ಫೀ.ಮಾ ಕಾರ್ಯಪ್ಪ, ಜ.ತಿಮ್ಮಯ್ಯರಿಗೆ ಭಾರತ ರತ್ನ ನೀಡಲು ಒತ್ತಾಯ

February 5, 2021

ಮಡಿಕೇರಿ ಫೆ.5 : ಭಾರತೀಯ ಸೇನೆಯ ಬಹುದೊಡ್ಡ ಆಸ್ತಿಯಾಗಿರುವ ಫೀಲ್ಡ್ ಮಾರ್ಷಲ್ ಕೊಡಂದೇರ ಕಾರ್ಯಪ್ಪ ಹಾಗೂ ಜನರಲ್ ಕೊಡಂದೇರ ತಿಮ್ಮಯ್ಯನವರಿಗೆ ಮರಣೋತ್ತರವಾಗಿ ಭಾರತರತ್ನ ನೀಡಿ ಗೌರವಿಸಬೇಕು ಎಂದು ಅಖಿಲ ಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಆಗ್ರಹಿಸಿದೆ.
ವಿರಾಜಪೇಟೆಯ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಮೂರು ಸಂಸ್ಥೆಯ ಪ್ರಮುಖರು ಒಮ್ಮತದ ತಿರ್ಮಾನ ಕೈಗೊಂಡು ಮಡಿಕೇರಿಯ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳನ್ನ ಖುದ್ದಾಗಿ ಬೇಟಿಮಾಡಲು ಸಾದ್ಯವಾಗದ ಕಾರಣ ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಪತ್ರ ಬರೆದು ಒತ್ತಾಯಿಸಲು ತಿರ್ಮಾನ ಕೈಗೊಳ್ಳಲಾಯಿತು.
ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆದು ಹಲವಾರು ವಿಷಯಗಳು ಚರ್ಚೆಗೆ ಬಂದವು. ಈ ಸಂದರ್ಭ ಮಾತನಾಡಿದ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಭಾರತೀಯ ಸೇನೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಇಬ್ಬರು ಮಹನೀಯರಾದ ಫೀ.ಮಾ ಕಾರ್ಯಪ್ಪ ಹಾಗೂ ಜ.ತಿಮ್ಮಯ್ಯನವರಿಗೆ ಮರಣೋತ್ತರ ಭಾರತರತ್ನ ನೀಡಬೇಕಿದೆ, ಇವರು ಯಾರಿಗೂ ಕಡಿಮೆ ಇಲ್ಲ, ಈಗಾಗಲೇ ಭಾರತ ರತ್ನ ನೀಡಲಾದ ಕೆಲವರನ್ನು ಇವರೊಂದಿಗೆ ಹೋಲಿಕೆ ಮಾಡಿದ್ದರೆ ಇವರು ಅಗ್ರ ಸ್ಥಾನದಲ್ಲಿ ನಿಲ್ಲುತ್ತಾರೆ, ಇವರಿಬ್ಬರನ್ನು ಭಾರತ ರತ್ನಕ್ಕೆ ಶಿಫಾರಸ್ಸು ಮಾಡಬೇಕು ಎಂದು ಸಭೆಯ ಗಮನಕ್ಕೆ ತಂದರು. ಈ ಸಂದರ್ಭ ಸಭೆಯಲ್ಲಿ ಒಕ್ಕೊರಳಿನ ತಿರ್ಮಾನ ಕೇಳಿಬಂದು ಇವರಿಬ್ಬರಿಗೂ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಲು ಸಭೆಯಲ್ಲಿ ನಿರ್ಣಯ ಮಾಡಲಾಯಿತು.
