ನಾಲ್ವರು ಪುತ್ರಿಯರ ಶೈಕ್ಷಣಿಕ ಸಾಧನೆ : ತಂದೆ, ತಾಯಿಗೆ ದಲಿತ ರತ್ನ’ ಪ್ರಶಸ್ತಿ ಸಮರ್ಪಣೆ

February 7, 2021

ಮಡಿಕೇರಿ ಫೆ.7 : ಕೂಲಿ ಕಾರ್ಮಿಕರಾಗಿದ್ದರೂ, ತಮ್ಮ ನಾಲ್ವರು ಹೆಣ್ಣು ಮಕ್ಕಳಿಗೆ ಸ್ನಾತಕೋತ್ತರ ಪದವಿಯೊಂದಿಗೆ ಪಿಹೆಚ್ ಡಿ ಮಾಡಿಸುತ್ತಿರುವ ಮಕ್ಕಂದೂರಿನ ಬಸಪ್ಪ-ಮಂಜುಳಾ ದಂಪತಿಗೆದಲಿತ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಾವಂತ ದಲಿತ ವಿದ್ಯಾರ್ಥಿಗಳನ್ನು ಸನ್ಮಾನಿಸುವ 32ನೇ ವರ್ಷದ ಕಾರ್ಯಕ್ರಮ ಹಾಗೂ `ದಲಿತ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಿತು.
ಈ ಬಾರಿ ವಿವಿಧ ತರಗತಿಗಳಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದ, ಜಿಲ್ಲೆಯ ವಿವಿಧೆಡೆಯ ಸುಮಾರು 100 ವಿದ್ಯಾರ್ಥಿಗಳನ್ನು ಅತಿಥಿ ಗಣ್ಯರು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ.ದೇವದಾಸ್ ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಂತೆ ಕಿವಿಮಾತು ಹೇಳಿದರು. ದಲಿತರಿಗೆ ಬದುಕಿನ ದಾರಿ ತೋರಿದ ಡಾ. ಅಂಬೇಡ್ಕರ್, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಅಡಿಪಾಯ ಹಾಕಿದ ಸಿದ್ಧನಾಯಕ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ ಸಾವಿತ್ರಿ ಜ್ಯೋತಿಬಾ ಪುಲೆ ಅವರನ್ನು ಸ್ಮರಿಸಿದ ಡಾ. ದೇವದಾಸ್, ದಲಿತ ಸಂಘರ್ಷ ಸಮಿತಿಯು ಮಕ್ಕಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಭಾಷಣ ಮಾಡಿದ ಮಡಿಕೇರಿ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀಚಂದ್ರಶೇಖರ್, ಶಿಕ್ಷಣ ಎನ್ನುವುದು ಆಡಂಬರವಲ್ಲ ಬದಲಿಗೆ, ಅದೊಂದು ಜೀವನ ಪದ್ಧತಿ ಎಂದರು.
ಕಾಲೇಜು ಜೀವನವನ್ನು ಕೇವಲ ಮೋಜಿನಲ್ಲೇ ಕಳೆಯದೆ ಭವಿಷ್ಯದ ಬಗ್ಗೆ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು. ಬಸಪ್ಪ ದಂಪತಿ, ತಮ್ಮ ಹೆಣ್ಣು ಮಕ್ಕಳಿಗೆ ಸ್ನಾತಕೋತ್ತರ ಪದವಿವರೆಗೆ ಶಿಕ್ಷಣ ನೀಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ದಲ್ಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾಸ್ಪತ್ರೆಯ ಪ್ರಸೂತಿ ತಜ್ಞರಾದ ಸೌಮ್ಯ ಪ್ರಕಾಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಡಾ.ಡಿ.ಕನ್ನಿಕಾ, ಹೆಚ್.ಪಿ.ನಿರ್ಮಲಾ, ದಸಂಸ ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ, ಜಿಲ್ಲಾ ಸಂಘಟನಾ ಸಂಚಾಲಕ ಡಿ.ಜೆ. ಈರಪ್ಪ, ಮಡಿಕೇರಿ ತಾಲೂಕು ಸಂಚಾಲಕ ಎ.ಪಿ.ದೀಪಕ್, ಸೋಮವಾರಪೇಟೆ ಸಂಚಾಲಕ ಎಂ.ಎಸ್.ಕುಮಾರ್ ಹಾಗೂ ನಗರ ಸಂಚಾಲಕ ಸಿ.ಪಿ.ಸಿದ್ದೇಶ್ವರ್ ಉಪಸ್ಥಿತರಿದ್ದರು.

error: Content is protected !!