ಬೆಳೆದ ‘ಬೆಳೆ’ ಗಳಿಗೆಲ್ಲಾ ‘ಬೆಲೆ’ ಕುಸಿತ : ಆತಂಕದಲ್ಲಿ ಅನ್ನದಾತ

February 5, 2021

ಕಣಿವೆ : ಜಗದಗಲ ಹಾಗು ಮುಗಿಲಗಲ ಪಸರಿಸಿ ಮನು ಕುಲವನ್ನೆಲ್ಲಾ ಸಾವು – ನೋವುಗಳೊಂದಿಗಿನ ಆತಂಕದಲ್ಲೇ ಕಳೆದು ಕಣ್ಮರೆಯಾದ 2020 ರ ಬಳಿಕದ ದಿನಗಳಾದರೂ ನೆಮ್ಮದಿ ಕೊಡಬಲ್ಲವೇನೋ…ಎಂದು ಊಹಿಸಿ ಅಂದಾಜಿಸಿದ ಅನ್ನದಾತ ತಾನು ಬೆಳೆದ ಬೆಳೆಗಳಿಗೆ 2021 ರ ಆರಂಭದ ದಿನಗಳಲ್ಲೂ ಬೆಲೆ ದೊರಕದ ಕಾರಣ ಮತ್ತೆ ಕಂಗಾಲಾಗಿದ್ದಾನೆ.
ಈ ಹಿಂದೆ ಈ ಅನ್ನದಾತ ಬೆಳೆದ ಬೆಳೆಗಳ ಬೆಲೆ ಕುಸಿತಕ್ಕೆ ಕೊರೋನಾ ಮಹಾಮಾರಿ ಪೋಷಿತ ಲಾಕ್ ಡೌನ್ ಎಂಬ ಅಸಲೀ ಕಾರಣವಾದರೂ ಇತ್ತು. ಲಾಕ್ ಡೌನ್ ನಲ್ಲಿ ಹೋಟೆಲ್ ಗಳು, ಅಂಗಡಿ ಮುಂಗಟ್ಟುಗಳು, ರೆಸಾರ್ಟ್, ಹೋಮ್ ಸ್ಟೇಗಳು ಮುಚ್ಚಿದ್ದವು. ಹಾಗಾಗಿ ಕೃಷಿಕ ಬೆಳೆದ ಫಸಲು ಸಾಗಾಟವಾಗದ ಕಾರಣವನ್ನು ಮನದಲ್ಲಿ ತಂದುಕೊಂಡು ಒಂದಿಷ್ಟು ಸಮಾದಾನ ಮಾಡಿಕೊಳ್ಳಬಹುದಾಗಿತ್ತು.
ಆದರೆ ಕೊರೋನಾತಂಕದ ತರುವಾಯದ ಇಂದಿನ ದಿನಗಳಲ್ಲಿ ಹಾಗು ಕೊರೋನಾಕ್ಕೆ ಲಸಿಕೆ ಕಂಡು ಹಿಡಿದ ಬಳಿಕ ಜನ ಕೊರೋನಾವನ್ನು ಎಂದಿನಂತೆ ಮೈ ಮರೆತು ಮನಸೋ ಇಚ್ಚೆ ವಿಹರಿಸುವ ಇಂದಿನ ದಿನಗಳಲ್ಲಾದರೂ ಕೃಷಿಕ ಬೆಳೆದ ಫಸಲಿಗೆ ಒಂದಷ್ಟು ಬೆಲೆ ದೊರೆತು ಅನ್ನದಾತ ಖುಷಿ ಯಿಂದ ಇರಬೇಕಿತ್ತು.
ಆದರೆ ಈಗ ಹಾಗಿಲ್ಲ. ಮತ್ತದೇ ಕೊರೋನಾ ಅವಧಿಯಲ್ಲಿ ಅನು ಭವಿಸಿದ ನಷ್ಟ ಹಾಗು ಸಂಕಟ ಅನ್ನದಾತನನ್ನು ಆವರಿಸಿದೆ.
