ಜೀವನದಿ ಕಾವೇರಿ ಮಾತೆಗೆ ನಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

February 6, 2021

ಮಡಿಕೇರಿ ಫೆ.6 : ಜೀವನದಿ ಕಾವೇರಿಯ ಉಗಮ ಸ್ಥಾನ ಕೊಡಗಿನ ತಲಕಾವೇರಿಗೆ ಭೇಟಿ ನೀಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪತ್ನಿ ಸವಿತಾ ಕೋವಿಂದ್ ಅವರು ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು.
ಇದರೊಂದಿಗೆ ತಲಕಾವೇರಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಪ್ರಥಮ ರಾಷ್ಟ್ರಪತಿ ಎಂಬ ಕೀರ್ತಿಗೂ ಇವರು ಭಾಜನರಾದರು.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಕ್ಷೇತ್ರದ ಅರ್ಚಕರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಮುಖ್ಯ ಅರ್ಚಕರಾದ ರಾಜೇಶ್ ಆಚಾರ್ಯ, ಸುಧೀರ್ ಆಚಾರ್ಯ, ಸಹಾಯಕ ಅರ್ಚಕರುಗಳಾದ ಅಖಿಲೇಶ್, ಪ್ರಸಾದ್, ಶ್ರೀನಿವಾಸ್ ಅವರುಗಳು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಮತ್ತಿತರರು ಈ ಸಂದರ್ಭ ಹಾಜರಿದ್ದರು. ಭಾಗಮಂಡಲದ ಹೆಲಿಪ್ಯಾಡ್ ಗೆ ಭಾರತೀಯ ವಾಯು ಪಡೆಯ ವಿಶೇಷ ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸಿದ ರಾಷ್ಟ್ರಪತಿಗಳನ್ನು ಕೊಡಗು ಜಿಲ್ಲಾಡಳಿತ ಆತ್ಮೀಯವಾಗಿ ಬರ ಮಾಡಿಕೊಂಡಿತು.
::: ಕೊಡಗಿಗೆ ಬಂದ ತೃತೀಯ ರಾಷ್ಟ್ರಪತಿ :::
ಈ ಹಿಂದೆ ಕೊಡಗಿಗೆ 1982ರಲ್ಲಿ ಜಿಲ್ಲಾಸ್ಪತ್ರೆಯ ಶಂಕುಸ್ಥಾಪನೆಗಾಗಿ ದೇಶದ ಆರನೇ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಭೇಟಿ ನೀಡಿದ್ದರೆ, 2006ರ ಏ.7ರಂದು 11ನೇ ರಾಷ್ಟ್ರಪತಿಯಾಗಿದ್ದ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಜನರಲ್ ತಿಮ್ಮಯ್ಯ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆಂದು ಜಿಲ್ಲೆಗೆ ಬಂದಿದ್ದರು. ರಾಮನಾಥ ಕೋವಿಂದ ಅವರು ಇದೀಗ ಕೊಡಗಿಗೆ ಭೇಟಿ ನೀಡಿರುವ ತೃತೀಯ ಹಾಗೂ ದೇಶದ 14ನೇ ರಾಷ್ಟ್ರಪತಿಯಾಗಿದ್ದಾರೆ.

error: Content is protected !!