ತಲಕಾವೇರಿ, ಮಡಿಕೇರಿಯಲ್ಲಿ ಬಿಗಿ ಭದ್ರತೆ

February 5, 2021

ಮಡಿಕೇರಿ ಫೆ.5 : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಫೆ.6 ರಂದು ಬೆಳಗ್ಗೆ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ಆಗಮಿಸಲಿದ್ದು, ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಭಾರತೀಯ ಸೇನೆ ಹಾಗೂ ಕೊಡಗು ಪೊಲೀಸರು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಭಾಗಮಂಡಲದ ಕಾವೇರಿ ಕಾಲೇಜು ಹೆಲಿಪ್ಯಾಡ್‍ಗೆ ಆಗಮಿಸುವ ರಾಷ್ಟ್ರಪತಿಗಳು ತಲಕಾವೇರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಮಡಿಕೇರಿಗೆ ಭೇಟಿ ನೀಡುವ ಅವರು ಜನರಲ್ ತಿಮ್ಮಯ್ಯ ಮ್ಯೂಸಿಯಂ ಆವರಣದಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ನಂತರ ಮ್ಯೂಸಿಯಂ ಉದ್ಘಾಟಿಸಲಿದ್ದಾರೆ.
ನಗರದ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ ಉದ್ಘಾಟನಾ ಸಮಾರಂಭದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಪಿವಿಎಸ್‍ಎಂ, ಯುವೈಎಸ್‍ಎಂ, ಎವಿಎಸ್‍ಎಂ, ವೈಎಸ್‍ಎಂ, ಎಸ್‍ಎಂ, ವಿಎಸ್‍ಎಂ, ಎಡಿಸಿ ಅವರು ಭಾಗವಹಿಸಲಿದ್ದಾರೆ.
ಸನ್ನಿಸೈಡ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ರಾಷ್ಟ್ರಪತಿಗಳ ಆಗಮನದ ಮಾರ್ಗದಲ್ಲಿ ಸುರಕ್ಷತಾ ವಾಹನಗಳ ತಾಲೀಮು ನಡೆಸಲಾಯಿತು.
ಭಾರತೀಯ ಸೇನೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕೊಡಗು ಜಿಲ್ಲೆ ರಾಷ್ಟ್ರದ ಭೂಸೇನೆ, ವಾಯುಸೇನೆ, ನೌಕಸೇನೆಗಳ ಪ್ರಥಮ ಮಹಾದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರನ್ನು ಒಳಗೊಂಡಂತೆ ಸೇನಾ ಕ್ಷೇತ್ರದಲ್ಲಿ ಹಲವರು ದುಡಿದಿದ್ದಾರೆ. ಅವರಲ್ಲಿ ಪ್ರಮುಖವಾಗಿ ಜನರಲ್ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಅವರು ಪ್ರಮುಖರಾಗಿದ್ದಾರೆ.
ಜನರಲ್ ತಿಮ್ಮಯ್ಯ ಅವರು 1906 ಮಾರ್ಚ್, 31 ರಂದು ಸನ್ನಿಸೈಡ್ ಎಂಬ ಬಂಗಲೆಯಲ್ಲಿ ಹುಟ್ಟಿ ಬೆಳೆದ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಸರ್ಕಾರದಿಂದ ಮಾಡಿರುವುದು ವಿಶೇಷವಾಗಿದೆ.
ವಸ್ತು ಸಂಗ್ರಹಾಲಯ ಆವರಣಕ್ಕೆ ಭೇಟಿ ನೀಡುತ್ತಿದ್ದಂತೆ ಯುದ್ಧ ಟ್ಯಾಂಕ್, ಯುದ್ಧ ವಿಮಾನ ಕಣ್ಮಣ ಸೆಳೆಯುತ್ತವೆ. ಹಾಗೆಯೇ ಯುದ್ಧ ಸ್ಮಾರಕ ಗಮನ ಸೆಳೆಯುತ್ತದೆ. ನಂತರ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುತ್ತಿದ್ದಂತೆ ಜನರಲ್ ತಿಮ್ಮಯ್ಯ ಅವರ ಬಾಲ್ಯ, ಸೇನಾ ಕ್ಷೇತ್ರದಲ್ಲಿನ ವಿವಿಧ ಛಾಯಾಚಿತ್ರಗಳು ಆಕರ್ಷಿಸುತ್ತವೆ.
ಜನರಲ್ ತಿಮ್ಮಯ್ಯ ಅವರ ವ್ಯಕ್ತಿ ಚರಿತ್ರೆ, ಭಾರತೀಯ ಸೇನೆಯ ಇತಿಹಾಸವನ್ನು ವಸ್ತು ಸಂಗ್ರಹಾಲಯದಲ್ಲಿ ನೋಡಬಹುದಾಗಿದೆ. ವಸ್ತು ಸಂಗ್ರಹಾಲಯದ ಪ್ರತೀ ಕೊಠಡಿಯು ಸೈನಿಕರ ಕತೆ ಹೇಳುತ್ತದೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಜನರಲ್ ತಿಮ್ಮಯ್ಯ ಅವರ ಸ್ಮಾರಕ ಭವನ ಅದ್ಭುತವಾಗಿ ವಿನ್ಯಾಸಗೊಳಿಸಲಾಗಿದೆ. ಭಾರತೀಯ ಸೇನಾಧಿಕಾರಿಯಾಗಿ ನಡೆದು ಬಂದ ದಾರಿಯ ಇತಿಹಾಸ ಸಾರುವುದರ ಜೊತೆಗೆ ಭಾರತೀಯ ಸೇನಾ ಪರಂಪರೆಯ ಮಾಹಿತಿ ನೀಡುವ ಮಹತ್ವದ ಸಂದೇಶ ವಸ್ತುಸಂಗ್ರಹಾಲಯದಲ್ಲಿದೆ. ತಿಮ್ಮಯ್ಯ ಅವರ ಬಾಲ್ಯದ ಕುರಿತು ಕಲಾಕೃತಿಗಳು, ಸೇನಾಧಿಕಾರಿಯಾಗಿ ಸಲ್ಲಿಸಿದ ಸೇವೆಯ ಛಾಯಾಚಿತ್ರಗಳು ಗಮನ ಸೆಳೆಯುತ್ತಿವೆ.
ಕೊಡಗಿನ ಸೇನಾ ಪರಂಪರೆ ಹಾಗೂ ಸಂಸ್ಕøತಿಯನ್ನು ಬಿಂಭಿಸುವ ಜನರಲ್ ಕೆ.ತಿಮ್ಮಯ್ಯ ಮ್ಯೂಸಿಯಂನ್ನು ಗೌರವಾನ್ವಿತ ರಾಷ್ಟ್ರಪತಿಗಳು ಫೆ.6 ರಂದು ಉದ್ಘಾಟಿಸುತ್ತಿರುವುದು ವಿಶೇಷವಾಗಿದೆ.

error: Content is protected !!