ಕುಶಾಲನಗರದ ಕಾವೇರಿ ಹಾಗು ಹಾರಂಗಿ ನದಿ ತೀರದುದ್ದಕ್ಕೂ ಕೃಷಿಕರು ಬೆಳೆದಿದ್ದ ಶುಂಠಿ, ಮರಗೆಣಸು, ಕೆಸ, ಸಿಹಿ ಗೆಣಸು, ಕುಂಭಳ, ಕಲ್ಲಂಗಡಿ ಹೀಗೆ ಬಹುತೇಕ ಎಲ್ಲಾ ಬೆಳೆಗಳಿಗೂ ಸೂಕ್ತವಾದ ಬೆಲೆ ಸಿಗದೇ ರೈತ ಸೋತು ಹೋಗಿದ್ದಾನೆ. ಮೇಲಿಂದ ಮೇಲೆ ನಷ್ಟದ ಹೊಡೆತ ಈತನನ್ನು ಅಂಗಾತ ಮಲಗಿಸಿಬಿಟ್ಟಿದೆ. ಸ್ಥಳೀಯ ಸಹಕಾರ ಸಂಘಗಳು, ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸಾಲದ ಮೇಲೆ ಸಾಲ ಮಾಡಿ ಕೊಂಡಿರುವ ಕೃಷಿಕ ಗಾಯದ ಮೇಲೆ ಮತ್ತೆ ಮತ್ತೆ ಬರೆ ಎಳೆದುಕೊಂಡು ಮಾನಸಿಕ ಯಾತನೆಯಲ್ಲಿ ಮುಳುಗಿದ್ದಾನೆ.
ಕೃಷಿಕ ಬೆಳೆವ ತರಕಾರಿ ಕಾಯಿ ಪಲ್ಯೆಗಳು, ಆಹಾರ ಧಾನ್ಯಗಳು ಎಲ್ಲವಕ್ಕೂ ಕೃಷಿ ಉತ್ಪನ್ನ ಮಾರುಲಟ್ಟೆ ಸಮಿತಿ ಬೆಲೆಯನ್ನು ನಿಗಧಿ ಗೊಳಿಸುತ್ತದೆಯಾದರೂ ಕೂಡ, ವ್ಯವಸ್ಥೆ ಹೆಣೆದುಕೊಂಡಿರುವ ದಲ್ಲಾಳಿಗಳ ಹಾಗು ಮದ್ಯವರ್ತಿಗಳ ಬಲೆಯೊಳಗೆ ಸಿಲುಕಿರುವ ಅನ್ನದಾತನಿಗೆ ತಾನು ತಿಂಗಳುಗಟ್ಟಲೇ ಬೆವರು ಹರಿಸಿ , ಲಕ್ಷಾಂತರ ರೂ ಹಣ ವ್ಯಯಿಸಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ರಾತ್ರಿ ಹಗಲುಗಳನ್ನು ಲೆಕ್ಕಿಸದೇ ಬೆಳೆವ ಬೆಳೆಗಳಿಗೆ ಬೆಲೆ ಸಿಗದ ಕಾರಣ ಲಾಭ ಹೋಗಲೀ, ತಾನು ಮಾಡಿದ ವೆಚ್ಚದ ಹಣವೇ ಸಿಗುತ್ತಿಲ್ಲ.
ಇಂತಹ ಸನ್ನಿವೇಷದಲ್ಲಿ ಮೊದಲೇ ಹಣ ಕಳೆದುಕೊಂಡು ನಷ್ಟದ ಭೀತಿಯಲ್ಲಿರುವ ಕೃಷಿಕನ ಅಂಗಳಕ್ಕೆ ಕಾಲಿಡುವ ದಲ್ಲಾಳಿಗಳು ಅಥವಾ ಮದ್ಯವರ್ತಿಗಳು ಮನಸೋ ಇಚ್ಛೆ ಮನಬಂದ ಬೆಲೆಗೆ ಆ ಕೃಷಿಕನ ಫಸಲನ್ನು ಖರೀದಿಸಿ ದಿನ ಬೆಳಗಾಗುವಷ್ಟರಲ್ಲಿ ಕೈ ತುಂಬಾ ಲಾಭ ಮಾಡಿಕೊಂಡು ಮನೆ ಸೇರುತ್ತಿದ್ದಾನೆ.
