ಕರ್ನಾಟಕದ ಅತ್ಯುನ್ನತ ಪರ್ವತ ಶಿಖರ ಮುಳ್ಳಯ್ಯನಗಿರಿ

February 5, 2021

ಮುಳ್ಳಯ್ಯನಗಿರಿ ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಬಾಬಾ ಬುಡನ್‌ಗಿರಿ ಬೆಟ್ಟಸಾಲಿನಲ್ಲಿರುವ ಒಂದು ಶಿಖರ. ೧೯೩೦ ಮೀಟರ್ (೬೩೧೭ ಅಡಿ) ಎತ್ತರದಲ್ಲಿರುವ ಮುಳ್ಳಯ್ಯನ ಗಿರಿ ಕರ್ನಾಟಕದ ಅತ್ಯುನ್ನತ ಪರ್ವತಶಿಖರವಾಗಿದೆ. ಅಲ್ಲದೆ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಣ ಪ್ರದೇಶದಲ್ಲಿನ ಅತಿ ಎತ್ತರದ ಪರ್ವತವು ಸಹ ಹೌದು. ಈ ಬೆಟ್ಟದ ಮೇಲ್ಬಾಗದಲ್ಲಿ ಮುಳ್ಳಯ್ಯ ಸ್ವಾಮಿಗಳ ದೇವಾಲಯವಿದೆ (ಮಠ).ಪ್ರವಾಸಿಗರ ಸ್ವರ್ಗ ಚಿಕ್ಕಮಗಳೂರಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಜನಜಾತ್ರೆಯಿಂದ ತುಂಬಿರುತ್ತದೆ. ಮಂಜಿನ ಹನಿಗಳ ನಡುವಿನ ಚಿತ್ತಾರ, ಚುಮುಚುಮು ಚಳಿಯಲ್ಲಿ ಮಳೆಯ ಸಿಂಚನ. ಇವೆಲ್ಲವೂ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿಗೆ ಭೇಟಿ ನೀಡಿದರೆ ಮನಸ್ಸು ಶಾಂತವಾಗುವುದರಲ್ಲಿ ಎರಡು ಮಾತಿಲ್ಲ.

ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಇಲ್ಲಿಯ ಅನುಭವವೇ ಬೇರೆ ಹಾಗಾಗಿ ಸಾಕಷ್ಟು ಪ್ರವಾಸಿಗರು, ಚಾರಣಿಗರು ಈ ಸಮಯದಲ್ಲಿ ಭೇಟಿ ನೀಡುವುದರಿಂದ ಚಿಕ್ಕಮಗಳೂರು ರಸ್ತೆ ಸದಾ ವಾಹನಗಳಿಂದ ತುಂಬಿರುತ್ತದೆ.

ಇಲ್ಲಿನ ಗಿರಿಶಿಖರವನ್ನು ಹತ್ತುವಾಗ ಸಿಗುವ ಸಂತೋಷ ಬೇರೆಲ್ಲೂ ಸಿಗಲಾರದು ಮುಳ್ಳಯ್ಯನಗಿರಿ ಅನ್ನೋ ಹೆಸರೇ ನಿಮ್ಮನ್ನು ಆಕರ್ಷಿಸುತ್ತದೆ. ಒಂದು ಸಲ ಆ ನೆಲಕ್ಕೆ ಕಾಲಿಟ್ಟರೆ ಆ ಊರು ಬಹುಬೇಗ ನಿಮ್ಮನ್ನು ಬಿಟ್ಟು ಹೋಗದು.

ಕಾರು ಬೈಕ್ ಮಾತ್ರ ಚಲಿಸಬಹುದಾದ ಕಿರಿದಾದ ಮಾರ್ಗ ಇದರಲ್ಲಿ ಸಂಚರಿಸುವಾಗ ನಾವೆಲ್ಲಿ ಹಿಮಾಲಯದ ಪರ್ವತದ ತಪ್ಪಲಿನಲ್ಲಿ ಇದ್ದೇವೇನೋ ಅನ್ನುವ ಅನುಭವದ ಜೊತೆಗೆ ಜೀವಭಯ, ಒಂದು ಬದಿಯಲ್ಲಿ ಬೆಟ್ಟದ ಧರೆ ಇನ್ನೊಂದು ಬದಿಯಲ್ಲಿ ನೂರಾರು ಅಡಿಗಳಷ್ಟು ಆಳವಿರುವ ಕಂದಕ ಇವುಗಳ ನಡುವೆ ಅಪಾಯಕಾರಿ ತಿರುವಿನಿಂದ ಕೂಡಿದ ರಸ್ತೆಗಳು ಇದರಲ್ಲಿ ಸಂಚರಿಸಲು ತಾಳ್ಮೆ ಜೊತೆಗೆ ಸಹನೆ ಅತ್ಯಗತ್ಯ.

