ಕೊಡಗು ಜಿಲ್ಲೆಯಲ್ಲಿ ಕೋವಿಡ್ ಲಸಿಕೆ 2 ನೇ ಹಂತದ ಅಭಿಯಾನ ಆರಂಭ

February 8, 2021

ಮಡಿಕೇರಿ ಫೆ.8 : ಕೊಡಗು ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಫೆ.9 ರಿಂದ ಕೋವಿಡ್-19 ಲಸಿಕಾ ಅಭಿಯಾನ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಇತ್ತಿಚೆಗೆ ನಡೆದ ವಿಡಿಯೋ ಸಂವಾದದಲ್ಲಿ ಕಂದಾಯ ಇಲಾಖೆ, ಪಂಚಾಯತ್ ರಾಜ್, ಪೋಲಿಸ್ ಇಲಾಖೆಯ ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ನಗರಸಭೆ, ಮತ್ತು ಪಟ್ಟಣ ಪಂಚಾಯತ್ ಪೌರಕಾರ್ಮಿಕರಿಗೆ ಲಸಿಕೆಯನ್ನು ನೀಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ವಿವರ ಇಂತಿದೆ:-ಜಿಲ್ಲಾ ಪಂಚಾಯತ್ 80, ಮಡಿಕೇರಿ ಗ್ರಾ.ಪಂ. 182, ಸೋಮವಾರಪೇಟೆ ತಾ. ಗ್ರಾಮ ಪಂಚಾಯತ್ 501, ವಿರಾಜಪೇಟೆ ತಾಲ್ಲೂಕು ಗ್ರಾಮ ಪಂಚಾಯತ್ 291, ಮಡಿಕೇರಿ ತಾಲ್ಲೂಕು ಪಂಚಾಯತ್ 77, ಸೋಮವಾರಪೇಟೆ ತಾಲ್ಲೂಕು 17, ವಿರಾಜಪೇಟೆ ತಾಲ್ಲೂಕು ಪಂಚಾಯತ್ 25, ಒಟ್ಟು 1173 ಮಂದಿಗೆ, ಹಾಗೆಯೇ ಕಂದಾಯ ಇಲಾಖೆಯ ಮಡಿಕೇರಿ ತಾಲ್ಲೂಕಿನ 107, ಸೋಮವಾರಪೇಟೆ ತಾ. 86, ವಿರಾಜಪೇಟೆ ತಾಲ್ಲೂಕು 87 ಒಟ್ಟು 280 ಫಲಾನುಭವಿಗಳಿದ್ದಾರೆ. ಪೌರಕಾರ್ಮಿಕರು 329, ಪೊಲೀಸರು 1,344, ಸೇರಿ 1,673. ಒಟ್ಟು 3126 ಫಲಾನುಭವಿಗಳಿದ್ದು, ಇವರಿಗೆ ಲಸಿಕೆಯನ್ನು ನೀಡಲು ಜಿಲ್ಲಾ ಆಸ್ಪತ್ರೆ, ಮಡಿಕೇರಿ, ತಾಲ್ಲೂಕು ಆಸ್ಪತ್ರೆ, ಸೋಮವಾರಪೇಟೆ, ವಿರಾಜಪೇಟೆ, ಸಮುದಾಯ ಆರೋಗ್ಯ ಕೇಂದ್ರಗಳಾದ ನಾಪೊಕ್ಲು, ಕುಶಾಲನಗರ, ಶನಿವಾರಸಂತೆ, ಸಿದ್ದಾಪುರ, ಪಾಲಿಬೆಟ್ಟ, ಗೋಣಿಕೊಪ್ಪ ಮತ್ತು ಕುಟ್ಟ ಕೇಂದ್ರಗಳಲ್ಲಿ ಕೋವಿಡ್ ಲಸಿಕೆಯನ್ನು ದಾಸ್ತಾನು ಇರಿಸಿ ಕ್ರಿಯಾ ಯೋಜನೆಯಂತೆ ಲಸಿಕೆ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಲಸಿಕೆಯನ್ನು ಎರಡು ಹಂತದಲ್ಲಿ ನೀಡಬೇಕಿದ್ದು, ಈಗಾಗಲೇ ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯ ಒಟ್ಟು 6560 ಫಲಾನುಭವಿಗಳಲ್ಲಿ 4,432 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದ್ದು, ಯಾವುದೇ ರೀತಿಯ ಅಡ್ಡ ಪರಿಣಾಮ ಕಂಡು ಬಂದಿರುವುದಿಲ್ಲ. ಒಟ್ಟು ಶೇ. 67.56 ಸಾಧನೆ ಸಾಧಿಸಿದ್ದು, ಜಿಲ್ಲೆಯು ರಾಜ್ಯದಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ. ಇತರೆ ಇಲಾಖೆಯ ಎಲ್ಲಾ ನೌಕರರು ಈ ಲಸಿಕೆಯನ್ನು ತಮ್ಮ ದೂರವಾಣಿ ಸಂಖ್ಯೆಗೆ ಸಂದೇಶ ಬಂದ ನಂತರ ಸಂದೇಶದಲ್ಲಿ ತಿಳಿಸಲಾಗಿರುವ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದುಕೊಳ್ಳಲು ಡಾ.ಕೆ.ಮೋಹನ್ ಅವರು ಕೋರಿದ್ದಾರೆ.

error: Content is protected !!