ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮನವಿಗೆ ಸ್ಪಂದಿಸಿದ ಸಚಿವ ಸೋಮಣ್ಣ

February 7, 2021

ಮಡಿಕೇರಿ ಫೆ.7 : ಕಾವೇರಿ ನದಿ ಸಂರಕ್ಷಣೆಗಾಗಿ ಅವಶ್ಯ ಅನುದಾನವನ್ನು ಮಂಜೂರು ಮಾಡುವ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನದಿ ಸಂರಕ್ಷಣೆಗೆ ಕ್ರಿಯಾಯೋಜನೆ ರೂಪಿಸುವ ಬಗ್ಗೆ ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ನೀಡಿರುವ ಮನವಿಗೆ ಸ್ಪಂದಿಸಿರುವ ಸಚಿವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿಗೆ ಪಟ್ಟಣ ಮತ್ತು ಗ್ರಾಮಗಳ ತ್ಯಾಜ್ಯ ವಸ್ತುಗಳು, ಕಲುಷಿತ ನೀರು ಹಾಗೂ ಪ್ರವಾಸಿಗರು ಬಳಸಿ ಬಿಸಾಡುವ ತ್ಯಾಜ್ಯ ವಸ್ತುಗಳಿಂದ ಮೂಲದಿಂದಲೇ ನಿರಂತರವಾಗಿ ಕಲುಷಿತಗೊಳ್ಳುವುದನ್ನು ತಡೆಯಲು ಸರಕಾರದಿಂದ ಅವಶ್ಯವಿರುವ ಅನುದಾನ ಮಂಜೂರು ಮಾಡಿಕೊಡಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಭಾಗಮಂಡಲದಿಂದ ಕೊಡಗು ಜಿಲ್ಲೆಯ ಗಡಿಭಾಗ ಕುಶಾಲನಗರ ತನಕ ಹೆಚ್ಚಿನ ಪ್ರಮಾಣದಲ್ಲಿ ಕಲುಷಿತಗೊಳ್ಳುತ್ತಿರುವ ಕಾವೇರಿಯ 23 ಗ್ರಾಪಂ, ಒಂದು ಪಪಂ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕ್ರಿಯಾಯೋಜನೆಗಳ ಬಗ್ಗೆ ಕಾವೇರಿ ನದಿ ಸ್ವಚ್ಚತಾ ಆಂದೋಲನ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇತ್ತೀಚೆಗೆ ಸಮಗ್ರ ಮಾಹಿತಿಯೊಂದಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಚಂದ್ರಮೋಹನ್ ಹೇಳಿದ್ದಾರೆ.

error: Content is protected !!