ಮಿತಿ ಮೀರಿದ ವನ್ಯಜೀವಿಗಳ ದಾಳಿ : ಕಾನೂನು ಹೋರಾಟ ಆರಂಭಿಸಿದ ಸಂಕೇತ್ ಪೂವಯ್ಯ

February 5, 2021

ಮಡಿಕೇರಿ ಫೆ.5 : ರಾಜಕೀಯ ಕ್ಷೇತ್ರದಿಂದ ದೂರ ಉಳಿದು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವ ಇರಾದೆಯನ್ನು ಪ್ರಸ್ತಾಪಿಸುತ್ತಲೇ ಬಂದಿದ್ದ ವಕೀಲ ಹಾಗೂ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರು ಇಂದು ಕಾಡಾನೆ ದಾಳಿಯಿಂದ ಅಂಗವೈಕಲ್ಯ ಹೊಂದಿರುವ ಸಿದ್ದಾಪುರದ ಬಜೆಗೊಲ್ಲಿಯ ಶೇಖರ ಅವರ ಮನೆಗೆ ಭೇಟಿ ನೀಡಿದರು. ಯೋಗಕ್ಷೇಮ ವಿಚಾರಿಸಿ ಸಾಂತ್ವನ ಹೇಳಿದ ಅವರು 15 ಸಾವಿರ ರೂ. ಧನ ಸಹಾಯ ಮಾಡಿ ಮಾನವೀಯತೆ ಮೆರೆದರು.
ಈ ಸಂದರ್ಭ ಮಾತನಾಡಿದ ಸಂಕೇತ್ ಪೂವಯ್ಯ ಅವರು ನೊಂದ ಕುಟುಂಬಕ್ಕೆ ನೆರವು ನೀಡುವುದರೊಂದಿಗೆ ಕಾನೂನು ಹೋರಾಟದ ಮೊದಲ ವಕಾಲತಿಗೆ ಶೇಖರ್ ಅವರಿಂದಲೇ ಸಹಿ ಹಾಕಿಸಿಕೊಂಡು ಹೋರಾಟ ಆರಂಭಿಸುತ್ತಿರುವುದಾಗಿ ಹೇಳಿದರು.
ಕಾನೂನು ಹೋರಾಟದಲ್ಲಿ ಸ್ನೇಹಿತರಾದ ವಕೀಲ ನರೇಂದ್ರ ಕಾಮತ್ ಅವರು ಕೂಡ ಕೈಜೋಡಿಸಿದ್ದು, ಬಡವರ, ಶೋಷಿತರ ಪರ ಇನ್ನು ಮುಂದೆಯೂ ಧ್ವನಿಯಾಗಿರುವುದಾಗಿ ಭರವಸೆ ನೀಡಿದರು.
2020 ಮಾ.12 ರಂದು ಸಿದ್ದಾಪುರ ಸಮೀಪದ ಎಸ್ಟೇಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶೇಖರ್ ಅವರ ಮೇಲೆ ಕಾಡಾನೆ ದಾಳಿ ಮಾಡಿ ಮಾರಾಣಾಂತಿಕವಾಗಿ ಗಾಯಗೊಳಿಸಿತ್ತು. ಈ ಘಟನೆಯಿಂದ ಅವರು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದರು. ಇದೀಗ ಸಂಕೇತ್ ಪೂವಯ್ಯ ಅವರು ನೋವಿಗೆ ಸ್ಪಂದಿಸುವ ಕುರಿತು ವಿಶ್ವಾಸದ ಮಾತುಗಳನ್ನಾಡಿದ್ದಾರೆ.

error: Content is protected !!