ವೀರಸೇನಾನಿ ಜನರಲ್ ತಿಮ್ಮಯ್ಯ ಅವರ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹೀಗೆ ಬರೆದಿದ್ದಾರೆ

06/02/2021

ಮಡಿಕೇರಿ ಫೆ.6 : ವೀರಸೇನಾನಿ ಜನರಲ್ ತಿಮ್ಮಯ್ಯ ಅವರ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹೀಗೆ ಬರೆದಿದ್ದಾರೆ.

‘ಜನರಲ್ ತಿಮ್ಮಯ್ಯ ಮ್ಯೂಸಿಯಂ’ ಜ.ತಿಮ್ಮಯ್ಯ ಅವರಂತಹ ವೀರ ಪರಂಪರೆಯನ್ನು ಮುನ್ನಡೆಸಲು ಯುವ ಸಮೂಹಕ್ಕೆ ಪ್ರೇರಕ ಶಕ್ತಿಯಾಗಿದೆ.
ಹೀಗೆಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭೇಟಿಯ ಕುರುಹಾಗಿ ದಾಖಲೆಯ ಪುಸ್ತಕದಲ್ಲಿ ತಮ್ಮ ಲೇಖನಿಯಿಂದ ಬರೆದಿದ್ದಾರೆ. ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟಿಸಿದ ಬಳಿಕ ಲೇಖನಿ ಮೂಲಕ ಅಭಿಪ್ರಾಯ ಹಂಚಿಕೊಂಡ ರಾಷ್ಟ್ರಪತಿಗಳು ಜನರಲ್ ತಿಮ್ಮಯ್ಯ ಮ್ಯೂಸಿಯಂ ಸೈನಿಕ ಪರಂಪರೆಯ ವೀರಯೋಧರೊಬ್ಬರು ಸೈನ್ಯಕ್ಕೆ ನೀಡಿದ ಅತ್ಯಪೂರ್ವ ಕೊಡುಗೆಯನ್ನು ಸಂರಕ್ಷಿಸಿದೆ ಎಂದು ತಿಳಿಸಿದ್ದಾರೆ. ಮಹಾನ್ ಸೇನಾನಿ ಜ.ತಿಮ್ಮಯ್ಯ ಅವರು ಹುಟ್ಟಿ ಬೆಳೆದ ಸನ್ನಿ ಸೈಡ್ ಮನೆ ಅತ್ಯಂತ ಸ್ಮರಣೀಯವಾದುದೆಂದು ಅಭಿಪ್ರಾಯಪಟ್ಟಿದ್ದಾರೆ.
ಜನರಲ್ ಕೆ.ಎಸ್.ತಿಮ್ಮಯ್ಯ ಹಾಗೂ ಫೀ.ಮಾ.ಕೆ.ಎಂ. ಕಾರ್ಯಪ್ಪ ಅವರಂತಹ ವೀರ ಸೇನಾನಿಗಳನ್ನು ನೀಡಿರುವ ಹೆಮ್ಮಯ ನಾಡು ಕೊಡಗು ಎಂದು ಮುಕ್ತವಾಗಿ ತಿಳಿಸಿರುವ ರಾಷ್ಟ್ರಪತಿಗಳು, ಮ್ಯೂಸಿಯಂ ಸೈನಿಕ ಪರಂಪರೆಯನ್ನು ಮುಂದುವರೆಸುವ ಪ್ರೇರಕ ಶಕ್ತಿಯಾಗಿದೆ ಎಂದು ಬರವಣಿಗೆ ಮೂಲಕ ಹೇಳಿಕೊಂಡಿದ್ದಾರೆ.