ಗೋಣಿಕೊಪ್ಪದಲ್ಲಿ ನಿಸರ್ಗ ಜೇಸಿಸ್ ನಿಂದ ಭಾವೈಕ್ಯತಾ ದಿನಾಚರಣೆ

February 8, 2021

ಪೊನ್ನಂಪೇಟೆ, ಫೆ.8: ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್)ಘಟಕದ ವತಿಯಿಂದ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯನ್ನು ಆಚರಿಸಲಾಯಿತು. ಭಾರತೀಯ ಜೇಸಿಸ್ ನ ಕರೆಯ ಮೇರೆಗೆ ದೇಶದಾದ್ಯಂತ ಏಕಕಾಲದಲ್ಲಿ ನಡೆಯುವ ಭಾವೈಕ್ಯತಾ ದಿನವನ್ನು ಪೊನ್ನಂಪೇಟೆ ನಿಸರ್ಗ ಜೇಸಿಸ್ ವತಿಯಿಂದ ಗೋಣಿಕೊಪ್ಪಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.

ಪೊನ್ನಂಪೇಟೆ ನಿಸರ್ಗ ಜೇಸಿಸ್ ಘಟಕದ ಅಧ್ಯಕ್ಷರಾದ ಎಂ.ಎನ್. ವನಿತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಶಾಲಾ ಶಿಕ್ಷಕರಿಗೆ ಭಾವೈಕ್ಯತೆ ಕುರಿತ ಪ್ರತಿಜ್ಞಾ ವಿಧಿಯನ್ನು ಸಾಮೂಹಿಕವಾಗಿ ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವನಿತ್ ಕುಮಾರ್ ಅವರು, ಭಾವೈಕ್ಯತೆ ನೆಲೆಸಿದರೆ ಮಾತ್ರ ಸಮಾಜದಲ್ಲಿ ಶಾಂತಿ ಮೂಡಲು ಸಾಧ್ಯ. ಆದ್ದರಿಂದ ಭಾವೈಕ್ಯತೆ ಕುರಿತು ವಿದ್ಯಾರ್ಥಿಗಳಿಗೆ ಶಾಲಾ ದಿನಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಈ ಹಿನ್ನೆಲೆಯಲ್ಲಿ ಜೇಸಿಸ್ ವತಿಯಿಂದ ಭಾವೈಕ್ಯತೆಯ ದಿನಾಚರಣೆಯನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದ್ದು, ಇದಕ್ಕಾಗಿ ಶಾಲಾ-ಕಾಲೇಜುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಗೋಣಿಕೊಪ್ಪಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಬಿ.ಆರ್. ಸತೀಶ್ ಅವರು ಮಾತನಾಡಿ, ಭಾವೈಕ್ಯತೆ, ಸಮಾನತೆ, ಸಹೋದರತೆ ಮೊದಲಾದ ಮಹತ್ವದ ವಿಷಯದ ಕುರಿತು ಶಾಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಹೆಚ್ಚು ಫಲಪ್ರದವಾಗಿರುತ್ತದೆ. ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಶಾಲೆ ಸದಾ ಮುಕ್ತವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕಿ ಸರಸ್ವತಿ, ದೈಹಿಕ ಶಿಕ್ಷಕರಾದ ರಮಾನಂದ, ಪೊನ್ನಂಪೇಟೆ ನಿಸರ್ಗ ಜೀಸಸ್ ನ ಪೂರ್ವಾಧ್ಯಕ್ಷರಾದ, ಗೋಣಿಕೊಪ್ಪಲು ಮರ್ಚೆಂಟ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಈ. ಕಿರಣ್, ನಿಸರ್ಗ ಜೇಸಿ ಘಟಕಾಡಳಿತ ಮಂಡಳಿ ಸದಸ್ಯರಾದ ಎನ್. ಜಿ. ಸುರೇಶ್, ಎಚ್.ಆರ್. ಸತೀಶ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!