ಕೊಡಗು ಸೇರಿದಂತೆ ನೆರೆಯ ಹಾಸನ, ಮೈಸೂರು ಜಿಲ್ಲೆಗಳ ರೈತರು ಬೆಳೆವ ತರಕಾರಿ ಕಾಯಿ ಪಲ್ಯೆಗಳು ಹೆಚ್ಚಾಗಿ ರಫ್ತಾಗುವುದು ನೆರೆಯ ಕೇರಳ ರಾಜ್ಯಕ್ಕೆ. ಆದರೆ ಅಲ್ಲಿ ಕೊರೋನಾ ಕಾರಣದಿಂದ ಪೇಟೆ ತೊರೆದು ಊರು ಸೇರಿದ ಮಂದಿ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಮರಗೆಣಸು, ಕೆಸದಂತಹ ತರಕಾರಿ ಗಳನ್ನು ಬೆಳೆದಿರುವ ಕಾರಣ ಅಲ್ಲಿನ ಬೇಡಿಕೆ ಕುಸಿದಿದೆ ಎಂದು ಕೆಲವರು ಹೇಳಿದರೆ, ತರಕಾರಿ ಕೊಂಡು ತಿನ್ನಲು ಜನರ ಬಳಿ ಹಣವೇ ಇಲ್ಲ. ಹಾಗಾಗಿ ಬೇಡಿಕೆ ತಗ್ಗಿದೆ ಎಂದು ಇನ್ನು ಕೆಲವರು ಹೇಳುತ್ತಾರೆ.
ಉದಾಹರಣೆಗೆ ಗುಡ್ಡೆಹೊಸೂರು ಬಳಿಯ ಬಸವನಹಳ್ಳಿಯಲ್ಲಿ ಮಹೇಶ ಎಂಬ ಕೃಷಿಕ ಮರಗೆಣಸು ಬೆಳೆದಿದ್ದಾರೆ. ಈ ಹಿಂದೆ ಇದರ ಬೆಲೆ ಕೆಜಿ ಯೊಂದಕ್ಕೆ 20 ರೂಗಳನ್ನು ದಾಟಿತ್ತು. ಆದರೆ ಈವಾಗ ಕೇವಲ 4 ರೂ 5 ರೂಗಳಿಗೂ ಕೇಳುವವರಿಲ್ಲ.
ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸೋಣ ಎಂದರೆ ಮಾರುಕಟ್ಟೆಯಲ್ಲಿ ಈ ಫಸಲಿಗೆ ಈಗ ಸಿಗೋ ಹಣ ಕೂಲಿಗೂ ಸಾಕಾಗುವುದಿಲ್ಲ ಎಂದು ಹೊಲದೊಳಗೆ ಹಾಗೆ ಬಿಟ್ಟುಕೊಂಡಿರುವವರು ಹಲವರಿದ್ದಾರೆ.
ಹಾಗೆಯೇ ಚಿಕ್ಕಹೊಸೂರಿನ ಕೃಷಿಕ ಸದಾಶಿವ ಎಂಬವರು ಕಲ್ಲಂಗಡಿ ಹಣ್ಣು ಬೆಳೆದಿದ್ದಾರೆ.
ಈ ಮೊದಲು ಕೆಜಿ ಒಂದಕ್ಕೆ 10 ರಿಂದ 15 ರೂಗಳವರೆಗೂ ಇದ್ದ ಈ ಫಸಲನ್ನು ಈಗ ಕೆಜಿಗೆ ಕೇವಲ 6 ರೂಗೆ ಮಾರಾಟ ಮಾಡಿದ್ದಾರೆ.
