ತಾಳತ್ತಮನೆಯ ಶ್ರೀದುರ್ಗಾಭಗವತಿ ದೇವಾಲಯದಲ್ಲಿ ದೃಢ ಕಲಶ ಮತ್ತು ಪ್ರತಿಷ್ಠಾ ವಾರ್ಷಿಕೋತ್ಸವಕ್ಕೆ ಫೆ.9 ರಂದು ಚಾಲನೆ

February 5, 2021

ಮಡಿಕೇರಿ ಫೆ.5 : ತಾಳತ್ತಮನೆಯ ಶ್ರೀದುರ್ಗಾಭಗವತಿ ದೇವಾಲಯದಲ್ಲಿ ದೃಢ ಕಲಶ ಹಾಗೂ ಪ್ರತಿಷ್ಠಾ ವಾರ್ಷಿಕೋತ್ಸವ ಫೆ.9, 10 ಮತ್ತು 12 ರಂದು ನಡೆಯಲಿದೆ.
ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ.
ಫೆ.9 ರಂದು ಸಂಜೆ 7 ಗಂಟೆಯಿಂದ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪುಣ್ಯಾಹಾಂತ, ಮಹಾಬಲಿ ಪೀಠಾಧಿವಾಸದ ನಂತರ ಅನ್ನಸಂತರ್ಪಣೆಯಾಗಲಿದೆ.
ಫೆ.10 ರಂದು ಬೆಳಗ್ಗೆ 7 ಗಂಟೆಯಿಂದ ಗಣಪತಿ ಹೋಮ, ಧೃಢ ಕಲಶ ಪೂಜೆ, ಗುಳಿಗ ಪ್ರತಿಷ್ಠೆ, ಧೃಡ ಕಲಶಾಭಿಷೇಕ, ಮಹಾಬಲಿ ಪೀಠ ಪ್ರತಿಷ್ಠೆ, ಮಹಾಪೂಜೆ, ನಿತ್ಯ ನೈಮಿತ್ಯಾದಿಗಳ ನಿರ್ಣಯ ನಂತರ ಪ್ರಸಾದ ವಿತರಣೆ ನಡೆಯಲಿದೆ.
ಅಪರಾಹ್ನ 3.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಕಾಸರಗೋಡಿನ ಶ್ರೀಕ್ಷೇತ್ರ ಕುಂಟಾರು ರವೀಶ್ ತಂತ್ರಿ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಎಂ.ಪಿ. ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಪಡೆ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಜಿ.ಪಂ. ಸದಸ್ಯರಾದ ಯಾಲದಾಳು ಪದ್ಮಾವತಿ, ತಾ.ಪಂ. ಸದಸ್ಯ ಕೊಡಪಾಲು ಗಣಪತಿ, ಮದೆ ಗ್ರಾ.ಪಂ. ಸದಸ್ಯ ಬಿ.ಎಸ್ ನವೀನ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ದೇವಾಲಯದ ಹಿರಿಯ ಅರ್ಚಕರು ಹಾಗೂ ಪ್ರಧಾನ ಸಲಹೆಗಾರ ಬಿ.ಬಿ. ಕೃಷ್ಣಭಟ್ ಅವರಿಗೆ ಗೌರವಾರ್ಪಣೆ ಮಾಡಲಿದ್ದು, ಗಣ್ಯರ ಉಪಸ್ಥಿತಿಯಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು.
ಸಂಜೆ 5.30ಕ್ಕೆ ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಸಂಜೆ 6.30ಕ್ಕೆ ‘ದೇವಾಲಯ ಮತ್ತು ಪ್ರವಾಸೋದ್ಯಮ’ ಎಂಬ ವಿಷಯದ ಕುರಿತು ಹರಟೆ ಕಾರ್ಯಕ್ರಮ ನಡೆಯಲಿದೆ.
ಫೆ.12 ರಂದು ಬೆಳಿಗ್ಗೆ 7 ಗಂಟೆಯಿಂದ ಗಣಪತಿ ಹೋಮ, ನವಕ, ಮಹಾಪೂಜೆ, ಅನ್ನದಾನ ನಡೆಯಲಿದ್ದು, ಸಂಜೆ 6 ಗಂಟೆಯಿಂದ ರಂಗಪೂಜೆ, 7 ಗಂಟೆಯಿಂದ ದೇವರ ಬಲಿ ಉತ್ಸವ, ಮಹಾದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಹಾಪೂಜೆ ಹಾಗೂ ಅನ್ನಸಂತರ್ಪಣೆಯಾಗಲಿದೆ.

error: Content is protected !!