ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿ : ಹಿಮಾನಿ ಹಿಟ್ಟರ್ಸ್ ಹೆಬ್ಬೆಟ್ಟಗೇರಿ ತಂಡಕ್ಕೆ ಜಯ

February 8, 2021

ಮಡಿಕೇರಿ ಫೆ. 8 : ಹೆಬ್ಬೆಟ್ಟಗೇರಿ ವಿಸ್ಮಯ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಲಾಗಿದ್ದ ಕೆ.ನಿಡುಗಣೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಿಮಾನಿ ಹಿಟ್ಟರ್ಸ್ ಹೆಬ್ಬೆಟ್ಟಗೇರಿ ತಂಡ ಗೆಲುವು ಸಾಧಿಸಿದರೆ, ಸ್ಪೂರ್ತಿ ಕ್ರಿಕೇಟರ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಹಿಮಾನಿ ಹಿಟ್ಟರ್ಸ್ ಹೆಬ್ಬೆಟ್ಟಗೇರಿ ಹಾಗೂ ಸ್ಪೂರ್ತಿ ಕ್ರಿಕೇಟರ್ಸ್ ತಂಡ ಪೈನಲ್ ಪ್ರವೇಶಿಸಿತ್ತು. ಮಂದ ಬೆಳಕಿನ ಹಿನ್ನೆಲೆ ಫೈನಲ್ ಪಂದ್ಯವನ್ನು 4 ಓವರ್‍ಗಳಿಗೆ ಸೀಮಿತಗೊಳಿಸಲಾಯಿತು.
ಟಾಸ್ ಗೆದ್ದ ಸ್ಪೂರ್ತಿ ಕ್ರಿಕೇಟರ್ಸ್ ತಂಡ ಕತ್ತಲಾಗುತ್ತಿದ್ದನ್ನು ಅರಿತಿದ್ದರೂ ಫೀಲ್ಡಿಂಗ್ ಆಯ್ದುಕೊಂಡು ಎಡವಟ್ಟು ಮಾಡಿಕೊಂಡಿತ್ತು. ಆ ಮೂಲಕ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಕೊಂಡಿತು. ಇದರ ಸಂಪೂರ್ಣ ಪ್ರಯೋಜನ ಪಡೆದುಕೊಂಡ ಹಿಮಾನಿ ಹಿಟ್ಟರ್ಸ್ ಹೆಬ್ಬೆಟ್ಟಗೇರಿ ತಂಡ 4 ಓವರ್‍ಗಳಲ್ಲಿ 4 ವಿಕೇಟ್ ನಷ್ಟಕ್ಕೆ 45 ರನ್ ಗುರಿ ನೀಡಿತು. ತಂಡದ ಪರ ನಾಯಕ ರಮೇಶ್ 2 ಸಿಕ್ಸರ್ ಹಾಗೂ 1 ಫೋರ್ ನೆರವಿನಿಂದ 13 ಬಾಲ್‍ಗಳಲ್ಲಿ 27 ರನ್ ಗಳಿಸಿದರು. ಸ್ಪೂರ್ತಿ ತಂಡದ ಪರ ದೀಪು 1 ಓವರ್‍ಗೆ 7 ರನ್ ನೀಡಿ 3 ವಿಕೇಟ್ ಕಬಳಿಸಿ ಗಮನ ಸೆಳೆದರು. ಗೆಲ್ಲಲು ಬೇಕಿದ್ದ 46ರ ರನ್ ಗುರಿ ಬೆನ್ನಟ್ಟಿದ ಸ್ಪೂರ್ತಿ ಕ್ರಿಕೇಟರ್ಸ್ ತಂಡ ಕತ್ತಲಿನಲ್ಲಿ ಬ್ಯಾಟ್ ಬೀಸಬೇಕಾಯಿತು. ತಂಡ 2.2 ಓವರ್‍ಗಳಲ್ಲಿ 7 ರನ್‍ಗೆ 3 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತ್ತು. ಹಿಮಾನಿ ಹಿಟ್ಟರ್ಸ್ ಹೆಬ್ಬೆಟ್ಟಗೇರಿ ತಂಡದ ರಮೇಶ್ ಪಂದ್ಯಪುರೋಷೋತ್ತಮ ಪ್ರಶಸ್ತಿ ಪಡೆದುಕೊಂಡರು.