ಹಾಗೆಯೇ ಮತ್ತೋರ್ವ ಕೃಷಿಕ ಎರಡು ಎಕರೆಯಲ್ಲಿ ಕುಂಭಳ ಕಾಯಿ ಬೆಳೆದು ಕೇಳುವವರೇ ಇಲ್ಲದೇ ದಾರಿ ಹೋಕರಿಗೆ ಹಾಗು ಬೀಡಾಡಿ ದನ ಕರುಗಳಿಗೆ ತಿನ್ನಿಸಿ ಕೃತಾರ್ಥರಾದರು.
ಹಾಗೆಯೇ ವಾಣಿಜ್ಯ ಬೆಳೆ ಶುಂಠಿಗೂ ಬೆಲೆ ಇಲ್ಲ. ಜೋಳ ಬೆಳೆದ ಕೃಷಿಕರು ಲಾಭವನ್ನೇ ಗಳಿಸದಾದರು.
ಇನ್ನು ನಾಡಿನ ಶೇ. 80 ರಷ್ಟು ಜನರಿಗೆ ತಾವು ಕುಳಿತಲ್ಲೇ ತಿನ್ನುತ್ತಿರುವ ಜೀವ ಸಂಜೀವಿನಿಯಾದ ” ಅನ್ನ” ವಾಗುವ ” ಭತ್ತ” ಎಂಬ ಹೊನ್ನನ್ನು ಬೆಳೆಯಲು ಇತ್ತೀಚಿನ ದಿನಗಳಲ್ಲಿ ರೈತರು ಖರ್ಚು ಮಾಡುತ್ತಿರುವ ಹಣಕ್ಕೆ ಸಮನಾದ ವರಮಾನವೇ ಬರುತ್ತಿಲ್ಲ. ಏಕೆಂದರೆ ಸರ್ಕಾರ ಉಚಿತವಾಗಿ ಮನೆಯಂಗಳಕ್ಕೆ ತಂದು ನೀಡುವ ಪಡಿತರ ಅಕ್ಕಿಯ ಫಲದಿಂದಾಗಿ, ಭತ್ತದ ಕೃಷಿ ಮಾಡುವವರೇ ಇಲ್ಲವಾಗಿದ್ದಾರೆ.
ಇನ್ನು ಪರಂಪರಾಗತವಾಗಿ ಭತ್ತದ ಕೃಷಿ ಮಾಡುವ ಕೆಲವೇ ಕೆಲವು ಕೃಷಿಕರು ವೆಚ್ಚ ಹೆಚ್ಚಾದರೂ ಸರಿಯೇ ತಿನ್ನುವ ಅನ್ನ ಬೆಳೆವ ಭೂಮಿಯನ್ನು ಪಾಳು ಬಿಡಬಾರದೆಂಬ ನಂಬಿಕೆಗೆ ಗಂಟುಬಿದ್ದು ಕೂಲಿ ದುಪ್ಪಟ್ಟು ಆದರೂ ಸರಿಯೇ ಭತ್ತದ ಕೃಷಿ ಮಾಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ಒಂದು ಎಕರೆ ಭೂಮಿಯಲ್ಲಿ ಭತ್ತ ಬೆಳೆಯಲು ವ್ಯಯಿಸುವ ಹಣಕ್ಕೆ ವರ್ಷವಿಡೀ ಕಿರಾಣಿ ಅಂಗಡಿಗಳಲ್ಲಿ ಅಕ್ಕಿ ಖರೀದಿಸಿ ಅನ್ನ ಉಂಡರೂ ಆ ಹಣ ಖರ್ಚಾಗುವುದಿಲ್ಲ. ಅಂದರೆ ಭತ್ತ ಬೆಳೆಯಲು ವೆಚ್ಚವೇ ಹೆಚ್ಚು ತಗಲುತ್ತಿದೆ.