ಮುಳ್ಳಯ್ಯನ ಗಿರಿಗೆ ಹೋಗುವ ಮೊದಲು ಸರ್ಪನ ಹಾದಿಯನ್ನು ಬಿಟ್ಟು ಡಾಂಬರು ರಸ್ತೆಯನ್ನು ಹಿಡಿದು ಹತ್ತ ಹೊರಟರೆ ಮೊದಲು ಸಿಗುವುದು ಶೀತಾಳಯ್ಯನ ಗಿರಿ. ಈ ಸ್ಥಳದಲ್ಲಿ ಶೀತಾಳಯ್ಯ ತಪಸ್ಸು ಮಾಡಿದ್ದರಿಂದ ಈ ಗಿರಿಗೆ ಶೀತಾಲಯ್ಯನ ಗಿರಿ ಎಂದು ಹೆಸರು ಬಂದಿದೆ.ಇಲ್ಲಿ ಈಶ್ವರನ ದೇವಾಲಯವೂ ಇದೆ. ಇಲ್ಲಿಂದ ಪೂರ್ವಾಂಬುದಿಯ ಕಡೆ ನಡೆಯುತ್ತ ಹೊರಟರೆ ಸುಮಾರು ಎರಡು ಕಿ.ಮೀ ಗಳ ಅಂತರದಲ್ಲಿ ಕರ್ನಾಟಕದಲ್ಲೇ ಅತಿ ಎತ್ತರದ ಶಿಖರವೆಂದು ಹೆಸರು ಪಡೆದಿರುವ ಮುಳ್ಲಯ್ಯನ ಗಿರಿ ಶಿಖರದ ಕಲಶ ಕಾಣಸಿಗುತ್ತದೆ.

ಮುಳ್ಲಯ್ಯನ ಗಿರಿಯ ಪಶ್ಚಿಮ ದಿಕ್ಕಿಗೆ ಶೀತಾಳಯ್ಯನ ಗಿರಿ ಇದ್ದರೆ ಪೂರ್ವ ದಿಕ್ಕಿಗೆ ಬಾಬಾ ಬುಡನ್ ಹಾಗು ದತ್ತ ಪೀಠವಿದೆ. ಈ ದತ್ತ ಪೀಠದಿಂದ ದಕ್ಷಿಣ ದಿಕ್ಕಿಗೆ ಮಾಣಿಕ್ಯ ಧಾರ ಯಾತ್ರಾ ಸ್ಥಳವಿದೆ. ಹಾಗೆಯೇ ಬಾಬಾ ಬುಡನ್ ಹಾಗು ದತ್ತ ಪೀಠದಿಂದ ಉತ್ತರಕ್ಕೆ ಗಾಳಿಕೆರೆ ಇದೆ. ಬಾಬಾ ಬುಡನ್ ಹಾಗು ದತ್ತ ಪೀಠ,ಮಾಣಿಕ್ಯ ಧಾರ ಮತ್ತು ಗಾಳಿಕೆರೆ ಈ ಮೂರೂ ಒಂದೆರಡು ಕಿ.ಮೀ ಗಳ ಅಂತರದಲ್ಲಿವೆ.

ಮುಳ್ಲಯ್ಯನ ಗಿರಿಯ ಪೂರ್ವ ದಿಕ್ಕಿಗೆ ಅತ್ಯಂತ ಪ್ರಸಿದ್ಧವಾದ ಅಕ್ಕಯ್ಯಮ್ಮನ ಬೆಟ್ಟವಿದೆ. ದೀಪಅವಳಿ ಹಬ್ಬದ ನರಕ ಚತುರ್ದಶಿಯಂದು ರಾತ್ರಿ ಸಾವಿರಾರು ಭಕ್ತರು ದೇವಿಯ ದರ್ಶನಾರ್ಥವಾಗಿ ಇಡೀ ರಾತ್ರಿ ಕತ್ತಲು-ಬೆಳಕೆನ್ನದೆ ಜೀವದ ಹಂಗು ತೊರೆದು ಈ ಅಕ್ಕಯ್ಯಮ್ಮನ ಬೆಟ್ಟವನ್ನು ಹತ್ತುತ್ತಾರೆ.ಈ ಅಕ್ಕಯ್ಯಮ್ಮನ ಬೆಟ್ಟವನ್ನು ಎರಡು ಕಡೆಯಿಂದ ಹತ್ತಬಹುದು.೧)ತರೀಕೆರೆ ಕಡೆಯಿಂದ ಚಿಕ್ಕಮಗಲೂರು ಸೇರಲು ಲಿಂಗದಳ್ಲಿ ಮಾರ್ಗವಾಗಿ ಚಲಿಸುವಾಗ ಮಾರ್ಗ ಮಧ್ಯದಲ್ಲಿ ಬಲಗಡೆಯಿಂದ ಕಾಲು ದಾರಿಯಲ್ಲಿ ಆರೋಹಣ ಮಾಡಬಹುದು. ಈ ದಾರಿ ದುರ್ಗಮವಾದರೂ ಹತ್ತಿರದ್ದಾಗಿದೆ. ೨)ಚಿಕ್ಕಮಗಳೂರಿನಿಂದ ಹೊರಟು ಬಾಬಾ ಬುಡನ್ ಹಾಗು ದತ್ತ ಪೀಠಕ್ಕೆ ತಲುಪಿ ಅಲ್ಲಿಂದ,ಮಾಣಿಕ್ಯ ಧಾರಾಗೆ ಹತ್ತಿ-ಅಲ್ಲಿಮದ ಪೂರ್ವ ದಿಕ್ಕಿಗೆ ಇಳಿದು ನಡೆದರೆ ಸ್ವಲ್ಪ ದೂರದಲ್ಲಿಯೇ ಅಕ್ಕಯ್ಯಮ್ಮನ ಬೆಟ್ಟವಿದೆ.

error: Content is protected !!