ರಾಷ್ಟ್ರಪತಿ ಭೇಟಿ ಹಿನ್ನೆಲೆ : 6 ಹೆಲಿಪ್ಯಾಡ್‍ಗಳ ನಿರ್ಮಾಣ : ಸುರಕ್ಷತೆ ಬಗ್ಗೆ ಸೇನಾಧಿಕಾರಿಗಳ ಸಮಾಲೋಚನೆ : ವಿವಿಧ ಪ್ರದೇಶಗಳ ಪರಿಶೀಲನೆ

February 4, 2021

ಮಡಿಕೇರಿ ಫೆ.4 : ಅಪ್ರತಿಮ ಸೇನಾನಿ ಜನರಲ್ ಕೊಡಂದೇರ ಎಸ್.ತಿಮ್ಮಯ್ಯ ಅವರ ಹುಟ್ಟಿದ ಮನೆ ಮಡಿಕೇರಿಯ ಸನ್ನಿಸೈಡ್ ಮ್ಯೂಸಿಯಂ ಫೆ.6 ರಂದು ರಾಷ್ಟ್ರಪತಿಗಳಿಂದ ಲೋಕಾರ್ಪಣೆಗೊಳ್ಳುತ್ತಿದೆ. ರಾಷ್ಟ್ರಪತಿಗಳ ಕಾರ್ಯಾಲಯದ ನಿರ್ದೇಶನದಂತೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತದಿಂದ ಮಾಡಿಕೊಳ್ಳಲಾಗುತ್ತಿದ್ದು, ಭಾರತೀಯ ವಾಯುಸೇನೆಯ ಹೆಲಿಕಾಫ್ಟರ್‍ಗಳು ಬಂದಿಳಿಯಲು ಒಟ್ಟು 6 ಹೆಲಿಪ್ಯಾಡ್‍ಗಳನ್ನು ನಿರ್ಮಿಸಲಾಗಿದೆ.
ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪದವಿ ಕಾಲೇಜಿನ ಮೈದಾನದಲ್ಲಿ 3, ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 2 ಹಾಗೂ ಭಾಗಮಂಡಲದ ಕಾವೇರಿ ವಿದ್ಯಾ ಸಂಸ್ಥೆಯ ಮೈದಾನದಲ್ಲಿ 1 ಹೆಲಿಪ್ಯಾಡ್ ಅನ್ನು ನಿರ್ಮಿಸಲಾಗಿದೆ. ಈ ಕಾರ್ಯಕ್ಕಾಗಿಯೇ ಓರ್ವ ನೋಡಲ್ ಅಧಿಕಾರಿ ಮತ್ತು ತಂಡವನ್ನು ಕೂಡ ಜಿಲ್ಲಾಡಳಿತ ನೇಮಿಸಿದೆ.
ಫೆ.6ರಂದು ರಾಷ್ಟ್ರಪತಿಗಳು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ನಿರ್ಮಿಸಿರುವ ಹೆಲಿಪ್ಯಾಡ್‍ನಲ್ಲಿ ಬಂದಿಳಿಯುವ ಸಾಧ್ಯತೆಗಳಿದೆ. ಮೂರು ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್(ಪಿವಿಎಸ್‍ಎಂ) ಅವರು ಸೇರಿದಂತೆ ಗಣ್ಯಾತಿ ಗಣ್ಯ ವ್ಯಕ್ತಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅವರ “ಕಾನ್ ವೇ”ಗಾಗೀ ರಸ್ತೆಯನ್ನು ಮೀಸಲಿಡಲಾಗಿದೆ. ಮಾತ್ರವಲ್ಲದೇ ಈ ರಸ್ತೆಗಳಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಜಿಲ್ಲಾಡಳಿತ ನಿರ್ದೇಶನ ನೀಡಿದ್ದು, ಕೇವಲ ಮೆಡಿಕಲ್ ಶಾಪ್‍ಗಳು ಮಾತ್ರವೇ ತರೆಯಲು ಅವಕಾಶ ನೀಡಲಾಗಿದೆ. ರಾಷ್ಟ್ರಪತಿಗಳು ಸಂಚರಿಸುವ ರಸ್ತೆಯಲ್ಲಿರುವ ಎಲ್ಲಾ ರೀತಿಯ ಶಾಲಾ ಕಾಲೇಜನ್ನು ಒಂದು ದಿನದ ಮಟ್ಟಿಗೆ ಬಂದ್ ಮಾಡಲು ಜಿಲ್ಲಾಡಳಿತ ಸೂಚಿಸಿದೆ.
