ರಸ್ತೆ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿ: ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆ

February 6, 2021

ಸಿದ್ದಾಪುರ ಫೆ. 6 : ಕಳೆದ ಐವತ್ತು ವರ್ಷಗಳಿಂದಲೂ ಸಾರ್ವಜನಿಕರು ಹಾಗೂ ವಾಹನ ಓಡಾಟವಿರುವ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಸಂದರ್ಭ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಇಲ್ಲಸಲ್ಲದ ನೆಪವೊಡ್ಡಿ ಕಾಮಗಾರಿಗೆ ತಡೆ ಒಡ್ಡಿದಲ್ಲಿ ಚೆನ್ನಯ್ಯ ಕೋಟೆ ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಸ್ಥರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ಮಾಡಲಾಗುವುದೆಂದು ಎಂದು ಪಂಚಾಯ್ತಿ ಸದಸ್ಯ ಜೆ. ಕೆ ಅಪ್ಪಾಜಿ ಎಚ್ಚರಿಸಿದ್ದಾರೆ.
ಚೆನ್ನಯ್ಯನಕೋಟೆ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಚೆನ್ನಂಗಿಯಿಂದ ಗೂಡ್ಲೂರು, ತಟ್ಟಳ್ಳಿ, ಮೂಡಬೈಲು ಮೂಲಕ ಮಾಲ್ದಾರೆ ಗೇಟ್ ಹಾಡಿ ಸಂಪರ್ಕಿಸುವ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಆದರೆ ಈ ರಸ್ತೆಯು ಅರಣ್ಯ ಪ್ರದೇಶದೊಳಗೆ ಇರುವ ಹಿನ್ನೆಲೆಯಲ್ಲಿ ಹಾಗೂ ವನ್ಯಜೀವಿ ಸಂರಕ್ಷಣಾ ಅರಣ್ಯ ಪ್ರದೇಶ ಎಂಬ ಕಾರಣಕ್ಕಾಗಿ ಕೆಲವು ಅರಣ್ಯ ಇಲಾಖಾಧಿಕಾರಿಗಳು ರಸ್ತೆ ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆಂದು ಆರೋಪಿಸಿದರು.
ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದ ರಸ್ತೆಗೆ ಶಾಸಕರ ಅನುದಾನದಿಂದ ಮೂವತ್ತೈದು ಲಕ್ಷ ರೂ ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚಿ ಡಾಮರೀಕರಣ ಗೊಳ್ಳುತ್ತಿದೆ.
ಗ್ರಾಮೀಣ ಪ್ರದೇಶವಾಗಿರುವ ಈ ಭಾಗದ ಗ್ರಾಮಗಳಿಗೆ ಯಾವುದೇ ಬಸ್ ಸಂಚಾರವಿಲ್ಲದೆ ಸಾರ್ವಜನಿಕರು.ಕಾಲ್ನಡಿಗೆ ಹಾಗೂ ಬಾಡಿಗೆ ವಾಹನಗಳ ಮೂಲಕ ಹಾಡಿಗಳಿಗೆ ತೆರಳುತ್ತಿದ್ದಾರೆ.ಹಾಡಿಗಳ ಅಭಿವೃದ್ಧಿ ಹಾಗೂ ಸಾರ್ವಜನಿಕ ರಸ್ತೆಗಳ ಅಭಿವೃದ್ಧಿಗೆ ಅರಣ್ಯ ಇಲಾಖೆ ಕೆಲ ಅಧಿಕಾರಿಗಳು ತಡೆಯೊಡ್ಡುವುದು ಸರಿಯಾದ ನಡೆ ಅಲ್ಲ. ಅರಣ್ಯವನ್ನು ಸಂರಕ್ಷಣೆ ಮಾಡುವ ಮೂಲಕ ಅರಣ್ಯ ಪ್ರದೇಶವಾಗಿರುವುದು ಆದಿವಾಸಿಗಳಿಂದಲೇ ಹೊರತು ಅಧಿಕಾರಿಗಳಿಂದಲ್ಲ ವನ್ಯಜೀವಿ ಪ್ರದೇಶವನ್ನ ಹಿಂತೆಗೆದುಕೊಂಡು ಅರಣ್ಯ ವ್ಯಾಪ್ತಿಯನ್ನೇ ಮುಂದುವರಿಸಬೇಕೆಂದು ಒತ್ತಾಯಿಸಿದ ಅವರು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾ.ಪಂ. ಸದಸ್ಯ ಮೇಕೇರಿರ ಅರುಣ್ ಮಾತನಾಡಿ ಚೆನ್ನಂಗಿ, ಮೂಡಬೈಲು ಮೂಲಕ ಮಾಲ್ದಾರೆ ಸಂಪರ್ಕಿಸುವ ರಸ್ತೆಯು ಹಲವು ವರ್ಷಗಳಿಂದ ಹದಗೆಟ್ಟಿತ್ತು. ಕಾಡುಪ್ರಾಣಿಗಳ ಭಯದ ನಡುವೆ ಶಾಲಾ ಮಕ್ಕಳು, ಕಾರ್ಮಿಕರು, ಸಾರ್ವಜನಿಕರು ನಡೆದಾಡಲೂ ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಾಸಕ ಬೋಪಯ್ಯ ಅವರ ಬಳಿ ಮನವಿ ಮಾಡಿಕೊಂಡ ಮೇರೆಗೆ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ. ಕಾಮಗಾರಿ ಮುಂದುವರೆಸಲು ಸಿದ್ಧತೆ ಮಾಡಿಕೊಂಡಿದ್ದು, ಅರಣ್ಯ ಇಲಾಖಾಧಿಕಾರಿಗಳು ಅನಗತ್ಯವಾಗಿ ಕಾಮಗಾರಿಗೆ ಅಡ್ಡಿಪಡಿಸಲು ಯತ್ನಿಸುತ್ತಿರುವುದು ಖಂಡನೀಯ.
ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಒಗ್ಗೂಡಿಸಿ ಹೋರಾಟ ಮಾಡಲಾಗುವುದೆಂದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸಾಬು , ಜೆ.ಕೆ ವಿನು, ಅಪ್ಪಚ್ಚು, ಅನೀಶ್, ಪಾಪಣ್ಣ,ಶ್ರೀನಿವಾಸ್, ಅನಿಲ್ ಸೇರಿದಂತೆ ಮತ್ತಿತರರು ಹಾಜರಿದ್ದರು.

error: Content is protected !!