ಆದ್ದರಿಂದ ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಕೃಷಿ ಇಲಾಖೆ ಅಥವಾ ಜಿಲ್ಲಾಡಳಿತದ ಮೂಲಕ ಆಯಾಯ ಪ್ರಾಂತ್ಯಗಳ ಕೃಷಿಕರು ಬೆಳೆವ ಬೆಳೆಗಳ ವಿವರ ಸಂಗ್ರಹಿಸಬೇಕು. ಆಯಾಯ ಕೃಷಿಕರು ತಾವು ಬೆಳೆವ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಬಡ ರೈತನ ಅಂಗಳಕ್ಕೆ ದಲ್ಲಾಳಿಗಳು ಅಥವಾ ಮದ್ಯವರ್ತಿಗಳು ನುಸುಳದಂತೆ ಸ್ಥಳೀಯ ಆಡಳಿತಗಳೇ ಎಚ್ಚರ ವಹಿಸುವಂತಾಗಬೇಕು. ಆಯಾಯ ಹವಾಮಾನಕ್ಕನುಗುಣವಾಗಿ ಅಲ್ಲಿನ ಕೃಷಿಕ ಬೆಳೆದಂತಹ ತರಕಾರಿ ಕಾಯಿ ಪಲ್ಯೆ, ಹಣ್ಣು, ಆಹಾರ ಧಾನ್ಯ, ದ್ವಿದಳ ಧಾನ್ಯ ಹೀಗೆ ಎಲ್ಲಾ ರೈತ ಉತ್ಪನ್ನಗಳಿಗೆ ಸರ್ಕಾರವೇ ಬೆಲೆ ನಿಗಧಿಗೊಳಿಸಿ ರೈತರ ಹಿತ ಕಾಯುವಂತಾಗಬೇಕಿದೆ.
ಸರಕಾರಿ ನೌಕರರಿಗೆ ಕಾಲಕಾಲಕ್ಕೆ ಸರ್ಕಾರ ಘೋಷಿಸುವ ವಿವಿಧ ಭತ್ಯೆಗಳ ಮಾದರಿಯಲ್ಲಿ ಕೃಷಿಕ ಬೆಳೆದ ಬೆಳೆಗಳಿಗೂ ಸರ್ಕಾರವೇ ಬೆಲೆ ನಿಗಧಿ ಮಾಡುವಂತಾಗಬೇಕೇ ವಿನಃ, ಯಾರೋ ಮದ್ಯವರ್ತಿ ಅಥವಾ ಬಂಡವಾಳಶಾಹಿ ಆಗಬಾರದು.
ಸರ್ಕಾರಗಳು ರೈತರ ಹಿತ ಕಾಯುವಂತಾಗಬೇಕು. ರೈತರಿಗೆ ಕಡಿಮೆ ಬೆಲೆಯಲ್ಲಿ ಬಿತ್ತನೆ ಬೀಜ ಹಾಗು ರಸಗೊಬ್ಬರ ಗಳನ್ನು ಪೂರೈಸುವ ಮತ್ತು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದಾಗ ಮಾತ್ರ ಅನ್ನದಾತ ನೆಮ್ಮದಿಯಿಂದ ಬದುಕುಳಿಯಲು ಸಾಧ್ಯ.

