ಸಮುದಾಯವನ್ನು ಗೌರವದಿಂದ ನೋಡುವುದರಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಾಗಲಿದ್ದು, ಇದು ದೇಶದ ಪ್ರಗತಿಗೂ ಕಾರಣವಾಗಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಅಭಿಪ್ರಾಯಪಟ್ಟರು.
ಮಡಿಕೇರಿಯಲ್ಲಿ ಕೊಡಗು ಗೌಡ ಸಮಾಜದ ವತಿಯಿಂದ ಸುಮಾರು 4 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಸುಮಾರು 4635 ಸಣ್ಣ ಸಣ್ಣ ಸಮುದಾಯಗಳಿದ್ದು, ಈ ಸಣ್ಣಪುಟ್ಟ ಸಮುದಾಯಗಳೇ ಭಾರತದ ಸಂಸ್ಕøತಿಯ ಬೇರುಗಳಾಗಿವೆ. ಯಾವುದೇ ಮರ ಸದೃಢವಾಗಿರಬೇಕಾದರೆ ಅದರ ತಾಯಿ ಬೇರು ಹೇಗೆ ಆರೋಗ್ಯಯುತವಾಗಿರಬೇಕೋ ಅದೇ ರೀತಿ, ಯಾವುದೇ ಸಮುದಾಯ ಉಳಿಯ ಬೇಕಾದರೆ ಅದರ ಸಂಸ್ಕøತಿ, ಭಾಷೆ ಜೀವಂತವಾಗಿಬೇಕಿದೆ. ಇವೆಲ್ಲವೂ ಸೇರಿದಾಗ ಭಾರತದ ಸಂಸ್ಕøತಿ ಅನಾವರಣವಾಗಲಿದ್ದು, ಈ ಕಾರಣಕ್ಕಾಗಿ ಒಂದು ಸಮುದಾಯ ಮತ್ತೊಂದು ಸಮುದಾಯ, ಸಂಸ್ಕøತಿ, ಭಾಷೆಯನ್ನು ಗೌರವಿಸಬೇಕಿದೆ ಎಂದು ಹೇಳಿದರು.
::: ಪಾರಂಪರಿಕ ಗ್ರಾಮ ನಿರ್ಮಾಣ :::
ಯಾವುದೇ ಭಾಷೆ ನಾಶವಾದರೆ ಸಂಸ್ಕøತಿ ನಾಶವಾದಂತೆ, ದೇಶದಲ್ಲಿ ಇಂದು ಸಾವಿರಾರು ಭಾಷೆಗಳು ಅವನತಿಯ ಹಾದಿಯಲ್ಲಿದ್ದು, ಗೌಡ ಜನಾಂಗದ ಮಾತೃಭಾಷೆಯಾದ ಅರೆಭಾಷೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವಿಭಿನ್ನವಾದ ಪ್ರಯೋಗಗಳನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದÀರು. ಅಕಾಡೆಮಿಯ ಪ್ರಯತ್ನಕ್ಕೆ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ಅರೆಭಾಷೆಯ ಪಾರಂಪರಿಕ ಗ್ರಾಮವನ್ನು ಸುಳ್ಯ ತಾಲೂಕಿನಲ್ಲಿ ನಿರ್ಮಿಸಲು ಹಾಗೂ ಮಂಗಳೂರು ವಿವಿಯಲ್ಲಿ ಅರೆಭಾಷೆ ಅಧ್ಯಯನ ಪೀಠ ಸ್ಥಾಪಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸಕ್ತ ಸಾಲಿನ ಆಯ-ವ್ಯಯದಲ್ಲಿ ಇದು ಘೋಷಣೆಯಾಗುವ ವಿಶ್ವಾಸವಿದೆ ಎಂದು ಸದಾನಂದ ಗೌಡ ಹೇಳಿದರು.
ಗೌಡ ಸಮಾಜ ವಲಸೆ, ಸಂಘರ್ಷ, ಸಮನ್ವಯತೆಗೆ ಹಸರುವಾಸಿಯಾಗಿದೆ. ಗುಡ್ಡೆಮನೆ ಅಪ್ಪಯ್ಯ ಗೌಡ ಅವರು 1837ರಲ್ಲೇ ಬ್ರಿಟೀಷರ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಇದು ಗೌಡ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಸಚಿವರು ಸ್ಮರಿಸಿದರಲ್ಲದೆ, ತಾನು ಅಲ್ಪ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದರೂ, ಈ ಸಂದರ್ಭ ಗುಡ್ಡಮನೆ ಅಪ್ಪಯ್ಯ ಗೌಡರ ಪ್ರತಿಮೆ ಸ್ಥಾಪನೆ, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆ ಸೇರಿದಂತೆ ಸಮಾಜದ ಅಭಿವೃದ್ಧಿಗೆ ಕಿರುಕಾಣಿಕೆ ನೀಡಲು ಸಾಧ್ಯವಾಗಿದೆ ಎಂದು ನೆನಪಿಸಿದರು.
ಗೌಡ ಸಮುದಾಯದ ಯುವಜನರಲ್ಲಿ ಕೋಪ ಕಡಿಮೆಯಾಗಿ ಪ್ರತಿ ಹೆಚ್ಚಲಿ ಎಂದು ಆಶಿಸಿದ ಸಚಿವರು, ದೇಶಪ್ರೇಮ, ಪರಿಸರ ಹಾಗೂ ಸಮನ್ವಯತೆಗೆ ಹೆಸರಾದ ಕೊಡಗು ಜಿಲ್ಲೆಯ ಗೌಡ ಸಮಾಜವು ಪ್ರತಿಯೊಂದು ಸಮಾಜವನ್ನು ಗೌರವದಿಂದ ಕಾಣುವುದರೊಂದಿಗೆ ಇತರ ಸಮಾಜಗಳಿಗೆ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.

error: Content is protected !!