ಇನ್ನು ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ವಾಯುಸೇನೆ ಹೆಲಿಕಾಫ್ಟರ್ ಆಗಮಿಸಿ 2ನೇ ಬಾರಿಗೆ ಲ್ಯಾಂಡಿಂಗ್ ಮತ್ತು ಟೇಕಾಫ್‍ನ ಪೂರ್ವಾಭ್ಯಾಸ ನಡೆಸಿತು. ಫ್ಲೈಯಿಂಗ್ ಆಫೀಸರ್ ಕೆ.ಪಿ. ಸಿಂಗ್ ನೇತೃತ್ವದಲ್ಲಿ ಆಗಮಿಸಿದ್ದ 7 ಮಂದಿ ವಾಯುಸೇನಾ ಸಿಬ್ಬಂದಿಗಳ ತಂಡ ಸೂಟ್ ಕೇಸ್‍ನಲ್ಲಿ ತಾಂತ್ರಿಕ ಹೆಲಿಪ್ಯಾಡ್ ಸುರಕ್ಷತೆಯ ಜವಾಬ್ದಾರಿ ವಹಿಸಿರುವ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಚಂದನ್, ಹೆಲಿಪ್ಯಾಡ್ ನಿರ್ಮಾಣದ ನೋಡಲ್ ಅಧಿಕಾರಿ ಅಬಕಾರಿ ಇಲಾಖೆಯ ಜಿಲ್ಲಾ ಆಯುಕ್ತರಾದ ಬಿಂದುಶ್ರೀ ಮತ್ತು ನಗರ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರೊಂದಿಗೆ ಫ್ಲೈಯಿಂಗ್ ಆಫೀಸರ್ ಕೆ.ಪಿ. ಸಿಂಗ್ ಚರ್ಚೆ ನಡೆಸಿದರು. ಹೆಲಿಕಾಫ್ಟರ್ ಬಂದಿಳಿಯುವ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಭದ್ರತೆ, ಹೆಲಿಪ್ಯಾಡ್ ಗುರುತಿಗಾಗಿ ಸ್ಮೋಕ್ ಬಳಸುವುದು, ರಾಷ್ಟ್ರಪತಿಗಳ ಸುರಕ್ಷಾ ಪಡೆಗೆ ಪೈಲೆಟ್(ಬೆಂಗಾವಲು) ನೀಡುವ ಬಗ್ಗೆ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.
ಇನ್ನು ರಾಷ್ಟ್ರಪತಿಗಳ ಭದ್ರತೆಯ ಜವಾಬ್ದಾರಿ ಹೊತ್ತಿರುವ ಸೇನಾ ಅಧಿಕಾರಿ ಕರ್ನಲ್ ಸಂಜಿತ್ ಕೂಡ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರನ್ನು ಭೇಟಿ ಮಾಡಿ ಭದ್ರತೆಯ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಕರ್ನಲ್ ಸಂಜಿತ್ ಜಿಲ್ಲಾಡಳಿತದ ವತಿಯಿಂದ ಕೈಗೊಳ್ಳಬೇಕಾದ ವ್ಯವಸ್ಥೆಗಳನ್ನು ವಿವರಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಭದ್ರತಾ ಕಾರಣಗಳಿಂದ ಲಭ್ಯವಾಗಿಲ್ಲ.

error: Content is protected !!