ರಾಷ್ಟ್ರಪತಿಗಳ ಭೇಟಿ ಸಂದರ್ಭ ಸುರಕ್ಷತೆ, ಶಿಷ್ಟಾಚಾರ ಪಾಲನೆಗೆ ಆದ್ಯತೆ : ಜಿಲ್ಲಾಧಿಕಾರಿ

February 4, 2021

ಮಡಿಕೇರಿ ಫೆ.4 : ರಾಷ್ಟ್ರಪತಿಗಳು ಫೆ.6 ರಂದು ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನೀಡಿದ ಮಾಹಿತಿ ಹೀಗಿದೆ. ಘನತೆವೆತ್ತ ಭಾರತದ ಸನ್ಮಾನ್ಯ ರಾಷ್ಟ್ರಪತಿಯವರು ಫೆ.6 ರಂದು ಬೆಳಗ್ಗೆ ಭಾಗಮಂಡಲದ ಕಾವೇರಿ ಕಾಲೇಜು ಹೆಲಿಪ್ಯಾಡ್‍ಗೆ ಆಗಮಿಸಲಿದ್ದಾರೆ. ನಂತರ ತಲಕಾವೇರಿ ದೇವಸ್ಥಾನಕ್ಕೆ ಆಗಮಿಸಿ, ಪೂಜೆ ಸಲ್ಲಿಸಲಿದ್ದಾರೆ. ಪೂಜೆಯ ಬಳಿಕ ಮಡಿಕೇರಿಯ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ.
ಮಡಿಕೇರಿಗೆ ಆಗಮಿಸಿದ ನಂತರ ರಾಷ್ಟ್ರಪತಿ ಅವರು ಸರ್ಕಾರದ ವತಿಯಿಂದ ಅಭಿವೃದ್ಧೀಪಡಿಸಲಾಗಿರುವ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯಕ್ಕೆ ಆಗಮಿಸಿ, ಆವರಣದಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ, ನಂತರ ವಸ್ತು ಸಂಗ್ರಹಾಲಯ ಉದ್ಘಾಟಿಸಲಿದ್ದಾರೆ.
ಮಡಿಕೇರಿ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ ಉದ್ಘಾಟನಾ ಸಮಾರಂಭದಲ್ಲಿ ಬಿಪಿನ್ ರಾವತ್, ಪಿವಿಎಸ್‍ಎಂ, ಯುವೈಎಸ್‍ಎಂ, ಎವಿಎಸ್‍ಎಂ, ವೈಎಸ್‍ಎಂ, ಎಸ್‍ಎಂ, ವಿಎಸ್‍ಎಂ, ಎಡಿಸಿ ಅವರು ಭಾಗವಹಿಸಲಿದ್ದಾರೆ.
ರಾಷ್ಟ್ರಪತಿಗಳು ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿರುವ ಯುದ್ದಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ “ತೂಕ್‍ಬೊಳಕ್” (ತೂಗುದೀಪ) ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ ಉದ್ಘಾಟನಾ ಸಮಾರಂಭದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್ ಹಾಗೂ ಇನ್ನಿತರೆ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
ಗಣ್ಯರ ಆಗಮನದ ಹಿನ್ನೆಲೆಯಲ್ಲಿ ಶಿಷ್ಟಾಚಾರ, ಭದ್ರತೆ ಹಾಗೂ ಇನ್ನಿತರೆ ಪ್ರಮುಖ ವಿಚಾರಗಳ ಮೇಲ್ವಿಚಾರಣೆಗಾಗಿ ಸುಮಾರು 18 ಸಮಿತಿಗಳನ್ನು ರಚಿಸಲಾಗಿದ್ದು, ವಿವಿಧ ಸಮಿತಿಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಉಸ್ತುವಾರಿಯನ್ನು ವಹಿಸಲಾಗಿದೆ. ಮುಖ್ಯವಾಗಿ ಆರಕ್ಷಕ ಅಧೀಕ್ಷಕರ ನೇತೃತ್ವದಲ್ಲಿ ಸನ್ಮಾನ್ಯ ರಾಷ್ಟ್ರಪತಿ ಅವರು ಸಂಚರಿಸುವ ಭಾಗಮಂಡಲ-ತಲಕಾವೇರಿ ಹಾಗೂ ಮಡಿಕೇರಿ ನಗರದ ಹೆಲಿಪ್ಯಾಡ್‍ನಿಂದ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ ವರೆಗೆ ಭದ್ರತೆ ಮತ್ತು ಕಾರ್ ಕೆಡ್ ಕಾನ್‍ವಾಯ್ ಉಸ್ತುವಾರಿಯನ್ನು ವಹಿಸಲಿದ್ದಾರೆ. ಶಿಷ್ಟಾಚಾರದಲ್ಲಿ ಯಾವುದೇ ಲೋಪವಾಗದಂತೆ ಉಪ ವಿಭಾಗಾಧಿಕಾರಿಗಳು, ಮಡಿಕೇರಿ ಉಪವಿಭಾಗ, ಮಡಿಕೇರಿ ಇವರ ನೇತೃತ್ವದಲ್ಲಿ ಶಿಷ್ಟಾಚಾರ ಸಮಿತಿ ರಚಿಸಲಾಗಿದೆ.