4 ಪಂದ್ಯದಲ್ಲಿ 3 ಪಂದ್ಯವನ್ನು ಗೆಲ್ಲುವ ಮೂಲಕ 6 ಪಾಯಿಂಟ್‍ಗಳೊಂದಿಗೆ ಹಿಮಾನಿ ಹಿಟ್ಟರ್ಸ್ ಹೆಬ್ಬೆಟ್ಟಗೇರಿ ತಂಡ ನೇರವಾಗಿ ಫೈನಲ್ ಪ್ರವೇಶಿಸಿತ್ತು. 4ರಲ್ಲಿ 2 ಪಂದ್ಯವನ್ನು ಗೆದ್ದು 4 ಪಾಯಿಂಟ್ ಪಡೆದಿದ್ದ ಮಿಸ್ಟಿ ಲ್ಯಾಡ್ಸ್, ಸ್ಪೂರ್ತಿ ಕ್ರಿಕೇಟರ್ಸ್, ಕರವಲೆ ಬಾಯ್ಸ್ ಭಗವತಿ ತಂಡಗಳಲ್ಲಿ ರನ್‍ರೇಟ್ ಆಧಾರದಲ್ಲಿ ಮಿಸ್ಟಿ ಲ್ಯಾಡ್ಸ್ ಹಾಗೂ ಸ್ಪೂರ್ತಿ ಕ್ರಿಕೇಟರ್ಸ್ ತಂಡ ಸೆಮಿಫೈನಲ್ ಅವಕಾಶವನ್ನು ಪಡೆದುಕೊಂಡಿತ್ತು.
ಸೆಮಿಫೈನಲ್ ಪಂದ್ಯಾಟದಲ್ಲಿ ಟಾಸ್ ಗೆದ್ದ ಮಿಸ್ಟಿ ಲ್ಯಾಡ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಸ್ಪೂರ್ತಿ ಕ್ರಿಕೇಟರ್ಸ್ ತಂಡ 5 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿತು. ತಂಡದ ಪರ ನಾಯಕ ಸುನಿಲ್ ಆಕರ್ಷಕ 5 ಸಿಕ್ಸರ್ ಹಾಗೂ 1 ಫೋರ್ ನೆರವಿನಿಂದ 17 ಎಸೆತಗಳಲ್ಲಿ 42 ರನ್ ಗಳಿಸಿದರು. ಸವಾಲಿನ ಗುರಿ ಬೆನ್ನತ್ತಿದ ಮಿಸ್ಟಿ ಲ್ಯಾಡ್ಸ್ ತಂಡದ ಪರ ರಕ್ಷಿತ್ ಹಾಗೂ ಫ್ರಾನ್ಸಿಸ್ ಅವರ ಉತ್ತಮ ಬ್ಯಾಟಿಂಗ್ ಮಾಡಿದರಾದರೂ ಕೊನೆ ಕ್ಷಣದಲ್ಲಿ ಎಡವುವ ಮೂಲಕ ತಂಡ 6 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಸ್ಫೂರ್ತಿ ಕ್ರಿಕೇಟರ್ಸ್ ತಂಡ 6 ರನ್‍ಗಳ ರೋಚಕ ಜಯ ಪಡೆದು ಫೈನಲ್ ಪ್ರವೇಶಿಸಿತು.
