ಜೆಡಿಎಸ್ ಬ್ಯಾಡಗೊಟ್ಟ ವಲಯಾಧ್ಯಕ್ಷರಾಗಿ ಬಿ.ಆರ್.ರೂಪೇಶ್ ಆಯ್ಕೆ : ಪಕ್ಷ ಸಂಘಟನೆಗೆ ಕೆ.ಎಂ.ಗಣೇಶ್ ಕರೆ

February 7, 2021

ಮಡಿಕೇರಿ ಫೆ.7 : ಜಾತ್ಯತೀತ ಜನತಾದಳದ ಬ್ಯಾಡಗೊಟ್ಟ ವಲಯಾಧ್ಯಕ್ಷರಾಗಿ ಬಿ.ಆರ್.ರೂಪೇಶ್ ಹಾಗೂ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಕಲಂದರ್ ಆಯ್ಕೆಯಾಗಿದ್ದಾರೆ.
ಕೊಡ್ಲಿಪೇಟೆಯ ಬ್ಯಾಡಗೊಟ್ಟದಲ್ಲಿ ಇಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ಗಣೇಶ್ ಅವರು ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆಗೆ ರಾಜ್ಯದ ಮುಖಂಡರು ಕರೆ ನೀಡಿದ್ದು, ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಸಭೆ ನಡೆಸುವುದಾಗಿ ಹೇಳಿದರು. ಇಂದಿನ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜನರ ಒಲವು ಜೆಡಿಎಸ್ ಪರವಾಗಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜನಪರ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಿ ಪಕ್ಷ ಸಂಘಟನೆ ಮಾಡುವಂತೆ ಕರೆ ನೀಡಿದರು. ಜೆಡಿಎಸ್ ಯಾವುದೇ ಜಾತಿ ಆಧಾರಿತ ಪಕ್ಷವಲ್ಲ, ಇದೊಂದು ಜಾತ್ಯತೀತ ಪಕ್ಷವಾಗಿದ್ದು, ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಗಣೇಶ್ ಹೇಳಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಷರೀಫ್ ಮಾತನಾಡಿ ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷ 120 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು. ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಜನಮೆಚ್ಚುವ ಆಡಳಿತ ನೀಡಿದ್ದಾರೆ. ಸಂಪೂರ್ಣ ಬಹುಮತ ಲಭಿಸಿದರೆ ಅಭಿವೃದ್ಧಿ ಕಾರ್ಯಗಳಲ್ಲಿ ರಾಜ್ಯದ ಚಿತ್ರಣವೇ ಬದಲಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಮುಖಂಡ ಹಾಗೂ ಜಿ.ಪಂ ಸದಸ್ಯ ಪುಟ್ಟರಾಜು, ಪಕ್ಷದ ಜಿಲ್ಲಾ ಖಜಾಂಚಿ ಡೆನ್ನಿ ಬರೋಸ್, ಸಂಘಟನಾ ಕಾರ್ಯದರ್ಶಿ ಎಂ.ಎ.ನಾಸಿರ್, ಜಿಲ್ಲಾ ಕಾರ್ಯದರ್ಶಿಗಳಾದ ಹನೀಫ್ ಮೋನು, ಬಿ.ಪಿ.ದೇವಪ್ಪಗೌಡ, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಇಸ್ಮಾಯಿಲ್, ಗ್ರಾ.ಪಂ ಸದಸ್ಯರುಗಳಾದ ಪ್ರೇಮ್ ಕುಮಾರ್, ದಿನೇಶ್ ಕುಮಾರ್, ಪ್ರಮುಖರಾದ ಅಲ್ತಫ್ ಹುಸೇನ್ ಮತ್ತಿತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.

error: Content is protected !!