ವಿವಿಧ ಗಣ್ಯರು ಜಿಲ್ಲೆಗೆ ಆಗಮಿಸುವುದರಿಂದ ಕಾರ್ಯಪಾಲಕ ಅಭಿಯಂತರರು, ಪಿಡಬ್ಲ್ಯೂಡಿ ಇವರು ನೇತೃತ್ವದಲ್ಲಿ ಹೆಲಿಪ್ಯಾಡ್ ನಿರ್ಮಾಣ ಸಮಿತಿ ರಚಿಸಿದ್ದು, ಈಗಾಗಲೇ ಭಾಗಮಂಡಲ ಕಾವೇರಿ ಕಾಲೇಜು, ಎಫ್‍ಎಂಕೆಎಂಸಿ ಕಾಲೇಜು ಹಾಗೂ ಮ್ಯಾನ್ಸ್ ಕಾಂಪೌಂಡ್ ಮೈದಾನ ಮಡಿಕೇರಿಯಲ್ಲಿ ಹೆಲಿಪ್ಯಾಡ್‍ಗಳ ನಿರ್ಮಾಣ ಮಾಡಲಾಗಿದೆ.
ರಾಷ್ಟ್ರಪತಿಯವರ ಭೇಟಿ ವೇಳೆಯಲ್ಲಿ ಸಂಪರ್ಕಕ್ಕೆ ಬರುವ ಗಣ್ಯರು, ಅತಿಥಿಗಳು ಹಾಗೂ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮ ದಿನದ 24 ಗಂಟೆ ಮುಂಚಿತವಾಗಿ ಕೋವಿಡ್-19 ಪರೀಕ್ಷೆ ಮಾಡಿಸುವುದು, ಭೇಟಿ ನೀಡುವ ಎಲ್ಲಾ ಸ್ಥಳಗಳು, ಕಾನ್‍ವಾಯ್ ವಾಹನಗಳು, ಗ್ರೀನ್ ರೂಮ್ ಇತ್ಯಾದಿಗಳಿಗೆ ಸ್ಯಾನಿಟೈಸೇಷನ್ ಮಾಡುವುದು, ತುರ್ತು ಸಂದರ್ಭದಲ್ಲಿ 3 ಸುಸಜ್ಜಿತ ಆಂಬ್ಯುಲೆನ್ಸ್‍ಗಳು, ವೈದ್ಯಕೀಯ ತಂಡ ಹಾಗೂ 2 ಸುಸಜ್ಜಿತ ವಾರ್ಡ್‍ಗಳನ್ನು ಸಿದ್ಧಗೊಳಿಸಲು ಡೀನ್ ಮತ್ತು ನಿರ್ದೇಶಕರು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಮಡಿಕೇರಿರವರ ನೇತೃತ್ವದಲ್ಲಿ ವೈದ್ಯಕೀಯ ಸಮಿತಿ ರಚಿಸಿ ಉಸ್ತುವಾರಿ ವಹಿಸಲಾಗಿದೆ.
ರಾಷ್ಟ್ರಪತಿಯವರು ಪ್ರಯಾಣಿಸುವ ತಲಕಾವೇರಿ-ಭಾಗಮಂಡಲ ಮತ್ತು ಮಡಿಕೇರಿ ನಗರದಲ್ಲಿ ರಸ್ತೆಗಳ ದುರಸ್ತಿ ಸ್ವಚ್ಚತೆ, ಅನಗತ್ಯ ಅಡೆ-ತಡೆಗಳ ತೆರವು, ಬಾಗಿರುವ ಮರಗಳ ರೆಂಬೆಗಳ ತೆರವು, ರಸ್ತೆಯ ಅಂಚಿನಲ್ಲಿದ್ದ ವಿದ್ಯುತ್ ಕಂಬಗಳ ಸ್ಥಳಾಂತರ ಮುಂತಾದ ಕಾರ್ಯವನ್ನು ಕೈಗೊಳ್ಳಲು ಕಾರ್ಯಪಾಲಕ ಅಭಿಯಂತರರು, ಪಿಡಬ್ಲ್ಯೂಡಿ ಇವರ ಅಧ್ಯಕ್ಷತೆಯಲ್ಲಿ ರಸ್ತೆ ನಿರ್ವಹಣಾ ಸಮಿತಿ ರಚಿಸಲಾಗಿದ್ದು, ಕಾಮಗಾರಿ ನಡೆದಿದೆ.
