ಗ್ರಾಮಸ್ಥರ ಸಮಸ್ಯೆ ಆಲಿಸಿದ ಗ್ರಾ.ಪಂ ಸದಸ್ಯ ಶಂಷುದ್ದೀನ್ : ಸ್ವಚ್ಛತೆಗೆ ಆದ್ಯತೆ ನೀಡುವ ಭರವಸೆ

February 7, 2021

ಮಡಿಕೇರಿ ಫೆ.7 : ತಾವು ಪ್ರತಿನಿಧಿಸುವ ಗ್ರಾಮಗಳಲ್ಲಿ ಸ್ವಚ್ಛತೆ ಮತ್ತು ಮೂಲಭೂತ ಸೌಲಭ್ಯಗಳಿಗೆ ಮೊದಲ ಆದ್ಯತೆ ನೀಡುವುದಾಗಿ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಭರವಸೆ ನೀಡಿದ್ದಾರೆ.
ಗ್ರಾ.ಪಂ ವ್ಯಾಪ್ತಿಯ ಸುಂದರನಗರ, ಬಸವೇಶ್ವರ ಬಡಾವಣೆ ಹಾಗೂ ನವಗ್ರಾಮಕ್ಕೆ ಭೇಟಿ ನೀಡಿದ ಅವರು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.
ಸುಂದರನಗರ ಬಸ್ ತಂಗುದಾಣದ ಎದುರು ಚರಂಡಿಯಲ್ಲಿ ಕಸದ ರಾಶಿ ತುಂಬಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು. ತಕ್ಷಣ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಕರೆ ಮಾಡಿದ ಶಂಷುದ್ದೀನ್ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸೂಚಿಸಿದರು. ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿದ್ದು, ಕೆಲವು ಟ್ಯಾಂಕ್‍ನಲ್ಲಿ ಹುಳಗಳು ಕಂಡು ಬಂದಿದೆ. ನೀರು ಸರಬರಾಜು ವ್ಯವಸ್ಥೆಯ ಮೋಟಾರ್ ಹಾಗೂ ಪೈಪ್‍ಗಳನ್ನು ಕೂಡ ದುರಸ್ತಿ ಪಡಿಸುವಂತೆ ಗ್ರಾಮಸ್ಥರು ಗಮನ ಸೆಳೆದರು.
ನೀರಿನ ಟ್ಯಾಂಕ್ ಸ್ವಚ್ಛತೆ ಮತ್ತು ದುರಸ್ತಿ ಕಾರ್ಯವನ್ನು ಶೀಘ್ರ ಕೈಗೆತ್ತಿಕೊಳ್ಳುವುದಾಗಿ ಷಂಶುದ್ದೀನ್ ಹೇಳಿದರು.
ವಿದ್ಯುತ್ ಸಂಪರ್ಕ ಇಲ್ಲದೇ ಕತ್ತಲಲ್ಲಿ ಕಾಲ ಕಳೆಯುತ್ತಿರುವ ಸುಂದರನಗರದ ಪುಟ್ಟಮ್ಮನವರ ಮನೆಗೆ ಭೇಟಿ ನೀಡಿದ ಅವರು ಆದಷ್ಟು ಶೀಘ್ರ ವಿದ್ಯುತ್ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಸುಂದರನಗರದ ನಿವಾಸಿ ತಂಗವೇಲು ಅವರು ಚರಂಡಿ ಸಮಸ್ಯೆಯ ಬಗ್ಗೆ ಗಮನ ಸೆಳೆದರು.
ವಿಕಲಚೇತನರೋರ್ವರು ಸರ್ಕಾರದ ಪಿಂಚಣಿ ದೊರಕಿಸಿಕೊಡುವಂತೆ ಮನವಿ ಮಾಡಿದರು. ಸ್ಥಳೀಯ ನಿವಾಸಿ ಆಶಾ ಅವರು, ರಸ್ತೆ ಮತ್ತು ಚರಂಡಿ ಕಾಮಗಾರಿ ಕೈಗೊಳ್ಳುವಂತೆ ಮನವಿ ಮಾಡಿದರು. ಆಶ್ರಯ ಯೋಜನೆಯಡಿ ನಿವೇಶನವನ್ನು ನೀಡುವಂತೆ ಕೆಲವು ನಿವೇಶನ ರಹಿತರು ಕೋರಿಕೊಂಡರು.
ಗ್ರಾಮಸ್ಥರ ಎಲ್ಲಾ ಬೇಡಿಕೆಗಳಿಗೆ ಸಕಾಲದಲ್ಲಿ ಸ್ಪಂದಿಸುವುದಾಗಿ ಶಂಷುದ್ದೀನ್ ಭರವಸೆ ನೀಡಿದರು.
::: ಕಾಡುಗಿಡಗಳ ತೆರವು :::
ಬಸವೇಶ್ವರ ಬಡಾವಣೆಯಲ್ಲಿ ರಸ್ತೆ ಮೇಲೆ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿಕೊಡಿ ಎಂದು ಸ್ಥಳೀಯ ನಿವಾಸಿ ಕುಬೇರ ಮನವಿ ಮಾಡಿದರು. ತಕ್ಷಣ ಸ್ಥಳಕ್ಕೆ ಪೌರ ಕಾರ್ಮಿಕರನ್ನು ಕರೆಸಿದ ಅವರು ಗಿಡಗಂಟಿಗಳನ್ನು ತೆರವುಗೊಳಿಸಿದರು.
ಗ್ರಾ.ಪಂ ಸದಸ್ಯ ಶಂಷುದ್ದೀನ್ ಅವರು ಜನರ ಬಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿದ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

error: Content is protected !!