ಬಸ್ ನಿಲ್ದಾಣಗಳಲ್ಲಿ ಅಗತ್ಯ ಮೂಲ ಸೌಲಭ್ಯಕ್ಕೆ ಮನವಿ

February 5, 2021

ಮಡಿಕೇರಿ ಫೆ. 5 : ಕೊಡಗು ಜಿಲ್ಲೆಯ ಹಲವಾರು ಪಟ್ಟಣಗಳಲ್ಲಿ ಕೆಎಸ್‍ಆರ್‍ಟಿಸಿ ಸುಸಜ್ಜಿತ ಬಸ್ ನಿಲ್ದಾಣ ಇಲ್ಲದೇ ಇರುವುದರಿಂದ ಸಾರ್ವಜನಿಕರು ತೊಂದರೆಗೆ ಒಳಗಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೊಸ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಕೊಡಗು ಜಿಲ್ಲೆಗೆ ಎಷ್ಟು ಅನುದಾನ ಒದಗಿಸಲಾಗಿದೆ. ಮತ್ತು ಯಾವ ಯಾವ ಪಟ್ಟಣಗಳಲ್ಲಿ ಹೊಸದಾಗಿ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸಂಗಪ್ಪ ಸವದಿ ಅವರಿಂದ ಮಾಹಿತಿ ಪಡೆದರು.
ಇದಕ್ಕೆ ಉತ್ತರಿಸಿದ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸಂಗಪ್ಪ ಸವದಿ ಅವರು ಪ್ರಸ್ತುತ ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ, ಹೆಬ್ಬಾಲೆಗಳಲ್ಲಿ ಕ.ರಾ.ರ.ಸಾ. ನಿಗಮದ ಒಟ್ಟು 5 ಬಸ್ ನಿಲ್ದಾಣಗಳಿದ್ದು, ಈ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಮಹಿಳೆಯರ ಮತ್ತು ಪುರುಷರ ಶೌಚಾಲಯ ವ್ಯವಸ್ಥೆ, ಪ್ರಯಾಣಿಕರಿಗೆ ಆಸನ ವ್ಯವಸ್ಥೆ, ವಿದ್ಯುತ್ ಬೆಳಕಿನ ವ್ಯವಸ್ಥೆ, ಸಾರ್ವಜನಿಕ ಪ್ರಯಾಣಿಕರಿಗೆ ಉಪಹಾರ ಗೃಹದ ವ್ಯವಸ್ಥೆ, ವಿಚಾರಣೆ ಕೌಂಟರ್ ಹಾಗೂ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗಿದೆ.
ಅಲ್ಲದೇ ಮಡಿಕೇರಿ, ಸೋಮವಾರೇಟೆ, ವಿರಾಜಪೇಟೆ ಹಾಗೂ ಕುಶಾಲನಗರ ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ವಿಶ್ರಾಂತಿ ಕೊಠಡಿ, ಮಹಿಳೆಯರ ಶಿಶುಪಾಲನಾ ಕೊಠಡಿ, ವಿಶೇಷಚೇತನರಿಗೆ ಶೌಚಾಲಯ ವ್ಯವಸ್ಥೆ, ಸಿಬ್ಬಂದಿ ವಿಶ್ರಾಂತಿ ಗೃಹದ ವ್ಯವಸ್ಥೆ ಕಲ್ಪಿಸಲಾಗಿದೆ ಹಾಗೂ ಮಡಿಕೇರಿ, ವಿರಾಜಪೇಟೆ ಮತ್ತು ಕುಶಾಲನಗರದ ಬಸ್ ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ಕೊಠಡಿ ನಿರ್ಮಿಸಲಾಗಿದೆ.
ಪ್ರಸ್ತುತ ಕೋವಿಡ್-19ರ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನಿಗಮದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣ, ಹೊಸದಾಗಿ ಯಾವುದೇ ಬಸ್ ನಿಲ್ದಾಣ, ಬಸ್ ಘಟಕ, ಅಭಿವೃದ್ಧಿ ಕಾಮಗಾರಿ ಕೆಲಸಗಳನ್ನು ನಿಗಮದ ವತಿಯಿಂದ ಕೈಗೊಂಡಿಲ್ಲ.
ಹಾಲಿ ಇರುವ ಬಸ್ ನಿಲ್ದಾಣಗಳ ಉನ್ನತೀಕರಣ ಅಥವಾ ಮೇಲ್ದರ್ಜೆಗೇರಿಸಲು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಷ್ಟು ಅನುದಾನ ಒದಗಿಸಲಾಗಿದೆ ಎಂದು ವೀಣಾ ಅಚ್ಚಯ್ಯ ಅವರು ಸಚಿವರನ್ನು ಪ್ರಶ್ನಿಸಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹಾಲಿ ಇರುವ ಬಸ್ ನಿಲ್ದಾಣಗಳ ಉನ್ನತೀಕರಣ, ಮೇಲ್ದರ್ಜೆಗೇರಿಸಲು ಯಾವುದೇ ಅನುದಾನ ಹಂಚಿಕೆಯಾಗಿರುವುದಿಲ್ಲ.
2018-19 ಮತ್ತು 2019-2020 ನೇ ಸಾಲಿನಲ್ಲಿ ಬಂಡವಾಳ ವೆಚ್ಚಗಳ ಅನುದಾನದಡಿ ಮಡಿಕೇರಿ ಬಸ್ ನಿಲ್ದಾಣವನ್ನು ರೂ.100 ಲಕ್ಷಗಳ ಅಂದಾಜು ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಹಾಗೂ ಕುಶಾಲನಗರ ಬಸ್ ನಿಲ್ದಾಣವನ್ನು ರೂ.75 ಲಕ್ಷಗಳ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

error: Content is protected !!