ಹುಲಿದಾಳಿಗೆ ಹಸು ಬಲಿ : ಪೊನ್ನಂಪೇಟೆಯ ಪೊರಾಡು ಗ್ರಾಮದಲ್ಲಿ ಘಟನೆ

February 5, 2021

ಮಡಿಕೇರಿ ಫೆ.5 : ಪೊನ್ನಂಪೇಟೆ ತಾಲ್ಲೂಕು, ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಹಸುವೊಂದು ಹುಲಿ ದಾಳಿಗೆ ಬಲಿಯಾಗಿದೆ.
ಸ್ಥಳೀಯ ರೈತ ಮಲ್ಲೇಂಗಡ ಪಿ.ಧನುಂಜಯ ಅವರಿಗೆ ಸೇರಿದ ಗಬ್ಬದ ಹಸುವನ್ನು ಕೊಟ್ಟಿಗೆಯಿಂದ ಸುಮಾರು 50 ಅಡಿ ದೂರ ಎಳೆದೊಯ್ದು ಕೊಂದು ಹಾಕಿ ಸ್ವಲ್ಪ ಭಾಗವನ್ನು ಹುಲಿ ತಿಂದಿದೆ.
ಕೆಲವು ದಿನಗಳ ಹಿಂದೆಯಷ್ಟೇ ಇದೇ ಗ್ರಾಮದ ತೋಟವೊಂದರಲ್ಲಿ ಹುಲಿ ಪ್ರತ್ಯಕ್ಷವಾಗಿತ್ತು.
ಸ್ಥಳಕ್ಕೆ ಭೇಟಿ ನೀಡಿದ ಪೊನ್ನಂಪೇಟೆ ಆರ್.ಎಫ್.ಓ ರಾಜಪ್ಪ ನೇತೃತ್ವದ ಸಿಬ್ಬಂದಿಗಳ ತಂಡ ಹುಲಿಯನ್ನು ಕಾಡಿಗಟ್ಟುವ ಭರವಸೆ ನೀಡಿದೆ.
ರೈತ ಸಂಘದ ಮುಖಂಡರಾದ ಮಲ್ಲೇಂಗಡ ಶಶಿ, ಮಲ್ಲೇಂಗಡ ಸನ್ನಿ, ಕಾಯಪಂಡ ಮಧುಮೋಟಯ್ಯ, ಬಲ್ಯಮೀದೇರಿರ ಸಂಪತ್, ಮೀದೇರಿರ ಕುಟ್ಟಪ್ಪ, ಅಣ್ಣೀರ ವಿಜುಪೂಣಚ್ಚ ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.
::: ತಡೆಗೋಡೆ ನಿರ್ಮಿಸಿ :::
ಜಿಲ್ಲೆಯಲ್ಲಿ ಸುಮಾರು 282 ಕಿ.ಮೀ ಗ್ರಾಮ ಹಾಗೂ ಅರಣ್ಯದ ನಡುವೆ ಸರಹದ್ದು ಇದೆ. ವನ್ಯಜೀವಿಗಳು ಗ್ರಾಮಕ್ಕೆ ನುಸುಳುವುದನ್ನು ತಡೆಯಲು ಈ ಸರಹದ್ದು ಭಾಗದಲ್ಲಿ ತಡೆ ಗೋಡೆ ಮತ್ತು ಬೇಲಿಯನ್ನು ನಿರ್ಮಿಸಬೇಕಾಗಿದೆ ಎಂದರು.
ಪಂಚವಾರ್ಷಿಕ ಯೋಜನೆ ರೂಪಿಸಿ ಪ್ರತಿ ವರ್ಷ 60 ಕಿ.ಮೀ ದೂರ ತಡೆಗೋಡೆಯನ್ನು ನಿರ್ಮಿಸಿದರೆ ವನ್ಯಜೀವಿಗಳ ಹಾವಳಿಯಿಂದ ಬೆಳೆ ನಷ್ಟ ಮತ್ತು ಜೀವಹಾನಿಗಳನ್ನು ಶಾಶ್ವತವಾಗಿ ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟರು.
ಕೊಡಗು ಬೆಳೆಗಾರರ ಒಕ್ಕೂಟದಿಂದ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಮನವಿಪತ್ರ ಸಲ್ಲಿಸಲಾಗಿದ್ದು, ಅವರು ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಪ್ರಸಕ್ತ ಬಜೆಟ್‍ನಲ್ಲಿ ಸೂಕ್ತ ಯೋಜನೆ ರೂಪಿಸುವ ಭರವಸೆ ಇದೆ ಎಂದು ಕೊಡಗು ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್‍ಮಾದಪ್ಪ ಅವರು ಇದೇ ಸಂದರ್ಭ ತಿಳಿಸಿದರು. ಫೋಟೋ :: ಟೈಗರ್

.

error: Content is protected !!