ಫೀಲ್ಡ್ ಮಾರ್ಷಲ್ ಕೊಡಂದೇರ ಎಂ ಕಾರ್ಯಪ್ಪ ಭಾರತೀಯ ಸೇನೆಯ ಮೊದಲ ಮಹಾ ದಂಡನಾಯಕರಾಗಿ (ಂಡಿmಥಿ ಅommಚಿಟಿಜeಡಿ-iಟಿ-ಅhieಜಿ) ಅಧಿಕಾರ ವಹಿಸಿಕೊಂಡ ಜನವರಿ 15ನ್ನು ಭಾರತೀಯ ಸೇನೆ ಸೇನಾ ದಿನವಾಗಿ ಆಚರಿಸುವಾಗ, ಭಾರತ ಹೊರತುಪಡಿಸಿ ಬೇರೆ ದೇಶಗಳ ರಸ್ತೆಗಳು, ಪಾರ್ಕುಗಳು, ಸಾಹಸ ಆಕಾಡೆಮಿಗಳಿಗೆ ಜನರಲ್ ಕೊಡಂದೇರ ತಿಮ್ಮಯ್ಯನವರ ಹೆಸರು ಹಾಕಿ ವಿದೇಶಿಗರೇ ನಮ್ಮ ಸೇನಾನಿಗಳ ಬಗ್ಗೆ ಹೆಮ್ಮೆ ಪಡುವಾಗ ಈ ಇಬ್ಬರು ಕೊಡಗಿನ ರತ್ನಗಳಿಗೆ ಮರಣೋತ್ತರವಾಗಿಯಾದರೂ ಭಾರತರತ್ನ ನೀಡದಿರುವುದು ನಮ್ಮ ದೇಶದ ದುರಂತ ಎಂಬ ಮಾತು ಸಭೆಯಲ್ಲಿ ಕೇಳಿಬಂದು ಈ ಕೂಡಲೇ ಸರಕಾರ ಫಿ.ಮಾ ಕೊಡಂದೇರ ಕಾರ್ಯಪ್ಪ ಹಾಗೂ ಜನರಲ್ ಕೊಡಂದೇರ ತಿಮ್ಮಯ್ಯನವರ ಸಾಧನೆಯನ್ನು ಪರಿಗಣಿಸಿ ಇವರಿಬ್ಬರಿಗೆ ಮರಣೋತ್ತರವಾಗಿ ಭಾರತರತ್ನ ಪದವಿ ನೀಡಬೇಕಿದೆ. ಭಾರತ ರತ್ನ ನೀಡಲು ಆರಂಭಿಸಿದಾಗ ಮರಣೋತ್ತರವಾಗಿ ಈ ಗೌರವ ನೀಡಲು ಅವಕಾಶವಿರಲಿಲ್ಲ. ಆದರೆ 1955ರಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು ಮರಣೋತ್ತರವಾಗಿ ಈ ಗೌರವ ನೀಡಲು ಅವಕಾಶ ಕಲ್ಪಿಸಲಾಯಿತು. ಮರಣೋತ್ತರವಾಗಿ ಮೊದಲು ಈ ಗೌರವಕ್ಕೆ ಪಾತ್ರರಾದವರು ಮಾಜಿ ಪ್ರಧಾನಿ ದಿ. ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ 1966ರಲ್ಲಿ ಮರಣೋತ್ತರವಾಗಿ ಭಾರತ ರತ್ನ ನೀಡಲಾಯಿತು. ನಂತರದ ದಿನಗಳಲ್ಲಿ ಕುಮಾರಸ್ವಾಮಿ ಕಾಮರಾಜ್ (ತಮಿಳುನಾಡಿನ ಮಾಜಿ ಮುಖ್ಯಮಂತ್ರಿ) ವಿನೋಬಾ ಭಾವೆ (ಭೂದಾನ ಚಳವಳಿಯ ಹರಿಕಾರರು) ಡಾ. ಎಮ್. ಜಿ. ರಾಮಚಂದ್ರನ್ (ತಮಿಳು ನಟ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ) ಡಾ. ಬಿ.ಆರ್.ಅಂಬೇಡ್ಕರ್ (ಸಂವಿಧಾನ ಶಿಲ್ಪಿ) ರಾಜೀವ್ ಗಾಂಧಿ (ಮಾಜಿ ಪ್ರಧಾನಿ) ಸರ್ದಾರ್ ವಲ್ಲಭಭಾಯ್ ಪಟೇಲ್ (ದೇಶದ ಮೊದಲ ಗೃಹ ಸಚಿವ) ಮೌಲಾನಾ ಅಬ್ದುಲ್ ಕಲಮ್ ಆಜಾದ್ (ಸ್ವಾತಂತ್ರ್ಯ ಹೋರಾಟಗಾರ) ಅರುಣಾ ಅಸಫ್ ಅಲಿ (ಸ್ವಾತಂತ್ರ್ಯ ಹೋರಾಟಗಾರ) ಗೋಪಿನಾಥ್ ಬೋರ್ಡೊಲೋಯಿ (ಸ್ವಾತಂತ್ರ್ಯ ಹೋರಾಟಗಾರ) ಮದನ ಮೋಹನ ಮಾಳವೀಯ (ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ) ಇವರಿಗೆ ನೀಡಲಾಯಿತು.
