ಕೃಷಿಕರು ಮತ್ತು ಬಡವರ ಬಗ್ಗೆ ಪ್ರಧಾನಿ ಕಾಳಜಿ ತೋರಿದ್ದಾರೆ : ಕೊಡಗು ಬಿಜೆಪಿ ಶ್ಲಾಘನೆ

February 8, 2021

ಮಡಿಕೇರಿ ಫೆ.8 : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಆಧುನೀಕರಣ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಮುಂದುವರಿಕೆ ಮತ್ತು ಸುಮಾರು 80 ಕೋಟಿ ಬಡವರಿಗೆ ಕಡಿಮೆ ದರದಲ್ಲಿ ಪಡಿತರ ಮುಂದುವರಿಸುವ ಕುರಿತು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ರಾಜ್ಯಸಭೆಯಲ್ಲಿ ಮಾಡಿರುವ ಭಾಷಣ ಕೃಷಿಕ ವರ್ಗ ಹಾಗೂ ಬಡ ಜನರ ಬಗ್ಗೆ ಪ್ರಧಾನಿಗಿರುವ ಕಾಳಜಿಯನ್ನು ತೋರುತ್ತದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೂತನ ತಿದ್ದುಪಡಿ ಕಾಯ್ದೆ ಅನಿವಾರ್ಯವಾಗಿದ್ದು, ದೇಶವನ್ನು ಹಾಗೂ ಕೃಷಿ ಕ್ಷೇತ್ರವನ್ನು ಯಶಸ್ವಿಯಾಗಿ ಮುನ್ನಡೆಸಲು ವಿರೋಧ ಪಕ್ಷಗಳ ಸಹಕಾರ ಅಗತ್ಯವೆಂದು ಪ್ರಧಾನಮಂತ್ರಿಗಳು ಹೇಳಿದ್ದಾರೆ. ಇದನ್ನು ಇತರ ಎಲ್ಲಾ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
ಸಣ್ಣ ರೈತರ ಸುಧಾರಣೆಗಾಗಿ ಸಮರ್ಪಕವಾಗಿ ರಸಗೊಬ್ಬರ ಪೂರೈಕೆ, ದಾಖಲೆ ಪ್ರಮಾಣದ ಬೆಳೆ ಉತ್ಪಾದನೆಗೆ ಉತ್ತೇಜನ ಮತ್ತು ಖರೀದಿ ನಮ್ಮ ಸಾಧನೆಯಾಗಿದೆ ಎಂದು ಪ್ರಧಾನಮಂತ್ರಿಗಳು ವಿವರಿಸಿದ್ದಾರೆ. ಫಸಲ್ ಭೀಮ ಯೋಜನೆಯಲ್ಲಿ 90 ಸಾವಿರ ಕೋಟಿ ರೂ. ಹಣವನ್ನು ರೈತರಿಗಾಗಿ ನೀಡಲಾಗಿದೆ. ಪ್ರತಿ ರೈತನ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ ನೀಡಲಾಗಿದೆ.
ಮೀನುಗಾರರಿಗೂ ಈ ಸೌಲಭ್ಯವನ್ನು ವಿಸ್ತರಣೆ ಮಾಡುವ ಕುರಿತು ಪ್ರಧಾನಮಂತ್ರಿಗಳಿಂದ ಭರವಸೆ ದೊರೆತ್ತಿದೆ. ಕೃಷಿ ಮಾರುಕಟ್ಟೆಯ ನ್ಯೂನತೆಗಳನ್ನು ಸರಿಪಡಿಸುವ ದೃಷ್ಟಿಯಿಂದ ಈ ಹಿಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಕೃಷಿ ಸುಧಾರಣೆಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದರು. ಆದರೆ ಅದನ್ನು ಇಂದಿನ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದ್ದು, ಈ ಬದಲಾವಣೆಯನ್ನು ಪ್ರಧಾನಿ ನರೇಂದ್ರಮೋದಿ ಅವರು ನ್ಯಾಯಯುತವಾಗಿ ಸಮರ್ಥಿಸಿಕೊಂಡಿರುವುದು ಸ್ವಾಗತಾರ್ಹವೆಂದು ಮಹೇಶ್ ಜೈನಿ ತಿಳಿಸಿದ್ದಾರೆ.
ಜಲ, ಭೂಮಿ, ಆಕಾಶ, ಬಾಹ್ಯಾಕಾಶ ಸೇರಿದಂತೆ ಸರ್ವ ದಿಕ್ಕುಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ತಾಕತ್ತು ಭಾರತಕ್ಕಿದೆ. ರಾಷ್ಟ್ರೀಯತೆಯ ಮೇಲೆ ನಡೆಯುತ್ತಿರುವ ದಾಳಿಯ ವಿರುದ್ಧ ಸೂಕ್ತ ಪ್ರತ್ಯುತ್ತರ ನೀಡುವುದು ಅವಶ್ಯಕವಾಗಿದೆ ಎಂದು ಹೇಳಿರುವ ಪ್ರಧಾನಮಂತ್ರಿಗಳು ಮೊಬೈಲ್ ಉತ್ಪಾದನೆ ಮತ್ತು ಇಂಟೆರ್ ನೆಟ್ ಬಳಕೆ ವಿಚಾರದಲ್ಲೂ ದೇಶ ಎರಡನೇ ಸ್ಥಾನದಲ್ಲಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಕೋವಿಡ್ ಸಂಕಷ್ಟದ ದಿನಗಳ ಗೆಲುವು ದೇಶದ ಪ್ರಜೆಗಳ ಗೆಲುವು ಎಂದು ಪ್ರಧಾನಿ ನರೇಂದ್ರಮೋದಿ ಅವರು ಬಣ್ಣಿಸಿದ್ದು, ಇದು ಪರಿಣಾಮಕಾರಿ ಮತ್ತು ಸಮಯೋಚಿತ ಭಾಷಣವಾಗಿದೆ ಎಂದು ಮಹೇಶ್ ಜೈನಿ ಅಭಿಪ್ರಾಯಪಟ್ಟಿದ್ದಾರೆ.
ವಿರೋಧ ಪಕ್ಷಗಳು ವಿರೋಧಿಸುವುದಕ್ಕಾಗಿಯೇ ಎಲ್ಲಾ ಜನಪರ ನಿರ್ಧಾರಗಳÀನ್ನು ವಿರೋಧಿಸುವ ಬದಲು ದೇಶದ ಅಭ್ಯುದಯದ ದೃಷ್ಟಿಯಿಂದ ಸರ್ಕಾರದೊಂದಿಗೆ ಕೈಜೋಡಿಸಲಿ ಎಂದು ಹೇಳಿದ್ದಾರೆ.

error: Content is protected !!