ಪಂದ್ಯಾವಳಿಗೆ ಕೆ.ನಿಡುಗಣೆ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೊಕ್ಕಲೇರ ಕೆ. ಅಯ್ಯಪ್ಪ ಚಾಲನೆ ನೀಡಿದರು. ಇದೇ ಸಂದರ್ಭ ಅಯ್ಯಪ್ಪ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲ್ಲಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ತಾ.ಪಂ. ಸದಸ್ಯ ರಾಯ್‍ತಮ್ಮಯ್ಯ, ಕೊರೊನಾದಂತಹ ಕಠಿಣ ಪರಿಸ್ಥಿತಿಯ ನಡುವೆಯೂ ಹೆಬ್ಬೆಟ್ಟಗೇರಿಯ ವಿಸ್ಮಯ ಕ್ರಿಕೇಟರ್ಸ್ ತಂಡ ಪಂದ್ಯಾವಳಿ ಆಯೋಜಿಸಿ ಯುವಕರನ್ನು ಒಗ್ಗೂಡಿಸಲು ಪ್ರಯತ್ನಿಸಿರುವುದು ಉತ್ತಮ ಬೆಳವಣಿಗೆ. ಇಂತಹ ಗ್ರಾಮೀಣ ಕ್ರೀಡಾಕೂಟಗಳು ಇನ್ನಷ್ಟು ಆಯೋಜಿಸುವಂತಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೆ.ನಿಡುಗಣೆ ಗ್ರಾ.ಪಂ. ಸದಸ್ಯರಾದ ರೀಟಾ ಮುತ್ತಣ್ಣ, ಸತೀಶ್ ಪೂಜಾರಿ, ಪುಷ್ಪಲತಾ ಪ್ರೇಮ್‍ಕುಮಾರ್, ಪ್ರಮೀಳಾ ಸುರೇಶ್, ಕೆ.ಡಿ. ಪಾರ್ವತಿ, ಸನಿತಾ ಪ್ರಮೋದ್, ಪಿ.ಸಿ. ರಘು ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆ ನಳಿನಿ, ಸ್ಟಾಪ್ ನರ್ಸ್ ಉಷಾ, ಲ್ಯಾಬ್ ಟೆಕ್ನಿಷಿಯನ್ ನಂದಿತಾ ಗೊನ್ಸಾಲ್‍ವೆನ್ಸ್, ಹತ್ತನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಧನುಷ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಾಕ್ಸ್:
ಪಂದ್ಯಾವಳಿಯಲ್ಲಿ ಹಿಮಾನಿ ಹಿಟ್ಟರ್ಸ್ ತಂಡದ ಸ್ಟೀಪನ್ ಬೆಸ್ಟ್ ಬ್ಯಾಟ್ಸ್‍ಮೆನ್ ಹಾಗೂ ಮ್ಯಾನ್ ಆಪ್ ದಿ ಸೀರಿಸ್, ಸ್ಪೂರ್ತಿ ಕ್ರಿಕೇಟರ್ಸ್‍ನ ಸುನಿಲ್ ಬೆಸ್ಟ್ ಬೌಲರ್, ಮಿಸ್ಟಿ ಲ್ಯಾಡ್ಸ್ ತಂಡದ ನಯನ್ ಬೆಸ್ಟ್ ಫೀಲ್ಡರ್, ಮಿಸ್ಟಿ ಲ್ಯಾಡ್ಸ್ ತಂಡದ ಬೆಳ್ಯಪ್ಪ ಬೆಸ್ಟ್ ಕ್ಯಾಚ್, ಎಕ್ಸ್ ಲಯನ್ಸ್ ತಂಡದ ರಜಿತ್ ಮೋಸ್ಟ್ ವ್ಯಾಲ್ಯೂಬೇಲ್ ಪ್ಲೇಯರ್ ಹಾಗೂ ಸ್ಪೂರ್ತಿ ಕ್ರಿಕೇಟರ್ಸ್ ತಂಡದ ತೇಜಸ್ ಅಪ್‍ಕಮಿಂಗ್ ಪ್ಲೇಯರ್ ಪ್ರಶಸ್ತಿಗಳನ್ನು ಪಡೆದರು. ಪ್ರಥಮ ಸ್ಥಾನ ಪಡೆದ ತಂಡಕ್ಕೆ 15,000 ನಗದು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 10,000 ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಯಿತು.

error: Content is protected !!