ಹಾಗೇ ಬದುಕುಳಿದ ಹಲವಾರು ಗಣ್ಯರಿಗೆ ಸೇರಿದಂತೆ ನಗಣ್ಯರಿಗೂ ಈ ಗೌರವವನ್ನು ನೀಡಲಾಯಿತು. ಆದರೆ ಈ ದೇಶದ ಸೇನೆಯಲ್ಲಿ ಉತ್ತುಂಗದ ತುತ್ತ ತುದಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೊಡಗಿನ ಇಬ್ಬರು ವೀರ ಕಲಿಗಳನ್ನು ಸರಕಾರ ನಿರ್ಲಕ್ಷ್ಯ ಮಾಡಿರುವುದು ಸರಿಯಲ್ಲ, ಅತೀ ಸಣ್ಣದೊಂದು ಸಮುದಾಯವಾದ ಕೊಡವ ಜನಾಂಗದಲ್ಲಿ ಒಬ್ಬರು ಫೀಲ್ಡ್ ಮಾರ್ಷಲ್, ಒಬ್ಬರು ಜನರಲ್ ಸೇರಿದಂತೆ ಒಂದು ಮೂಲದ ಪ್ರಕಾರ ಸುಮಾರು 9 ಮಂದಿ ಲೆ.ಜನರಲ್, 15 ಮಂದಿ ಮೇ.ಜನರಲ್, 22 ಮಂದಿ ಬ್ರಿಗೇಡಿಯರ್, 39ಕ್ಕೂ ಅಧಿಕ ಮಂದಿ ಕರ್ನಲ್, 47ಕ್ಕೂ ಅಧಿಕ ಮಂದಿ ಲೆ.ಕರ್ನಲ್, 40ಕ್ಕೂ ಅಧಿಕ ಮಂದಿ ಮೇಜರ್ ಸೇರಿದಂತೆ ಲೆಕ್ಕಕ್ಕೆ ಸಿಗದಷ್ಟು ಕ್ಯಾಫ್ಟನ್, ಲೆಫ್ಟಿನೆಂಟ್, ಸುಭೆದಾರ್, ಹವಲ್ದಾರ್, ನಾಯಕ್ , ಲ್ಯಾನ್ಸ್ ನಾಯಕ್, ಸಿಪಾಯಿ ಹೀಗೆ ಒಂದು ಜನಾಂಗವೇ ಯೋಧರ ಕುಟುಂಬವನ್ನು ನೀಡಿದೆ. ಅದರಲ್ಲೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಸ್ಥಾನವನ್ನು ದೇಶದ ಯಾರೇ ಬಂದರೂ ತುಂಬಲು ಸಾದ್ಯವಿಲ್ಲ ಹೀಗಿರುವಾಗ ಇವರಿಬ್ಬರಿಗೆ ಮರಣೋತ್ತರವಾಗಿ ಭಾರತರತ್ನ ನೀಡಬೇಕಿದೆ ಎಂದು ಮೂರು ಸಂಸ್ಥೆಗಳು ಆಗ್ರಹಿಸಿದೆ. ಈ ಸಂದರ್ಭದಲ್ಲಿ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಸೇರಿದಂತೆ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ, ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಅಖಿಲ ಕೊಡವ ಸಮಾಜ ಕಾರ್ಯದರ್ಶಿ ಅಮ್ಮುಣಿಚಂಡ ರಾಜ ನಂಜಪ್ಪ ಸೇರಿದಂತೆ ಮೂರು ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!