ಸಾರ್ವಜನಿಕರಿಗೆ ಕಿರಿಕಿರಿ : ಕರ್ಕಶ ಸೈಲೆನ್ಸರ್ ಮೇಲೆ ರೋಡ್ ರೋಲರ್ ಹತ್ತಿಸಿದ ಉಡುಪಿ ಪೊಲೀಸರು
February 5, 2021

ಉಡುಪಿ: ಬೇಕಾಬಿಟ್ಟಿ ವಾಹನ ಓಡಿಸುತ್ತಾ ಕರ್ಕಶ ಶಬ್ದ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಬೈಕ್ ಸವಾರರಿಗೆ ಉಡುಪಿ ಪೊಲೀಸರು ಭರ್ಜರಿ ಶಾಕ್ ನೀಡಿದ್ದಾರೆ.
ಮಣಿಪಾಲ ವ್ಯಾಪ್ತಿಯಲ್ಲಿ ಜನರಿಗೆ ಕಿರಿ ಕಿರಿಯಾಗುವಂತೆ ಶಬ್ದ ಮಾಡುತ್ತಾ ಶಬ್ದ ಮಾಲಿನ್ಯ ಉಂಟು ಮಾಡುತ್ತಿದ್ದ 50 ದ್ವಿಚಕ್ರ ವಾಹನದ ಸೈಲೆನ್ಸರ್ ಗಳನ್ನು ಕಿತ್ತು ಅದರ ಮೇಲೆ ರೋಡ್ ರೋಲರ್ ಚಲಾಯಿಸಿ ಅನುಪಯುಕ್ತಗೊಳಿಸಿದ್ದಾರೆ.
ಕಳೆದೊಂದು ತಿಂಗಳಲ್ಲಿ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 50 ದ್ವಿಚಕ್ರ ವಾಹನ ಸವಾರರ ವಿರುದ್ದ ಪ್ರಕರಣ ದಾಖಲಿಸಿ 25, 500 ರೂ. ದಂಡ ವಸೂಲಿ ಮಾಡಲಾಗಿದೆ.
ವಾಹನ ಸವಾರರ ಮೇಲೆ ಪ್ರಕರಣ ದಾಖಲಿಸುವಾಗ ಸೈಲೆನ್ಸರ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ಮತ್ತೆ ಅವರಿಗೆ ನೀಡಿದ್ದಲ್ಲಿ ಪುನ ಬಳಕೆ ಮಾಡುವ ಸಾಧ್ಯತೆ ಇರುವುದರಿಂದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ವಶಪಡಿಸಿಕೊಂಡ 51 ಸೈಲೆನ್ಸರ್ ಗಳನ್ನು ರೋಡ್ ರೋಲರ್ ಮೂಲಕ ಅನುಪಯುಕ್ತಗೊಳಿಸಲಾಗಿದೆ.
