ಫೆ.6 ರಂದು ರಾಷ್ಟ್ರಪತಿಯಿಂದ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ ಉದ್ಘಾಟನೆ

February 5, 2021

ಮಡಿಕೇರಿ ಫೆ.5 : ಕೊಡಗು ಎಂದಾಗ ನೆನಪಿಗೆ ಬರುವುದು ನಾಡಿನ ಜೀವನದಿ ಕಾವೇರಿ ಉಗಮ ಸ್ಥಳ ತಲಕಾವೇರಿ. ಸೇನೆ, ಕ್ರೀಡೆ ಜೊತೆಗೆ ಕಾಫಿ, ಏಲಕ್ಕಿ, ಕರಿಮೆಣಸು, ಕಿತ್ತಳೆ ಹಾಗೆಯೇ ಸಾಂಪ್ರದಾಯಿಕ ಉಡುಗೆ ಗಮನ ಸೆಳೆಯುತ್ತವೆ. ಜೊತೆಗೆ ಪ್ರವಾಸಿ ತಾಣಗಳು, ಜಲಪಾತಗಳು ಕಣ್ಮುಂದೆ ಬರುತ್ತದೆ. ಅದಕ್ಕೆ ಮತ್ತೊಂದು ಸೇರ್ಪಡೆ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ.
ಭಾರತೀಯ ಸೇನೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕೊಡಗು ಜಿಲ್ಲೆ ರಾಷ್ಟ್ರದ ಭೂಸೇನೆ, ವಾಯುಸೇನೆ, ನೌಕಸೇನೆಗಳ ಪ್ರಥಮ ಮಹಾದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರನ್ನು ಒಳಗೊಂಡಂತೆ ಸೇನಾ ಕ್ಷೇತ್ರದಲ್ಲಿ ಹಲವರು ದುಡಿದಿದ್ದಾರೆ. ಅವರಲ್ಲಿ ಪ್ರಮುಖವಾಗಿ ಜನರಲ್ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಅವರು ಪ್ರಮುಖರಾಗಿದ್ದಾರೆ.
ಜನರಲ್ ತಿಮ್ಮಯ್ಯ ಅವರು 1906 ಮಾರ್ಚ್, 31 ರಂದು ಸನ್ನಿಸೈಡ್ ಎಂಬ ಬಂಗಲೆಯಲ್ಲಿ ಹುಟ್ಟಿ ಬೆಳೆದ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಸರ್ಕಾರದಿಂದ ಮಾಡಿರುವುದು ವಿಶೇಷವಾಗಿದೆ.
ವಸ್ತು ಸಂಗ್ರಹಾಲಯ ಆವರಣಕ್ಕೆ ಭೇಟಿ ನೀಡುತ್ತಿದ್ದಂತೆ ಯುದ್ಧ ಟ್ಯಾಂಕ್, ಯುದ್ಧ ವಿಮಾನ ಕಣ್ಮಣ ಸೆಳೆಯುತ್ತವೆ. ಹಾಗೆಯೇ ಯುದ್ಧ ಸ್ಮಾರಕ ಗಮನ ಸೆಳೆಯುತ್ತದೆ. ನಂತರ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುತ್ತಿದ್ದಂತೆ ಜನರಲ್ ತಿಮ್ಮಯ್ಯ ಅವರ ಬಾಲ್ಯ, ಸೇನಾ ಕ್ಷೇತ್ರದಲ್ಲಿನ ವಿವಿಧ ಛಾಯಾಚಿತ್ರಗಳು ಆಕರ್ಷಿಸುತ್ತವೆ.
ಜನರಲ್ ತಿಮ್ಮಯ್ಯ ಅವರ ವ್ಯಕ್ತಿ ಚರಿತ್ರೆ, ಭಾರತೀಯ ಸೇನೆಯ ಇತಿಹಾಸವನ್ನು ವಸ್ತು ಸಂಗ್ರಹಾಲಯದಲ್ಲಿ ನೋಡಬಹುದಾಗಿದೆ. ವಸ್ತು ಸಂಗ್ರಹಾಲಯದ ಪ್ರತೀ ಕೊಠಡಿಯು ಸೈನಿಕರ ಕತೆ ಹೇಳುತ್ತದೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಜನರಲ್ ತಿಮ್ಮಯ್ಯ ಅವರ ಸ್ಮಾರಕ ಭವನ ಅದ್ಭುತವಾಗಿ ವಿನ್ಯಾಸಗೊಳಿಸಲಾಗಿದೆ. ಭಾರತೀಯ ಸೇನಾಧಿಕಾರಿಯಾಗಿ ನಡೆದು ಬಂದ ದಾರಿಯ ಇತಿಹಾಸ ಸಾರುವುದರ ಜೊತೆಗೆ ಭಾರತೀಯ ಸೇನಾ ಪರಂಪರೆಯ ಮಾಹಿತಿ ನೀಡುವ ಮಹತ್ವದ ಸಂದೇಶ ವಸ್ತುಸಂಗ್ರಹಾಲಯದಲ್ಲಿದೆ.
ವಸ್ತು ಸಂಗ್ರಹಾಲಯದಲ್ಲಿ ಯುದ್ಧದಲ್ಲಿ ಬಳಸಲಾಗುತ್ತಿದ್ದ ಬಂದೂಕುಗಳು ಗಮನ ಸೆಳೆಯುತ್ತವೆ. ಕೊಡಗಿನ ಸೇನಾ ಪರಂಪರೆ ಹಾಗೂ ಸಂಸ್ಕøತಿಯನ್ನು ಬಿಂಭಿಸುವ ಜನರಲ್ ಕೆ.ತಿಮ್ಮಯ್ಯ ಮ್ಯೂಸಿಯಂನ್ನು ಗೌರವಾನ್ವಿತ ರಾಷ್ಟ್ರಪತಿ ಅವರು ಫೆಬ್ರವರಿ, 06 ರಂದು ಉದ್ಘಾಟಿಸುತ್ತಿರುವುದು ವಿಶೇಷವಾಗಿದೆ.
ತಿಮ್ಮಯ್ಯ ಅವರು ಹುಟ್ಟಿ ಬೆಳೆದ ಸನ್ನಿಸೈಡ್ ನಿವಾಸವನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸಲಾಗಿದೆ. ತಿಮ್ಮಯ್ಯ ಅವರ ಬಾಲ್ಯದ ಕುರಿತು ಕಲಾಕೃತಿಗಳು ಗಮನ ಸೆಳೆಯುತ್ತದೆ. ತಿಮ್ಮಯ್ಯ ಅವರು ಸೇನಾಧಿಕಾರಿಯಾಗಿ ಸಲ್ಲಿಸಿದ ಸೇವೆಯ ಛಾಯಾಚಿತ್ರಗಳು ಗಮನ ಸೆಳೆಯುತ್ತವೆ.

error: Content is protected !!