ರಾಷ್ಟ್ರಪತಿಗಳ ಭೇಟಿ ಯಾವುದೇ ಭರವಸೆಯನ್ನು ಮೂಡಿಸಿಲ್ಲ : ಬ್ರಿಜೇಶ್ ಕಾಳಪ್ಪ ಟೀಕೆ

08/02/2021

ಮಡಿಕೇರಿ ಫೆ.8 : ಕೊಡಗು ಜಿಲ್ಲೆಗೆ ರಾಷ್ಟ್ರಪತಿಗಳು ಆಗಮಿಸಿದ ಸಂದರ್ಭ ವೀರಸೇನಾನಿ ಜನರಲ್ ತಿಮ್ಮಯ್ಯ ಮ್ಯೂಸಿಯಂ ಸ್ಥಾಪಿಸಲು ದಶಕಗಳವರೆಗೆ ಶ್ರಮಿಸಿದವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ರಾಷ್ಟ್ರಪತಿಗಳ ಭೇಟಿ ಜಿಲ್ಲೆಯ ಜನತೆಯಲ್ಲಿ ಯಾವುದೇ ಭರವಸೆಯನ್ನು ಮೂಡಿಸಿಲ್ಲವೆಂದು ಸುಪ್ರೀಂಕೋರ್ಟ್ ವಕೀಲ ಹಾಗೂ ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮ್ಯೂಸಿಯಂ ಉದ್ಘಾಟನೆಯ ಕ್ಷಣವನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡದ ಆಡಳಿತ ವ್ಯವಸ್ಥೆ ಜನರನ್ನು ಮನೆಯೊಳಗೇ ಇರುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಅಡಚಣೆ ಉಂಟು ಮಾಡಿರುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರಿಗೂ ಅವಕಾಶ ನೀಡದೆ ನಿರ್ಲಕ್ಷಿಸಲಾಗಿದೆ, ಕೊಡವರ ಸಾಂಪ್ರದಾಯಿಕ ಉಡುಗೆ, ತೊಡುಗೆಗಳಿಗೂ ಅಗತ್ಯ ಗೌರವ ದೊರೆಯಲಿಲ್ಲ ಎಂದು ಆರೋಪಿಸಿದ್ದಾರೆ.
ಕೊಡಗಿನವರ ಬೇಡಿಕೆಯಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡುವುದು, ನಿರಂತರ ಮೂರು ವರ್ಷಗಳಿಂದ ಸಂಭವಿಸಿದ ಪ್ರಾಕೃತಿ ವಿಕೋಪದಲ್ಲಿ ನೊಂದ ಜನರಿಗೆ ಸಾಂತ್ವನ ಹೇಳುವುದು, ಭಾರತೀಯ ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಕೊಡಗು ಮೂಲದ ಸೇನಾನಿಗಳನ್ನು ಸೈನ್ಯದ ಮುಖ್ಯಸ್ಥರ ಹುದ್ದೆಗೆ ಪರಿಗಣಿಸುವುದು, ಭಾರತೀಯ ಸೈನ್ಯದಲ್ಲಿ ಕೂರ್ಗ್ ರೆಜಿಮೆಂಟ್ ರಚಿಸುವುದು, 2026 ರಲ್ಲಿ ಡಿಲಿಮಿಟೇಶನ್‍ನ ಸಂದರ್ಭದಲ್ಲಿ ಕೊಡಗಿನÀ ಹಿತಾಸಕ್ತಿಗಳನ್ನು ರಕ್ಷಿಸುವುದು, ಸಂವಿಧಾನದ ವಿಧಿ 242 ರಡಿಯಲ್ಲಿ ಕೊಡಗಿಗೆ ಭದ್ರತೆಯನ್ನು ವಿಸ್ತರಿಸುವುದು, 342 ರಡಿಯಲ್ಲಿ ಕೊಡಗಿನ ಹಕ್ಕುಗಳನ್ನು ಸ್ಥಾಪಿಸುವುದು ಸೇರಿದಂತೆ ಕೊಡಗಿನ ಜನರ ನಿರೀಕ್ಷೆಗಳಿಗೆ ಪೂರಕವಾಗಿ ರಾಷ್ಟ್ರಪತಿಗಳಿಂದ ಯಾವುದೇ ಭರವಸೆಗಳು ದೊರೆಯದೆ ಇರುವುದು ಬೇಸರ ಮೂಡಿಸಿದೆ ಎಂದು ಬ್ರಿಜೇಶ್ ಕಾಳಪ್ಪ ತಿಳಿಸಿದ್ದಾರೆ.