ನಾನು ಕಳೆದ 20 ವರ್ಷಗಳಿಂದ ಕಾವೇರಿ ನದಿ ದಂಡೆಯಲ್ಲಿನ ನನ್ನ ಭೂಮಿಯಲ್ಲಿ ಬೀನ್ಸ್, ಹಸಿಮೆಣಸಿನಕಾಯಿ, ಹೂಕೋಸು, ಗೆಡ್ಡೆಕೋಸು, ಎಣ್ಣೆ ಬದನೆ ಹೀಗೆ ತರಹೇವಾರಿ ತರಕಾರಿಗಳನ್ನು ಬೆಳೆಯುತ್ತಿದ್ದೇನೆ. ಆದರೆ ಕಳೆದ ವರ್ಷ ಕೊರೋನಾ ಕೈ ಸುಟ್ಟಿತ್ತು. ಈವಾಗ ಕೊರೋನಾ ಅವಧಿಗಿಂತಲೂ ಮಿಗಿಲಾಗಿ ಬೆಲೆ ಕುಸಿತ ಅಂದುಕೊಂಡು ದಲ್ಲಾಳಿಗಳು ನನ್ನಿಂದ ತರಕಾರಿ ಖರೀದಿಸಿ ಕೊಂಡು ಹೋಗಿ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡ್ತಾ ಇದ್ದಾರೆ. ತಿಂಗಳುಗಟ್ಟಲೆ ಶ್ರಮವಹಿಸಿ ಬೆಳೆದರೂ ನಯಾಪೈಸೆ ಲಾಭವಾಗಲಿಲ್ಲ. ಆದರೆ ದಲ್ಲಾಳಿಗಳು ಕೈ ಬದಲಿಸಿದ ಅರೆ ಕ್ಷಣದಲ್ಲಿ ಸಾವಿರಾರು ರೂಗಳ ಲಾಭ ಮಾಡಿಕೊಳ್ತಾರೆ. ನನ್ನಂತಹ ಬಡ ರೈತನ ಹಿತ ಕಾಯೋರು ಯಾರು ಹೇಳಿ..? …………..ತರಕಾರಿ ರಾಜಣ್ಣ ಚಿಕ್ಕಹೊಸೂರು.

ನಾನು ವರ್ಷದ ಪ್ರತೀ ಕಾಲಮಾನದಲ್ಲೂ ಮೆಕ್ಕೆ ಜೋಳ ಹಾಗು ಸಿಹಿ ಗೆಣಸು ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತೇನೆ.‌ ಕಳೆದ ವರ್ಷ ಲಾಕ್ ಡೌನ್ ಅಂತಾ ಕೊಳ್ಳುವವರಿಲ್ಲದೇ ಕೇವಲ ಕೆಜಿಗೆ ಮೂರು ರೂಗೆ ಮಾರಾಟ ಮಾಡಿದ್ದೆ.
ಆದರೆ ಈಗ ಸಮಾದಾನ ಅಂದ್ರೆ ಕೆಜಿಗೆ 6 ರೂ ಸಿಕ್ಕಿದೆ. ನನಗೆ 10 ರಿಂದ 12 ರೂ ಸಿಕ್ಕರೆ ಮಾತ್ರ ಲಾಭ ಅಂತಾ ಮೂರು ಕಾಸು ಆಗೋದು. ಈಗ ಖರ್ಚು ಮಾಡಿದ ಹಣವೂ ಸಿಗಲ್ಲ. ಜೋಳಕ್ಕೂ ಬೆಲೆ ಕುಸಿತವಾಗಿತ್ತು. ಹೀಗಾದರೆ ಸಾಲದ ಮೇಲೆ ಸಾಲದ ಭಾರ ಹೊತ್ತೊಂಡವನಿಗೆ ಬದುಕಲು ಯಾವ ಮಾರ್ಗ ಉಳಿದಿರುತ್ತೆ ಹೇಳಿ. ದಿನಬೆಳಗಾದರೆ ಸಾಲಗಾರರ ಕಾಟ ಅಂತಲೇ ರೈತ ಬೇಸತ್ತು ಹೋಗೋದು. ನಮ್ಮಂತಹ ರೈತರು ಬೆಳೆವ ಫಸಲನ್ನು ಬೆಂಬಲ ಬೆಲೆ ಕೊಟ್ಟು ಸರ್ಕಾರವೇ ಖರೀದಿಸಬೇಕು. ಹಾಗಿದ್ದರೆ ನಮ್ಮಂತಹ ಅನ್ನದಾತರು ಬದುಕುತ್ತೀವಿ.error: Content is protected !!