ಕೊಡಗು ಗೌಡ ವಿದ್ಯಾ ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ – ಸಾಧಕರಿಗೆ ಸನ್ಮಾನ

February 8, 2021

ಕೊಡಗು ಗೌಡ ವಿದ್ಯಾ ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ – ಸಾಧಕರಿಗೆ ಸನ್ಮಾನ

ಮಡಿಕೇರಿ ಫೆ. 8 : ಪ್ರಸ್ತುತ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸಂದರ್ಭದಲ್ಲಿ ಗೌಡ ವಿದ್ಯಾಸಂಘ ಯಾವುದಾದರೂ ಒಂದು ಶಾಲೆಯನ್ನು ದತ್ತು ತೆಗೆದುಕೊಂಡು ಬೆಳೆಸುವ ಮೂಲಕ ಶಿಕ್ಷಣವನ್ನು ಉತ್ತೇಜಿಸುವಂತಾಗಬೇಕೆಂದು ಬೆಂಗಳೂರಿನ ಉದ್ಯಮಿ ಹೊಸೂರು ಶಿವರಾಮ್ ಜೋಯಪ್ಪ ಸಲಹೆ ನೀಡಿದರು.
ಕೊಡಗು ಗೌಡ ವಿದ್ಯಾ ಸಂಘದಿಂದ ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಾಲೆಯನ್ನು ದತ್ತು ಪಡೆದು ತಜ್ಞರಿಂದ ವೃತ್ತಿ ಶಿಕ್ಷಣ ತರಬೇತಿ ಇತ್ಯಾದಿಗಳನ್ನು ನೀಡುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸುವಂತಾಗಬೇಕೆಂದು ಅವರು ಕಿವಿಮಾತು ಹೇಳಿದ ಅವರು, ಪ್ರತಿಭಾ ಪುರಸ್ಕಾರಕ್ಕೆ ವೈಯಕ್ತಿಕವಾಗಿ ಪ್ರತಿ ಬಾರಿಯೂ ಧನ ಸಹಾಯ ಮಾಡುವುದಾಗಿ ಹೇಳಿದರು.
ಕಾರ್ಯಕ್ರಮವನ್ನು ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೋಳ್‍ಮಾಡನ ಎ. ರಾಮಚಂದ್ರ, ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಅವರವರ ಬಗ್ಗೆ ಸ್ವಯಂ ನಂಬಿಕೆ ಇರಬೇಕು. ಗುರುಹಿರಿಯರನ್ನು ಗೌರವಿಸುವುದರ ಜೊತೆಗೆ ಬದುಕಲ್ಲಿ ಏನಾದರೊಂದು ಸಾಧನೆ ಮಾಡುವ ಪಣ ತೊಡಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ, ಭಾಗಮಂಡಲ ಪದವಿಪೂರ್ವ ಕಾಲೇಜನ್ನು ದತ್ತು ತೆಗೆದುಕೊಳ್ಳುವ ತೀರ್ಮಾನ ಮಾಡಲಾಗಿತ್ತು. ಆದರೆ ಆಗಲಿಲ್ಲ. ಮುಂಬರುವ ದಿನಗಳಲ್ಲಿ ವಿದ್ಯಾಸಂಸ್ಥೆ ನಡೆಸುವ ಅಭಿಲಾಷೆ ಇದೆ ಎಂದರು.
ಸಂಘವು ಮೈಸೂರಿನಲ್ಲಿ ವಿದ್ಯಾರ್ಥಿ ನಿಲಯವನ್ನು ಹೊಂದಿದ್ದು, ಕಳೆದ ವರ್ಷ ಇಬ್ಬರು ವಿದ್ಯಾರ್ಥಿಗಳಿಗೆ ಹಾಗೂ ಈ ಬಾರಿ ಮೂವರು ವಿದ್ಯಾರ್ಥಿಗಳಿಗೆ ಉಚಿತ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ 25 ಬಡ ವಿದ್ಯಾರ್ಥಿಗಳಿಗೆ ಉಚಿತ ವ್ಯವಸ್ಥೆ ಮಾಡವ ಉದ್ದೇಶವಿದೆ ಎಂದರು.

ವೇದಿಕೆಯಲ್ಲಿ ಕರ್ನಾಟಕ ಗೃಹಮಂಡಳಿಯ ನಿವೃತ್ತ ಸಹಾಯಕ ಕಂದಾಯ ಅಧಿಕಾರಿ ಪಟ್ಟಡ ಜಯರಾಮ್, ಮೈಸೂರಿನ ಸಹಾಯ ಸಂಚಾರಿ ಅಧೀಕ್ಷಕಿ ಪಾಣತ್ತಲೆ ಮಮತೆ ನಾಗೇಶ್ ಉಪಸ್ಥಿತರಿದ್ದರು. ಸಂಘದ ಖಜಾಂಚಿ ಕಟ್ಟೆಮನೆ ಸೋನಾಜಿತ, ನಿರ್ದೇಶಕರಾದ ಕೆದಂಬಾಡಿ ಕಾಂಚನ ಪರಿಚನ ಸತೀಶ್ ನಿರೂಪಿಸಿ, ಉಪಾಧ್ಯಕ್ಷ ಅಂಬೆಕಲ್ ನವೀನ್ ವಂದಿಸಿದರು.

error: Content is protected !!