ತುರ್ತು ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ವ್ಯವಸ್ಥೆಗಳೊಂದಿಗೆ ಅಗ್ನಿಶಾಮಕ ವಾಹನಗಳನ್ನು ಸಜ್ಜುಗೊಳಿಸಲು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಹಾಗೂ ಅನಗತ್ಯ ಜೋತಾಡುವ ವಿದ್ಯುತ್ ವಯರ್‍ಗಳು ಮತ್ತು ವಿದ್ಯುತ್ ಉಪಕರಣಗಳನ್ನು ತೆರವುಗೊಳಿಸಲು ಹಾಗೂ ನಿರಂತರ ವಿದ್ಯುತ್ ಸರಬರಾಜು ಕಲ್ಪಿಸಲು ಕಾರ್ಯಪಾಲಕ ಅಭಿಯಂತರರು, ಚೆಸ್ಕಾಂ, ಮಡಿಕೇರಿ ಇವರಿಗೆ ಉಸ್ತುವಾರಿಯನ್ನು ವಹಿಸಲಾಗಿದೆ.

ಭಾಗಮಂಡಲ-ತಲಕಾವೇರಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಕಾರ್ಯನಿರ್ವಾಹಕಾಧಿಕಾರಿ, ಭಗಂಡೇಶ್ವರ ದೇವಾಲಯರವರ ಅಧ್ಯಕ್ಷತೆಯಲ್ಲಿ ದೇವಸ್ಥಾನ ನಿರ್ವಹಣಾ ಸಮಿತಿ ಹಾಗೂ ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿ ಸಿದ್ಧತೆಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಡಿಕೇರಿ ಇವರಿಗೆ ಉಸ್ತುವಾರಿ ವಹಿಸಲಾಗಿದೆ.
ರಸ್ತೆ ಮೂಲಕ ಪ್ರಯಾಣಿಸುವ ಭಾಗಮಂಡಲ ಕಾವೇರಿ ಕಾಲೇಜು ಹೆಲಿಪ್ಯಾಡ್‍ನಿಂದ ಹೊರಟು ಐಟಿಐ ಜಂಕ್ಷನ್, ಕರಿಕೆ ಜಂಕ್ಷನ್, ಭಾಗಮಂಡಲ ಪಟ್ಟಣ, ಮಾರ್ಕೆಟ್ ಜಂಕ್ಷನ್ ಮೂಲಕ ತಲಕಾವೇರಿ ಮಾರ್ಗದಲ್ಲಿ ಫೆ.6 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಹಾಗೂ ಮಡಿಕೇರಿ ನಗರದ ಎಫ್‍ಎಂಸಿ ಕಾಲೇಜಿನ ಹೆಲಿಪ್ಯಾಡ್‍ನಿಂದ ವಿದ್ಯಾನಗರ ಗಾಳಿಬೀಡು ರಸ್ತೆ ಜಂಕ್ಷನ್, ಐಟಿಐ ಜಂಕ್ಷನ್, ಆರ್ಮಿ ಕ್ಯಾಂಟೀನ್ ಜಂಕ್ಷನ್, ಸಾಯಿ ಗ್ರೌಂಡ್, ವೆಬ್ಸ್ ಜಂಕ್ಷನ್, ರಾಡ್ರಿಗಸ್ ಜಂಕ್ಷನ್, ಗೌಳಿಬೀದಿ ಜಂಕ್ಷನ್, ಕುಂದುರುಮೊಟ್ಟೆ ಜಂಕ್ಷನ್, ಎಂ.ಎಂ. ವೃತ್ತ, ಜಿ.ಟಿ. ವೃತ್ತ, ಜಿಲ್ಲಾ ಸರಕಾರಿ ಆಸ್ಪತ್ರೆ, ಸುದರ್ಶನ ವೃತ್ತಕ್ಕಾಗಿ ಸುದರ್ಶನ ಅತಿಥಿ ಗೃಹದವರೆಗೆ ರಸ್ತೆ ಮಾರ್ಗದಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಿರ್ಬಂಧಿಸಿದೆ.
ರಸ್ತೆ ಮೂಲಕ ಪ್ರಯಾಣಿಸುವ ರಸ್ತೆಯಲ್ಲಿರುವ ಎಲ್ಲಾ ಶಾಲಾ ಕಾಲೇಜುಗಳಿಗೆ ಫೆ.6 ರಂದು ರಜೆ ನೀಡಲು ಸಂಬಂಧಪಟ್ಟ ವಿದ್ಯಾಸಂಸ್ಥೆಗಳ ಮುಖ್ಯಸ್ಥರಿಗೆ ಆದೇಶಿಸಿದೆ.
ಭಾಗಮಂಡಲ ಪಟ್ಟಣ, ಮಾರ್ಕೆಟ್ ಜಂಕ್ಷನ್ ಮೂಲಕ ತಲಕಾವೇರಿ ಮಾರ್ಗದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳನ್ನು ಹಾಗೂ ಮಡಿಕೇರಿ ನಗರದ ಎಫ್.ಎಂ.ಸಿ. ಕಾಲೇಜಿನ ಹೆಲಿಪ್ಯಾಡ್‍ನಿಂದ ವಿದ್ಯಾನಗರ ಗಾಳಿಬೀಡು ರಸ್ತೆ ಜಂಕ್ಷನ್, ಐಟಿಐ ಜಂಕ್ಷನ್, ಆರ್ಮಿ ಕ್ಯಾಂಟೀನ್ ಜಂಕ್ಷನ್, ಸಾಯಿ ಗ್ರೌಂಡ್, ವೆಬ್ಸ್ ಜಂಕ್ಷನ್, ರಾಡ್ರಿಗಸ್ ಜಂಕ್ಷನ್, ಗೌಳಿಬೀದಿ ಜಂಕ್ಷನ್, ಕುಂದುರುಮೊಟ್ಟೆ ಜಂಕ್ಷನ್, ಎಂ.ಎಂ. ವೃತ್ತ, ಜಿ.ಟಿ. ವೃತ್ತ, ಜಿಲ್ಲಾ ಸರಕಾರಿ ಆಸ್ಪತ್ರೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತಕ್ಕಾಗಿ ಸುದರ್ಶನ ಅತಿಥಿ ಗೃಹದವರೆಗೆ ರಸ್ತೆ ಮಾರ್ಗದಲ್ಲಿ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳನ್ನು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮುಚ್ಚುವುದು.
ಮಡಿಕೇರಿ ನಗರದ ಎಫ್.ಎಂ.ಸಿ ಕಾಲೇಜಿನ ಹೆಲಿಪ್ಯಾಡ್‍ನಿಂದ ಕ್ಲಬ್ ಮಹೀಂದ್ರ ರೆಸಾರ್ಟ್‍ಗೆ ತೆರಳುವ ಗಾಳಿಬೀಡು ರಸ್ತೆ ಮಾರ್ಗವಾಗಿ ಕಾಲೇಜಿನ ಎರಡು ಭಾಗಗಳಲ್ಲಿ ವಿದ್ಯಾನಗರ ರಸ್ತೆ, ಕಾಲೇಜು ಹಿಂಭಾಗದ ರಸ್ತೆ, ಕಾಲೇಜು ಹಿಂಭಾಗ ಜಂಕ್ಷನ್, ಭಗವತಿ ನಗರ ಜಂಕ್ಷನ್, 3ನೇ ಮೈಲು ಜಂಕ್ಷನ್, ಮಹೀಂದ್ರ 1ನೇ ಗೇಟ್, ಮಹೀಂದ್ರ 2ನೇ ಗೇಟ್, ಕೂಟು ಹೊಳೆಯವರೆಗೆ ಇರುವಂತಹ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಫೆಬ್ರವರಿ, 06 ರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮುಚ್ಚುವುದು ಹಾಗೂ ಅದೇ ದಿನ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸದರಿ ಮಾರ್ಗದಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿರ್ಬಂಧಿಸಿದೆ.
ಕೊಡಗು ಜಿಲ್ಲಾ ಭೇಟಿಯ ಸಮಯದಲ್ಲಿ ಅಥವಾ ಕಾರ್ಯಕ್ರಮದ ಸಮಯದಲ್ಲಿ ರಾಷ್ಟ್ರಪತಿಯವರ ಕಾರ್ಯಾಲಯದ ಮಾರ್ಗಸೂಚಿಯನ್ವಯ ಡಿ.ಡಿ. (ದೂರದರ್ಶನ) ನ್ಯೂಸ್ ತಂಡದ ಹೊರತಾಗಿ ಯಾವುದೇ ಖಾಸಗಿ / ಸ್ಥಳೀಯ ಮಾಧ್ಯಮಕ್ಕೆ ಈ ವೇಳೆಯಲ್ಲಿ ತೆರಳಲು ಅವಕಾಶ ಇರುವುದಿಲ್ಲ. ಮಾನ್ಯ ರಾಷ್ಟ್ರಪತಿಯವರ ಕಾರ್ಯಾಲಯದ ನಿಯೋಜಿಸಲ್ಪಟ್ಟ ಛಾಯಾಗ್ರಾಹಕರು ಅಧಿಕೃತವಾಗಿ ನೀಡುವ ಮಾಹಿತಿಗಳನ್ನು ವಾರ್ತಾ ಇಲಾಖೆಯ ಮೂಲಕ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

error: Content is protected !!